‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರ ಬಿಡುಗಡೆಯಾಗಿ ಎರಡು ವಾರಗಳಾಗಿವೆ. ಮೊದಲ ಎರಡು ವಾರಗಳಿದ್ದ ಸದ್ದು ಕ್ರಮೇಣ ಮೂರನೆಯ ವಾರದಲ್ಲಿ ಕಡಿಮೆಯಾಗಿದೆ. ಯಾವುದೇ ಹಕ್ಕುಗಳು ಮಾರಾಟವಾಗದಿದ್ದರೂ ನಿರ್ಮಾಪಕರು ಹಾಕಿದ ದುಡ್ಡನ್ನು ವಾಪಸ್ಸು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಿರುವಾಗಲೇ, ‘ದುನಿಯಾ’ ವಿಜಯ್ ಅಭಿನಯದ ಹೊಸ ಚಿತ್ರ ಘೋಷಣೆಯಾಗಿದೆ. ಇದು ಅವರ ಅಭಿನಯದ 30ನೇ ಚಿತ್ರವಾಗಿದ್ದು, ಈ ಚಿತ್ರವನ್ನು ಅವರ ಶಿಷ್ಯ ವೆಟ್ರಿವೇಲ್ ಅಲಿಯಾಸ್ ತಂಬಿ ನಿರ್ದೇಶನ ಮಾಡುತ್ತಿದ್ದಾರೆ. ಈ ಕುರಿತು ಸೋಮವಾರ ಅಧಿಕೃತ ಘೋಷಣೆಯಾಗಿದ್ದು, ಹೊಸ ಪೋಸ್ಟರ್ ಸಹ ಬಿಡುಗಡೆ ಆಗಿದೆ.
ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ, ಅವರ ಹೊಸ ಚಿತ್ರದ ಘೋಷಣೆಯಾಗಿದ್ದು, ಸದ್ಯಕ್ಕೆ ವಿಕೆ30 ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದೆ. ಈ ಚಿತ್ರವನ್ನು ಅವರ ತಂಡದ ತಂಬಿ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಚಿತ್ರದ ಮೊದಲ ನೋಟ ಬಿಡುಗಡೆ ಆಗಿದೆ. ಇತ್ತೀಚೆಗೆ ನಡೆದ ‘ಭೀಮ’ ಚಿತ್ರದ ಸಂತೋಷಕೂಟದಲ್ಲೇ ವಿಜಯ್ ತಮ್ಮ ಮುಂದಿನ ಚಿತ್ರ ತಂಬಿಗೆ ಎಂದು ಹೇಳಿದ್ದರು. ಅದೀಗ ನಿಜವಾಗಿದೆ.
ಈ ಕುರಿತು ಮಾತನಾಡಿದ ವಿಜಯ್, ‘ನನ್ನನ್ನು ನಂಬಿ ಕೆಲವು ಹುಡುಗರು ಈ ಕ್ಷೇತ್ರಕ್ಕೆ ಬಂದಿದ್ದಾರೆ. ತಂಬಿ, ವೀರ, ಮೌರ್ಯ, ಡೆನ್ನಿಸ್, ಜೀವನ್ ಇವರೆಲ್ಲಾ ನನಗೆ ಅಣ್ಣನ ಸ್ಥಾನ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ನನ್ನ ನಂಬಿ ಬಂದವರು ಎರಡ್ಮೂರು ವರ್ಷಗಳಿಂದ ಕಾಯುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು. ಅವರಿಗೆ ಮೊದಲು ಸಿನಿಮಾ ಮಾಡುತ್ತೇನೆ. ಮೊದಲು ತಂಬಿ, ನಂತರ ವೀರನಿಗೆ ಸಿನಿಮಾ ಮಾಡುತ್ತೇನೆ. ಮೌರ್ಯನಿಗೂ ಕಥೆ ಬರೆಯೋಕೆ ಹೇಳಿದ್ದೇನೆ. ಒಬ್ಬರ ನಂತರ ಇನ್ನೊಬ್ಬರಿಗೆ ಚಿತ್ರ ಮಾಡುತ್ತೇನೆ’ ಎಂದಿದ್ದರು. ಅದಕ್ಕೆ ತಕ್ಕಂತೆ ತಂಬಿ ನಿರ್ದೇಶನದ ಚಿತ್ರದಲ್ಲಿ ಅವರು ಮೊದಲು ನಟಿಸುತ್ತಾರಂತೆ.
ಈ ಚಿತ್ರದ ನಿರ್ಮಾಪಕರ್ಯಾರು? ಅದು ಸದ್ಯಕ್ಕೆ ಗೊತ್ತಿಲ್ಲ. ಈ ವಿಷಯದ ಬಗ್ಗೆ ವಿಜಯ್ ಸಂತೋಷ ಕೂಟದಲ್ಲಿ ಹೇಳಿದ್ದರು. ತಮಗೆ ಯಾರು ಸ್ವಾತಂತ್ರ್ಯ ಕೊಡುತ್ತಾರೋ ಅವರಿಗೆ ಮೊದಲ ಆದ್ಯತೆ ಎಂದು ಹೇಳಿದ್ದರು. ಸದ್ಯಕ್ಕಂತೂ ಪೋಸ್ಟರ್‍ನಲ್ಲಿ ನಿರ್ಮಾಪಕರ ಹೆಸರು ನಮೂದಾಗಿಲ್ಲ. ಅಲ್ಲಿಗೆ ಚಿತ್ರಕ್ಕೆ ಇನ್ನೂ ನಿರ್ಮಾಪಕರು ಸಿಕ್ಕಿಲ್ಲ ಎಂದರ್ಥ. ಬಹುಶಃ ನಿರ್ಮಾಪಕರನ್ನು ಸೆಳೆಯುವದಕ್ಕೆಂದೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ಸಾಧ್ಯತೆಯೂ ಇದೆ.
ಇನ್ನು, ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ, ಯಾರೆಲ್ಲಾ ಕೆಲಸ ಮಾಡುತ್ತಾರೆ ಎಂಬುದು ಸಹ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಬರವಣಿಗೆ ಕೆಲಸ ಪ್ರಾರಂಭವಾಗಿದ್ದು, ಅದೊಂದು ಮಟ್ಟಕ್ಕೆ ಬಂದ ಮೇಲೆ, ಮಿಕ್ಕ ವಿಷಯಗಳು ಘೋಷಣೆಯಾಗುವ ಸಾಧ್ಯತೆ ಇದೆ.