ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಎರಡು ವರ್ಷಗಳ ಹಿಂದೆ ‘ಜಿಮ್ಮಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯಾಗಿತ್ತು. ಈ ಚಿತ್ರವನ್ನು ಲಹರಿ ಫಿಲಂಸ್‍ನ ನವೀನ್ ಮನೋಹರನ್ ಮತ್ತು ಕೆ.ಪಿ. ಶ್ರೀಕಾಂತ್ ನಿರ್ಮಿಸಬೇಕಿತ್ತು. ದೊಡ್ಡ ಮಟ್ಟದಲ್ಲಿ ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಶಿವರಾಜಕುಮಾರ್ ಮುಂತಾದವರು ಬಂದು ಸಂಚಿತ್‍ಗೆ ಶುಭ ಹಾರೈಸಿದ್ದರು. ಆ ನಂತರ ಚಿತ್ರದ ಸುದ್ದಿಯೇ ಇರಲಿಲ್ಲ.
ಇದೀಗ ಸಂಚಿತ್ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ‘ಜಿಮ್ಮಿ’ ಚಿತ್ರಕ್ಕೆ ಸಂಚಿತ್ ನಾಯಕನಷ್ಟೇ ಅಲ್ಲ, ನಿರ್ದೇಶನವನ್ನೂ ಮಾಡಬೇಕಿತ್ತು. ಈಗ ಅವರು ಹೊಸ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದು, ಆ ಚಿತ್ರವನ್ನು ವಿವೇಕ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಹಾಗಾದರೆ, ‘ಜಿಮ್ಮಿ’ ಚಿತ್ರ ನಿಂತು ಹೋಯ್ತಾ? ಅಥವಾ ಮುಂದಕ್ಕೇನಾದರೂ ಹೋಯ್ತಾ? ಎಂಬ ಪ್ರಶ್ನೆ ಸಹಜ. ಚಿತ್ರ ಘೋಷಣೆಯಾದ ಸಂದರ್ಭದಲ್ಲಿ ಚಿತ್ರಕ್ಕೆ ಒಂದು ಕಥೆಯೇ ಇರಲಿಲ್ಲಲ ಎಂದು ಹೇಳಲಾಗಿದೆ. ಚಿತ್ರತಂಡ ನಾಯಕನನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿತಾದರೂ, ಸೂಕ್ತ ಕಥೆ ಸಿಗದ ಕಾರಣ ಚಿತ್ರ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ, ‘ಜಿಮ್ಮಿ’ ಚಿತ್ರತಂಡದಿಂದ ಈ ಕುರಿತು ಯಾವುದೇ ಸ್ಪಷ್ಟನೆ ಇಲ್ಲ.
ಅಂದಹಾಗೆ, ಸಂಚಿತ್ ಅಭಿನಯದ ಹೊಸ ಚಿತ್ರದ ಹೆಸರು ಘೋಷಣೆಯಾಗಿಲ್ಲ. ಸುದೀಪ್ ಅವರ ಪತ್ನಿ ಮತ್ತು ಮಗಳ ಹೆಸರಲ್ಲಿ ಪ್ರಾರಂಭವಾಗಿರುವ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು KRG ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.
ಕಾರ್ತಿಕ್ ಗೌಡ ಹೇಳಿಕೊಂಡಿರುವಂಗೆ ಮೈಸೂರು ಮೂಲದ ವಿವೇಕ್, ‘ನಿನ್ನಿಂದಲೇ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರಂತೆ. ಆ ನಂತರ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವಗಳಿಸಿರುವ ವಿವೇಕ್, ಇದೀಗ ಹೊಸ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಇದು ಕ್ರೈಂ ಥ್ರಿಲ್ಲರ್ ಸ್ಟೋರಿ ಆಗಿದ್ದು, ಈ ಚಿತ್ರದ ಮೊದಲ ನೋಟ ಮತ್ತು ಶೀರ್ಷಿಕೆ ಅನಾವರಣ ಜನವರಿ 24ರಂದು ನಡೆಯಲಿದೆ. ಅಂದೇ ಚಿತ್ರದ ಮುಹೂರ್ತ ಸಹ ನಡೆಯಲಿದೆ. ಇನ್ನು ಈ ಚಿತ್ರದ ನಾಯಕಿ ಯಾರು? ಯಾರೆಲ್ಲಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಮತ್ತು ಕೆಲಸ ಮಾಡಲಿದ್ದಾರೆ ಮುಂತಾದಪ್ರಶ್ನೆಗಳಿಗೆ ಮುಹೂರ್ತದ ದಿನವೇ ಉತ್ತರ ಸಿಗಲಿದೆ.





