ಕಳೆದ ವರ್ಷ ಬಿಡುಗಡೆಯಾಗಿ, ಇಡೀ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡಿದ ‘ಪುಷ್ಪ 2’ ಚಿತ್ರದ ನಂತರ ಅಲ್ಲು ಅರ್ಜುನ್ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬ ಕುತೂಹಲ ಇತ್ತು. ಆ ಕುತೂಹಲ ಕೊನೆಗೂ ತಣಿದಿದ್ದು, ಅರ್ಜುನ್ ಅಭಿನಯದ ಚಿತ್ರವನ್ನು ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.
ಹೌದು, ಈ ಹಿಂದೆ ‘ಜವಾನ್’, ‘ಬಿಗಿಲ್’, ‘ಮರ್ಸಲ್’, ‘ಥೇರಿ’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿರುವ ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಆರನೇ ಚಿತ್ರವಾಗಿದ್ದು, ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರವನ್ನು ದಕ್ಷಿಣ ಭಾರತದ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.
ಇದು ಅಲ್ಲು ಅರ್ಜುನ್ ಅಭಿನಯದ 22ನೇ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಎಎ22 ಎಂದು ಹೆಸರಿಡಲಾಗಿದೆ. ಹಿಂದೆಂದೂ ನೋಡಿರದ ವೈಜ್ಞಾನಿಕ ಆಕ್ಷನ್ ಚಿತ್ರ ಇದಾಗಿದ್ದು, ಭಾರತ ಮತ್ತು ಅಮೇರಿಕಾದ ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ಚಿತ್ರದ VFX ಕೆಲಸ ನಡೆಯುತ್ತಿದೆ.
AA22 ಚಿತ್ರದ ಘೋಷಣೆಯನ್ನು ಸನ್ ಪಿಕ್ಚರ್ಸ್ ಸಂಸ್ಥೆ ಅಧಿಕೃತಗೊಳಿಸಿದೆ. ಇತ್ತೀಚೆಗೆ ಅಲ್ಲು ಅರ್ಜನ್, ಚೆನ್ನೈನಲ್ಲಿರುವ ಸನ್ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಕಚೇರಿಯಲ್ಲಿ ನಿರ್ದೇಶಕ ಅಟ್ಲೀ ಮತ್ತು ನಿರ್ಮಾಪಕ ಕಲಾನಿಧಿ ಮಾರನ್ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರದ ಆರಂಭವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಆ ನಂತರ ಅರ್ಜುನ್ ಮತ್ತು ಅಟ್ಲಿ ಲಾಸ್ ಏಂಜಲೀಸ್‌ನಲ್ಲಿರುವ VFX ಸ್ಟುಡಿಯೋಗಳಿಗೆ ಭೇಟಿ ನೀಡಿ, ಹಾಲಿವುಡ್‌ನ ಹಲವಾರು ಹೆಸರಾಂತ ತಜ್ಞರೊಂದಿಗೆ ಚಿತ್ರದ ಕೆಲಸದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದ್ಯ ಚಿತ್ರದ ಘೋಷಣೆಯಾಗಿದ್ದು, ಇದೇ ವರ್ಷ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.





