Mysore
27
scattered clouds

Social Media

ಗುರುವಾರ, 10 ಏಪ್ರಿಲ 2025
Light
Dark

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್‍ ಮೊಮ್ಮಗ; ‘ನಿಂಬಿಯಾ ಬನಾದ ಮ್ಯಾಗ’ ಟ್ರೇಲರ್‍ ಬಿಡುಗಡೆ

ಡಾ. ರಾಜಕುಮಾರ್‍ ಅವರ ಮೊಮ್ಮಕ್ಕಳು ಚಿತ್ರರಂಗದಲ್ಲಿ ನಟ-ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಈಗ ಈ ಸಾಲಿಗೆ ಷಣ್ಮುಖ ಸಹ ಸೇರಿದ್ದಾರೆ. ಡಾ. ರಾಜಕುಮಾರ್‍ ಮಗಳು ಲಕ್ಷ್ಮೀ ಮತ್ತು ಗೋವಿಂದರಾಜ್‍ ಅವರ ದಂಪತಿಯ ಮಗನಾದ ಷಣ್ಮುಖ, ಇದೀಗ ಚಿತ್ರವೊಂದರಲ್ಲಿ ನಟಿಸಿದ್ದು, ಆ ಚಿತ್ರ ಇದೇ ಏಪ್ರಿಲ್‍.04ರಂದು ಬಿಡುಗಡೆ ಆಗುತ್ತಿದೆ.

ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಷಣ್ಮುಖ ಅವರ ತಂದೆ-ತಾಯಿ ಗೋವಿಂದರಾಜ್‍ ಹಾಗೂ ಲಕ್ಷ್ಮೀ ಟ್ರೇಲರ್ ಅನಾವರಣ ಮಾಡಿ ಮಗನ ಚಿತ್ರಕ್ಕೆ ಶುಭ ಕೋರಿದರು‌. ಹಿರಿಯ ನಿರ್ಮಾಪಕ ಎಸ್‌‌.ಎ. ಚಿನ್ನೇಗೌಡ, ಡಾ. ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಚಿತ್ರವನ್ನು ವಿ. ಮಾದೇಶ್ ನಿರ್ಮಿಸಿದ್ದು, ಅಶೋಕ್ ಕಡಬ ನಿರ್ದೇಶನ ಮಾಡಿದ್ದಾರೆ.

‘ನಿಂಬಿಯಾ ಬನದ‌ ಮ್ಯಾಗ’ ಚಿತ್ರದ ಕುರಿತು ಮಾತನಾಡಿದ ಷಣ್ಮುಖ,‌ ‘ಇದು ನನ್ನ ಅಭಿನಯದ ಮೊದಲ ಚಿತ್ರ. ಇದು ಮಲೆನಾಡಿನ ಮಡಿಲಲ್ಲಿ ನಡೆಯುವ ಸುಂದರ ದೃಶ್ಯ ಕಾವ್ಯ. ಅಮ್ಮ‌-ಮಗನ ಬಾಂಧವ್ಯದ ಕಥೆ. ನಮ್ಮ ಕುಟುಂಬ ಸದಸ್ಯರೆಲ್ಲರು ನನ್ನ ಚಿತ್ರಕ್ಕೆ ಶುಭ ಕೋರಿದ್ದಾರೆ’ ಎಂದರು.

‘ಮಲೆನಾಡ ಭಾಗದ ಬೆಂಗಾಡಿಯಲ್ಲಿ ದೊಡ್ಡ ಮನೆಯ ನಾಲ್ಕು ವರ್ಷದ ಮಗು ಅಚ್ಚು (ಅಚ್ಚಣ್ಣ) ಕಾಣೆಯಾಗಿದೆ. ಆ ತಾಯಿ ಇಂದಲ್ಲ ನಾಳೆ ಮಗು ಬಂದೆ ಬರುತ್ತದೆ ಎನ್ನುವ ನಂಬಿಕೆಯಲ್ಲೇ ಕಾಯುತ್ತಿದ್ದಾಳೆ. ಕಾಲ ಉರುಳಿದಂತೆ 25 ವರ್ಷದ ನಂತರ ದೊಡ್ಡಮನೆಯಲ್ಲಿ ಸಂತೋಷದ ವಾತಾವರಣ. ಕಾರಣ ಕಳೆದು ಹೋದ ಮಗ ಅಚ್ಚಣ್ಣ ಬಂದಿದ್ದಾನೆ. ಮುಂದೆ ಏನು ಎಂಬುದು ‘ನಿಂಬಿಯಾ ಬನಾದ ಮ್ಯಾಗ – ಪೇಜ್ 1’ ಚಿತ್ರದ ಕಥೆ’ ಎನ್ನುತ್ತಾರೆ ಅಶೋಕ್‍ ಕಡಬ.

‘ನಿಂಬಿಯಾ ಬನಾದ ಮ್ಯಾಗ – ಪೇಜ್ 1’ ಮುಂದುವರೆದ ಭಾಗವೂ ಮುಂದಿನ ದಿನಗಳಲ್ಲಿ ಬರುತ್ತದಂತೆ. ಷಣ್ಮುಖಗೆ ನಾಯಕಿಯಾಗಿ ತನುಶ್ರೀ ನಟಿಸಿದ್ದಾರೆ. ವಿಶೇಷವೆಂದರೆ, ‘ಮೇಘಮಾಲೆ’ ಖ್ಯಾತಿಯ ಸುನಾದ್ ರಾಜ್ ಸುಮಾರು 25 ವರ್ಷಗಳ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಆರೋನ್ ಕಾರ್ತಿಕ್ ಸಂಗೀತ ನೀಡಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಈ ಚಿತ್ರಕ್ಕಿದೆ.

Tags: