ಡಾ. ರಾಜಕುಮಾರ್ ಮೊಮ್ಮಗಳು ಮತ್ತು ರಾಮ್‍ಕುಮಾರ್ ಅವರ ಮಗಳು ಧನ್ಯಾ ರಾಮ್‍ಕುಮಾರ್ ಅಭಿನಯದ ‘ನಿನ್ನ ಸನಿಹಕೆ’, ‘ಹೈಡ್ ಆ್ಯಂಡ್ ಸೀಕ್’ ಮತ್ತು ‘ದಿ ಜಡ್ಜ್ಮೆಂಟ್’ ಚಿತ್ರಗಳು ಇದುವರೆಗೂ ಬಿಡುಗಡೆಯಾಗಿವೆ. ಆದರೆ, ಯಾವೊಂದು ಚಿತ್ರವೂ ದೊಡ್ಡ ಯಶಸ್ಸು ಕಂಡಿಲ್ಲ. ಹೀಗೆ ಒಂದು ಗೆಲುವಿನ ಹುಡುಕಾಟದಲ್ಲಿರುವ ಧನ್ಯಾ ಇದೀಗ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ.
‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ, ಪೃಥ್ವಿ ಅಂಬಾರ್ ಅಭಿನಯದಲ್ಲಿ ಒಂದು ಹೊಸ ಚಿತ್ರ ನಿರ್ಮಿಸುತ್ತಿರುವ ಸುದ್ದಿ ಈಗಾಗಲೇ ಹಳತಾಗಿದೆ. ಚಿತ್ರಕ್ಕೆ ‘ಚೌಕಿದಾರ್’ ಎಂಬ ಹೆಸರನ್ನು ಇಡಲಾಗಿದ್ದು, ಇದೀಗ ಈ ಚಿತ್ರಕ್ಕೆ ಧನ್ಯಾ ರಾಮ್‍ಕುಮಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದುವರೆಗೂ ಹಲವು ಚಿತ್ರಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಪೃಥ್ವಿ, ಈ ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿದ್ದಾರೆ. ಇದೊಂದು ಫ್ಯಾಮಿಲಿ ಚಿತ್ರವಾಗಿದ್ದು, ಸಾಯಿಕುಮಾರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕಳೆದ ವಾರ ಬಂದಿತ್ತು. ಈಗ ಧನ್ಯಾ ರಾಮ್‍ಕುಮಾರ್ ಚಿತ್ರತಂಡದ ಭಾಗವಾಗಿರುವ ಸುದ್ದಿ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಯಾರ್ಯಾರು ನಟಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.
ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ.ಕಲ್ಲಹಳ್ಳಿ ಚಂದ್ರಶೇಖರ್, ‘ಚೌಕಿದಾರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ.
‘ಚೌಕಿದಾರ್’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದದು, ಬಹುಭಾಷೆಯಲ್ಲಿ ಮೂಡಿಬರುತ್ತಿರುವ ಚಿತ್ರವಾಗಿದೆ. ಚಿತ್ರಕ್ಕೆ ಬೆಂಗಳೂರಿನ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಜುಲೈ 03ರಂದು ಮುಹೂರ್ತ ನಡೆಯಲಿದೆ. ಆ ದಿನ ಚಿತ್ರತಂಡದಲ್ಲಿ ಇನ್ನೂ ಯಾರೆಲ್ಲಾ ಇರಬಹುದು ಎಂಬ ವಿಷಯ ಸ್ಪಷ್ಟವಾಗಲಿದೆ.
ಈ ಮಧ್ಯೆ, ಧನ್ಯಾ ರಾಮ್‍ಕುಮಾರ್ ‘ಪೌಡರ್’ ಮತ್ತು ‘ಕಾಲಾ ಪತ್ಥರ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದು, ಆ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.