ಉಪೇಂದ್ರ ಅಭಿನಯ ಮತ್ತು ನಿರ್ದೇಶನದ UI ಚಿತ್ರ ಬಿಡುಗಡೆ ಆಗಿ ಐದೇ ದಿನಗಳ ಅಂತರದಲ್ಲಿ ಸುದೀಪ್ ಅಭಿನಯದ ‘ಮ್ಯಾಕ್ಸ್’ ಕೂಡ ಬಿಡುಗಡೆಯಾಗುತ್ತಿದೆ. ಇದರಿಂದ ಕ್ಲಾಶ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಇದರಿಂದ ಉಪೇಂದ್ರ ಅವರ ತಂಡಕ್ಕೆ ಯಾವುದೇ ತೊಂದರೆ ಇಲ್ಲ. ಅದು ದೊಡ್ಡ ಸಿನಿಮಾ. ಆ ಚಿತ್ರದ ಬಗ್ಗೆ ನಾವು ಹೆದರಬೇಕು’ ಎಂದು ಹೇಳಿದ್ದರು ಸುದೀಪ್. ‘UI ’ ಬಗ್ಗೆ ‘ಮ್ಯಾಕ್ಸ್’ಗೆ ಭಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ‘ಮ್ಯಾಕ್ಸ್’ ಗೆ ಹೆದರಿ ಕನಿಷ್ಠ ಆರು ಚಿತ್ರಗಳು ಮುಂದಕ್ಕೆ ಹೋಗಿವೆ.
ಹೌದು, ಡಿ. ೨೭ರಂದು ಯಾವುದೇ ದೊಡ್ಡ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎಂಬ ಕಾರಣಕ್ಕೆ, ಕೆಲವು ಚಿತ್ರತಂಡಗಳು ಆ ದಿನ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದವು. ಆದರೆ, ಯಾವಾಗ ಆ ದಿನ ‘ಮ್ಯಾಕ್ಸ್’ ಬರುತ್ತಾನೆ ಎಂದು ಗೊತ್ತಾಯಿತೋ, ಆಗ ಆ ಚಿತ್ರಗಳ ಪೈಕಿ ಒಂದೊಂದೇ ಮುಂದಿನ ವರ್ಷಕ್ಕೆ ಕಾಲ್ಕಿತ್ತಿವೆ.
ಡಿ. ೨೭ರಂದು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ರಾಜವರ್ಧನ್ ಅಭಿನಯದ ‘ಗಜರಾಮ’, ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’, ಜೆಪಿ ಅಭಿನಯದ ‘ಭಗೀರಥ’ ಮತ್ತು ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’ ಚಿತ್ರತಂಡಗಳು ಒಂದೆರಡು ತಿಂಗಳುಗಳ ಹಿಂದೆ ಅಽಕೃತವಾಗಿ ಘೋಷಿಸಿದ್ದವು. ಇದಲ್ಲದೆ, ಶರಣ್ ಅಭಿನಯದ ‘ಛೂ ಮಂತರ್’, ನಾಗಭೂಷಣ್ ಅಭಿನಯದ ‘ವಿದ್ಯಾಪತಿ’ ಮತ್ತು ಪ್ರಜ್ವಲ್ ಅಭಿನಯದ ‘ರಾಕ್ಷಸ’ ಚಿತ್ರಗಳು ಕೂಡ ಇದೇ ದಿನದಂದು ಬಿಡುಗಡೆಯಾಗುವುದಕ್ಕೆ ಕಣ್ಣಿಟ್ಟಿವೆ ಎಂಬ ಸುದ್ದಿ ಇತ್ತು. ಆದರೆ, ಈ ಚಿತ್ರತಂಡಗಳು ಚಿತ್ರಗಳ ಬಿಡುಗಡೆ ದಿನಾಂಕವನ್ನು ಘೋಷಿಸಿರಲಿಲ್ಲ. ಒಟ್ಟಾರೆ, ಒಂದಿಷ್ಟು ಚಿತ್ರತಂಡಗಳು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸುತ್ತಿರುವಾಗಲೇ, ‘ಮ್ಯಾಕ್ಸ್’ ಬಿಡುಗಡೆ ಘೋಷಣೆಯಾಗಿ, ಅವೆಲ್ಲದರ ಯೋಜನೆ ತಲೆಕೆಳಗಾಗಿದೆ.
