ಶಂಕರ್ ನಿರ್ದೇಶನದ ಮತ್ತು ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಇಂಡಿಯನ್ 2’ ಬಿಡುಗಡೆಯಾಗಿದೆ. ಚಿತ್ರಕ್ಕೆ ಅಷ್ಟೇನೂ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಷ್ಟೇನೂ ಒಳ್ಳೆಯ ವಿಮರ್ಶೆಗಳು ಸಿಕ್ಕಿಲ್ಲ. ಹೀಗಿರುವಾಗಲೇ, ಚಿತ್ರದ ಮೊದಲ ದಿನದ ಗಳಿಕೆ ಹೊರಬಿದ್ದಿದ್ದು, ಸಿನಿಪಂಡಿತರು ಅಕ್ಷರಶಃ ಶಾಕ್ ಆಗಿದ್ದಾರೆ.
‘ಇಂಡಿಯನ್ 2’ ಚಿತ್ರದ ಬಗ್ಗೆ ಅದೆಷ್ಟೇ ನಿರೀಕ್ಷೆಗಳಿದ್ದರೂ, ಚಿತ್ರ ಅಷ್ಟೇನೂ ದೊಡ್ಡ ಓಪನಿಂಗ್ ಪಡೆದಿಲ್ಲ. ಇನ್ನು, ಚಿತ್ರದ ಮೊದಲ ದಿನದ ಗಳಿಕೆ ಹೊರಬಿದ್ದಿದ್ದು, ಚಿತ್ರವು 25.6 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ ತಮಿಳು ಅವತರಣಿಕೆಯಾದ ‘ಇಂಡಿಯನ್ 2’ ಚಿತ್ರವು 16.5 ಕೋಟಿ ರೂ ಸಂಗ್ರಹಿಸಿದರೆ, ತೆಲುಗು ಅವತರಣಿಕೆಯಾದ ‘ಭಾರತೀಯುಡು 2’ ಮತ್ತು ಹಿಂದಿಯ ‘ಹಿಂದುಸ್ಥಾನಿ 2’ ಚಿತ್ರವು 7.9 ಮತ್ತು 1.2 ಕೋಟಿ ರೂ. ಕ್ರಮವಾಗಿ ಸಂಗ್ರಹಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರವು ಮೊದಲ ದಿನ ಜಾಗತಿಕವಾಗಿ 191 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಅದರ ಕಾಲು ಭಾಗದ ಗಳಿಕೆಯನ್ನೂ ‘ಇಂಡಿಯನ್ 2’ ಮಾಡಲಿಲ್ಲ ಎಂದು ಹೇಳಲಾಗುತ್ತಿದೆ.
28 ವರ್ಷಗಳ ಹಿಂದೆ ಬಿಡುಗಡೆಯಾದ ‘ಇಂಡಿಯನ್’ ಚಿತ್ರದ ಮುಂದುವರೆದ ಭಾಗ ಈ ‘ಇಂಡಿಯನ್ 2’. ಆ ಚಿತ್ರ ಆಗಿನ ಕಾಲಕ್ಕೆ ದೊಡ್ಡ ಹಿಟ್ ಆಗಿತ್ತು. ಹಾಗಾಗಿಯೇ, ಅದರ ಮುಂದುವರೆದ ಭಾಗದ ಬಗ್ಗೆ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲಗಳಿದ್ದವು. ಚಿತ್ರವು ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಆದರೆ, ಚಿತ್ರಕ್ಕೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆಗಳು ಸಿಕ್ಕಿಲ್ಲ. ಚಿತ್ರವು ಅದ್ಧೂರಿಯಾಗಿ ಮೂಡಿಬಂದಿದೆಯಾದರೂ, ಕಥೆ ಅಂತ್ಯವಾಗಿಲ್ಲ. ಏಕೆಂದರೆ, ಚಿತ್ರ ಇನ್ನು ಮುಂದುವರೆಯಲಿದ್ದು, ‘ಇಂಡಿಯನ್ 2’ ಚಿತ್ರದ ಮುಂದುವರೆದ ಭಾಗವಾದ ‘ಇಂಡಿಯನ್ 3’ ಚಿತ್ರವು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.
ಈಗಾಗಲೇ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಏಕೆಂದರೆ, ‘ಇಂಡಿಯನ್ 3’ ಒಂದರ್ಥದಲ್ಲಿ ಪ್ರೀಕ್ವೆಲ್ ಸಹ ಹೌದು, ಸೀಕ್ವೆಲ್ ಸಹ ಹೌದು. ಚಿತ್ರವು, ‘ಇಂಡಿಯನ್ 1’ನ ಪ್ರೀಕ್ವೆಲ್ ಆದರೆ, ‘ಇಂಡಿಯನ್ 2’ನ ಸೀಕ್ವೆಲ್ ಆಗಿದೆ. ಚಿತ್ರದಲ್ಲಿ ಕಮಲ್ ಹಾಸನ್ ನಿರ್ವಹಿಸಿರುವ ವೀರಶೇಖರನ್ ಸೇನಾಪತಿ ಪಾತ್ರವು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸನ್ನಿವೇಶಗಳ ಜೊತೆಜೊತೆಗೆ, ಪ್ರಸಕ್ತ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸನ್ನಿವೇಶಗಳು ಸಹ ಇರಲಿವೆ.