Mysore
17
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮನಸ್ಸಿಗೆ ನೋವಾಗುವಂತೆ ಮಾಡಬೇಡಿ; ಅಭಿಮಾನಿಗಳಲ್ಲಿ ಯಶ್ ಮನವಿ

ನಟ ಯಶ್‍, ಇದೇ ಜನವರಿ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದನ್ನು ಯಶ್‍ ನಿಲ್ಲಿಸಿದ್ದಾರೆ. ಈ ವರ್ಷವೂ ಅದನ್ನು ಯಶ್‍ ಮುಂದುವರೆಸಿದ್ದು, ಈ ಕುರಿತು ಅಭಿಮಾನಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಈ ಬಾರಿ ಮನಸ್ಸಿಗೆ ನೋವಾಗುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಅದಕ್ಕೆ ಕಾರಣವೂ ಇದೆ. ಕಳೆದ ವರ್ಷ ಯಶ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ಗದಗ ಜಿಲ್ಲೆಯಲ್ಲಿ ಯಶ್‍ ಅವರ ಮೂವರು ಅಭಿಮಾನಿಗಳು ತಮ್ಮ ಮೆಚ್ಚಿನ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫ್ಲೆಕ್ಸ್ ಕಟ್ಟುವುದಕ್ಕೆ ಹೋಗಿ, ಕರೆಂಟ್‍ ಹೊಡೆಸಿಕೊಂಡು ನಿಧನರಾಗಿದ್ದರು. ಮೂವರು ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಬೇಸರಗೊಂಡಿದ್ದ ಯಶ್‍, ಮೃತರ ಮನೆಗಳಿಗೆ ಹೋಗಿ ಸಂತಾಪ ವ್ಯಕ್ತಪಡಿಸಿ ಬಂದಿದ್ದರು. ನಂತರ ಮಾತನಾಡಿದ್ದ ಅವರು, ‘ನೀವು ನನ್ನ ನಿಜವಾದ ಅಭಿಮಾನಿಯಾಗಿದ್ದರೆ, ಇದ್ದಲ್ಲಿಂದಲೇ ಹಾರೈಸಿ. ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಹೇಳಿದ್ದರು.

ಈಗ ಅವರು ತಮ್ಮ ಹುಟ್ಟುಹಬ್ಬಕ್ಕೆ ಇನ್ನೂ ಒಂದು ವಾರವಿದೆ ಎನ್ನುವಾಗಲೇ, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳುವುದರ ಜೊತೆಗೆ, ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ಮಾಡಿ ಎಂದು ಹೇಳಿದ್ದಾರೆ.

‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫೆಕ್ಸ್, ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ’ ಎಂದು ಯಶ್‍ ಬರೆದುಕೊಂಡಿದ್ದಾರೆ.

ಈ ಬಾರಿಯಾದರೂ ಯಶ್‍ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Tags:
error: Content is protected !!