ಮೊದಲು ಕ್ರಿಸ್ಮಸ್ ಸಂದರ್ಭದಲ್ಲಿ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರ ಬಿಡುಗಡೆ ಆಗಬೇಕಿತ್ತು. ಈ ಕುರಿತು ಕೆಲವು ತಿಂಗಳುಗಳ ಹಿಂದೆಯೇ ಘೋಷಣೆಯಾಗಿತ್ತು. ಹಾಗೆಯೇ, ಧ್ರುವ ಸರ್ಜಾ ಅಭಿನಯದ ‘ಕೆಡಿ-ದಿ ಡೆವಿಲ್’ ಚಿತ್ರವನ್ನೂ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದರು. ಆದರೆ, ಎರಡೂ ಚಿತ್ರಗಳ ಚಿತ್ರೀಕರಣ ಅಂದುಕೊಂಡಂತೆ ಇನ್ನೂ ಮುಗಿದಿಲ್ಲ. ಅದೇ ಕಾರಣಕ್ಕೆ, ಎರಡೂ ಚಿತ್ರಗಳು ಅನಿರ್ದಿಷ್ಟವಾಗಿ ಮುಂದೂಡ ಲ್ಪಟ್ಟಿವೆ. ಕ್ರಿಸ್ಮಸ್ ರಜೆಯ ಸಂದರ್ಭದಲ್ಲಿ ಖಾಲಿ ಇದ್ದ ಜಾಗವನ್ನು ‘UI ’ ಚಿತ್ರ ತುಂಬಿತು. ಚಿತ್ರವನ್ನು ಡಿ. ೨೦ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿತು.
‘UI’ ಚಿತ್ರ ಡಿ. ೨೦ರಂದು ಬಿಡುಗಡೆಯಾಗುತ್ತಿರುವುದರಿಂದ, ಡಿ. ೨೭ರಂದು ಖಾಲಿ ಇದೆ ಎಂಬ ಕಾರಣಕ್ಕೆ ‘ಗಜರಾಮ’, ‘ರುದ್ರ ಗರುಡ ಪುರಾಣ’, ‘ಭಗೀರಥ’, ‘ರಾಜು ಜೇಮ್ಸ್ ಬಾಂಡ್’ ಚಿತ್ರಗಳನ್ನು ಆ ದಿನ ಬಿಡುಗಡೆ ಮಾಡಲು ಆ ಚಿತ್ರತಂಡಗಳು ಘೋಷಿಸಿದವು. ಇನ್ನೂ ಕೆಲವು ಚಿತ್ರತಂಡಗಳು ನೋಡಿಕೊಂಡು, ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೆ ಕಾದಿದ್ದವು. ಅಷ್ಟರಲ್ಲಿ ಡಿ. ೨೫ಕ್ಕೆ ‘ಮ್ಯಾಕ್ಸ್’ ಘೋಷಣೆ ಮಾಡುವ ಮೂಲಕ ಎಲ್ಲರ ಯೋಚನೆಗಳು ಕೂಡ ತಲೆ ಕೆಳಗಾಗಿವೆ. ಡಿ. ೨೫ಕ್ಕೆ ‘ಮ್ಯಾಕ್ಸ್’ ಬರುತ್ತಿರುವುದರಿಂದ ಆ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳು ಸಿಗುತ್ತಿವೆ. ಹೀಗಿರುವಾಗ, ತಮಗೆ ಚಿತ್ರಮಂದಿರಗಳ ಸಮಸ್ಯೆ ಎದುರಾಗುತ್ತವೆ, ಜೊತೆಗೆ ದೊಡ್ಡ ಚಿತ್ರವೊಂದರ ಎದುರು ಬಂದರೆ, ಪ್ರೇಕ್ಷಕರ ಗಮನ ಸಹಜವಾಗಿಯೇ ದೊಡ್ಡ ಚಿತ್ರದ ಮೇಲೆಯೇ ಇರುತ್ತದೆ ಎಂಬ ಕಾರಣಕ್ಕೆ, ಆರೂ ಚಿತ್ರಗಳು ಮುಂದಕ್ಕೆ ಹೋಗಿವೆ.
ಈ ಪೈಕಿ, ‘ಛೂ ಮಂತರ್’ ಚಿತ್ರವನ್ನು ಜನವರಿ ೧೦ಕ್ಕೆ ಮುಂದೂಡಲಾಗಿದೆ. ‘ರುದ್ರ ಗರುಡ ಪುರಾಣ’ ಚಿತ್ರವನ್ನು ಜನವರಿ ೨೪ಕ್ಕೆ ಮುಂದೂಡಲಾಗಿದೆ.
ಮಿಕ್ಕ ಚಿತ್ರಗಳ ಹೊಸ ಬಿಡುಗಡೆ ದಿನಾಂಕಗಳು ಇನ್ನಷ್ಟೇ ಘೋಷಣೆಯಾಗಬೇಕಿವೆ. ‘UI ’ ಗೆ ನಾವು ಹೆದರಬೇಕು ಎಂದಿದ್ದ ಸುದೀಪ್, ತಮ್ಮ ಚಿತ್ರವನ್ನು ಧೈರ್ಯವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಹೆದರಿಕೊಂಡು ಬೇರೆ ಚಿತ್ರಗಳು ಮುಂದಕ್ಕೆ ಹೋಗಿ