Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ಬಿ. ಸರೋಜಾದೇವಿ ಅವರಿಗೆ ಚಿತ್ರರಂಗದಿಂದ ಭಾವಪೂರ್ಣ ಶ್ರದ್ಧಾಂಜಲಿ

ಕಳೆದ ತಿಂಗಳು ನಿಧನರಾದ ಹಿರಿಯ ನಟಿ, ‘ಅಭಿನಯ ಸರಸ್ವತಿ’, ಪದ್ಮಭೂಷಣ ಡಾ. ಬಿ. ಸರೋಜಾದೇವಿ ಅವರ ಆತ್ಮಕ್ಕೆ ಶಾಂತಿ ಕೋರಲು ಇತ್ತೀಚಿಗೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಈ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಮುಂತಾದ ಚಿತ್ರರಂಗದ ಸಂಘಟನೆಗಳಿಂದ ಆಯೋಜನೆ ಮಾಡಲಾಗಿತ್ತು. ಸರೋಜಾದೇವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಸರೋಜಾದೇವಿ ಅವರು ನಡೆದು ಬಂದ ದಾರಿಯ ವಿಡಿಯೋ ಪ್ರದರ್ಶನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಟ-ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ‘ಈ ಕಾರ್ಯಕ್ರಮವನ್ನು ಕಲಾವಿದರ ಸಂಘದಲ್ಲಿ ನಡೆಸಲು ಕಾರಣವಿದೆ. ಈ ಕಟ್ಟಡ ಆಗಲು ಸರೋಜಮ್ಮನವರ ಶ್ರಮ ಕೂಡ ತುಂಬಾ ಇದೆ. ಇಡೀ ಚಿತ್ರರಂಗ ಒಂದು ಕುಟುಂಬವಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ಬೇರೆಬೇರೆ ಚಿತ್ರರಂಗದಿಂದ ನಟರಾದ ನಾಸರ್, ಕಲಾವತಿ ಆಗಮಿಸಿದ್ದಾರೆ. ಕಲಾವಿದರ ಭವನ ಕಟ್ಟುವುದು ರಾಜಕುಮಾರ್ ಅವರ ಕನಸಾಗಿತ್ತು. ಅದನ್ನು ಅಂಬರೀಶ್ ಅವರು ನನಸು ಮಾಡಿದರು. ಈ ಭವನ ಕಟ್ಟಲು ಸರೋಜಾದೇವಿ ಅವರು ಅಧ್ಯಕ್ಷರಾಗಿದ್ದರು’ ಎಂದು ತಮ್ಮ ಹಾಗೂ ಸರೋಜಾದೇವಿ ಅವರ ಒಡನಾಟ ನೆನೆದು ಬಾವುಕರಾದರು.

ನಂತರ ಮಾತನಾಡಿದ ಸುಮಲಾತಾ ಅಂಬರೀಶ್, ‘ಈ ಭವನ ಮಾಡಲು ರಾಜಕುಮಾರ್ ಹಾಗೂ ಅಂಬರೀಶ್ ಅವರಂತೆಯೇ ಸರೋಜಾ ದೇವಿ ಅವರ ಶ್ರಮ ಕೂಡ ಇದೆ. ಇಂತಹ ಭವನ ಇಡೀ ದೇಶದಲ್ಲೇ ಇಲ್ಲ. ಇಂತಹ ಭವನವನ್ನು ಕಲಾವಿದರು ಚನ್ನಾಗಿ ಬಳಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು’ ಎಂದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಶ‍್ರೀನಿವಾಸಮೂರ್ತಿ, ನಾಜರ್‍, ಅನು ಪ್ರಭಾಕರ್, ರಘು ಮುಖರ್ಜಿ, ‘ನೆನಪಿರಲಿ’ ಪ್ರೇಮ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ರಾಮಕೃಷ್ಣ, ಗಿರಿಜಾ ಲೋಕೇಶ್ ಮುಂತಾದವರು ಭಾಗವಹಿಸಿ ಅನುಭವ ಹಂಚಿಕೊಂಡರು.

Tags:
error: Content is protected !!