ರಕ್ಷಿತಾ ಪ್ರೇಮ್ ಸಹೋದರ ರಾಣ, ‘ಏಳುಮಲೆ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಈಗಾಗಲೇ ಗೊತ್ತಿರದೆ. ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಏಕ್ ಲವ್ ಯಾ’ ಚಿತ್ರದ ನಂತರ ರಾಣ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದು. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಪುನೀತ್ ರಂಗಸ್ವಾಮಿ ನಿರ್ದೇಶನ ಮಾಡಿರುವ ಈ ಚಿತ್ರವು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸೆ..05ರಂದು ಬಿಡುಗಡೆಯಾಗುತ್ತಿದೆ.
ತರುಣ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಜೊತೆಗೆ ನಿರ್ಮಿಸುತ್ತಿರುವ ‘ಏಳುಮಲೆ’ ಚಿತ್ರವು ತನ್ನ ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಕರ್ನಾಟಕ-ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ ‘ಏಳುಮಲೆ’ ಸಿನಿಮಾದಲ್ಲಿ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ಮೈಸೂರಿನ ಹುಡುಗಿ ಪ್ರಿಯಾ ಆಚಾರ್ ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದು ಸಂಘರ್ಷದ ಕಥೆಯಲ್ಲ. ಇದೊಂದು ಪ್ರೇಮಕಥೆ. 90ರ ದಶಕದ ಕಾಲಘಟ್ಟದಲ್ಲಿ ನಡೆದ ಕಥೆಯನ್ನು ಈ ಚಿತ್ರ ಹೇಳುತ್ತದೆ. ಚಿತ್ರಕ್ಕೆ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ’ ಎಂಬ ಟ್ಯಾಗ್‍ಲೈನ್ ನೀಡಲಾಗಿದೆ. ಈ ಚಿತ್ರವು ಕನ್ನಡವಲ್ಲದೆ ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.
‘ಏಳುಮಲೆ’ ಚಿತ್ರದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಡಿ ಇಮ್ಮನ್ ಸಂಗೀತ ಚಿತ್ರಕ್ಕಿದೆ.





