ಈ ಸ್ವಾತಂತ್ರ್ಯ ದಿನದ ಪ್ರಯುಕ್ತ ಎರಡು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಿವೆ. ರಜನಿಕಾಂತ್ ಅಭಿನಯದ ‘ಕೂಲಿ’ ಮತ್ತು ಹೃತಿಕ್ ರೋಶನ್ ಮತ್ತು ಜ್ಯೂನಿಯರ್ NTR ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘ವಾರ್ 2’ ಚಿತ್ರವು ಗುರುವಾರ (ಆಗಸ್ಟ್ 14) ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಎರಡೂ ಚಿತ್ರಗಳು ಬಹುತಾರಾಗಣದ ಮತ್ತು ಬಹು ಬಜೆಟ್‍ನ ಚಿತ್ರಗಳಾಗಿದ್ದು, ಈ ಪೈಕಿ ‘ಕೂಲಿ’ ಚಿತ್ರವು ಮೊದಲ ದಿನದ ಗಳಿಕೆಯಲ್ಲಿ ‘ವಾರ್ 2’ ಚಿತ್ರವನ್ನು ಹಿಂದಿಕ್ಕಿದೆ.
‘ಕೂಲಿ’ ಚಿತ್ರದ ಮೊದಲ ದಿನದ ಗಳಿಕೆ 100 ಕೋಟಿ ರೂ. ದಾಟಲಿದೆ ಎಂದು ಮೊದಲೇ ಅಂದಾಜಿಸಲಾಗಿತ್ತು. ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದ ಮೊದಲ ದಿನದ ಗಳಿಕೆ 100 ಕೋಟಿ ರೂ. ಮೀರಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಮೊದಲ ದಿನ ಜಾಗತಿಕವಾಗಿ 151 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸ್ವತಃ ಚಿತ್ರ ನಿರ್ಮಿಸಿರುವ ಸನ್ ಪಿಕ್ಚರ್ಸ್ ಸಂಸ್ಥೆಯೇ ಅಧಿಕೃತವಾಗಿ ಘೋಷಿಸಿದೆ. ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್, ಶ್ರುತಿ ಹಾಸನ್, ಸತ್ಯರಾಜ್ ಮುಂತಾದವರು ನಟಿಸಿದ್ದು, ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿದ್ದಾರೆ.
ಇನ್ನು, ‘ವಾರ್ 2’ ಚಿತ್ರವು ಮೊದಲ ದಿನ 80 ಕೋಟಿ ರೂ.ನಷ್ಟು ಗಳಿಕೆ ಮಾಡಿದ್ದು, ಈ ಪೈಕಿ ಭಾರತದಲ್ಲಿ ಸುಮಾರು 52.5 ಕೋಟಿ ರೂ. ಗಳಿಕೆಯಾಗಿದೆ. ಮಿಕ್ಕಂತೆ ಹೊರದೇಶಗಳಲ್ಲಿ 30 ಕೋಟಿ ರೂ.ಗಳು ಗಳಿಕೆಯಾಗಿದೆ. ‘ವಾರ್ 2’ ಚಿತ್ರವು ಯಶ್ ರಾಜ್ ಫಿಲಂಸ್ ಸ್ಪೈ ಯೂನಿವರ್ಸ್‍ನ ಹೊಸ ಚಿತ್ರವಾಗಿದ್ದು, ಈ ಹಿಂದೆ ಈ ಸರಣಿಯಲ್ಲಿ ‘ಟೈಗರ್’, ‘ಪಠಾಣ್’, ‘ವಾರ್’ ಮುಂತಾದ ಹಲವು ಚಿತ್ರಗಳು ಬಿಡುಗಡೆಯಾಗಿವೆ. ‘ವಾರ್ 2’ ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದು, ಆದಿತ್ಯ ಜೋಪ್ರಾ ನಿರ್ಮಿಸಿದ್ದಾರೆ. ಜೊತೆಗೆ ಕಥೆಯನ್ನು ಸಹ ರಚಿಸಿದ್ದಾರೆ.





