ಮೈಸೂರು: ಮಹಾಪ್ರಭುವಿನ ದಿಲ್ಲಿಯ ಆಸ್ಥಾನಕ್ಕೆ ಬೇಕಿರುವುದು ವಿದೂಷಕರೇ. ಈ ವಿದೂಷಕರು ಬರ ಪರಿಹಾರ ಮುಂತಾದವುಗಳ ಬಗ್ಗೆ ಮಾತನಾಡುವುದಿಲ್ಲ. ಈಗ ಮಹಾಪ್ರಭು ಮೈಸೂರಿನ ಮಹಾರಾಜರನ್ನೂ ವಿದೂಷಕರನ್ನಾಗಿಸಲು ಹೊರಟಿದ್ದಾರೆ. ಅವೇರೆಕೆ ಒಪ್ಪಿಕೊಂಡರೋ ನಮಗೆ ಗೊತ್ತಿಲ್ಲ. ಆದರೆ, ಅವರನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಖ್ಯಾತ ಚಿತ್ರನಟ ಪ್ರಕಾಶ್ ರೈ ಹೇಳಿದರು.
ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ಭಾರತ ಸಂವಿಧಾನ ಪ್ರಜಾಪ್ರಭುತ್ವದ ಉಳಿವಿಗಾಗಿ ದಲಿತ ಸಂಘರ್ಷ ಸಮಿತಿಯಿಂದ ಇಲ್ಲಿನ ಎಂ.ಜಿ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಭಾನುವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾದ 27 ಮಂದಿ ಕೂಡ ವಿದೂಷಕರು. ಅವರು ಇದುವರೆಗೂ ರಾಜ್ಯದ ಸಮಸ್ಯೆಗಳ ಬಗೆ ಮಹಾಪ್ರಭುವಿನ ಬಳಿ ತುಟಿಬಿಚ್ಚಿಲ್ಲ, ಅಂತಹ ವಿದೂಷಕರು ನಮಗೇಕೆ ಬೇಕು ಎಂದು ಪ್ರಶ್ನಿಸಿದರು.
ಬಿಜೆಪಿಯವರು 400 ಸ್ಥಾನ ಗಳಿಸುತ್ತೇವೆ ಎನ್ನುತ್ತಾರೆ. ಅದು ಅವರ ನಂಬಿಕೆ ಅಲ್ಲ, ಭಯ. ತುಂಬಾ ವಿಶ್ವಾಸದಿಂದ ಮಾತನಾಡಿದಾಗ, ಪ್ರಶ್ನಿಸುವವರನ್ನು ಜೈಲಿಗೆ ಕಳುಹಿಸಿದಾಗ, ಇಡಿಯಿಂದ ದಾಳಿ ಮಾಡಿಸಿದಾಗ ಅವರು ಹೆದರಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ನಾನು ಬಲಶಾಲಿ ಅಲ್ಲ, ತುಂಬಾ ಬಲಹೀನ ಆಗುತ್ತಿದ್ದೇನೆ ಎನ್ನುವುದು ಗೊತ್ತಾಗಿರುವುದರಿಂದಲೇ ಮಹಾಪ್ರಭುವಿ ಮುಖದಲ್ಲಿ ಆತಂಕ ಗೋಚರಿಸುತ್ತಿದೆ ಎಂದು ಟೀಕಿಸಿದರು.
ಅವರನ್ನು ಮಹಾಪ್ರಭು ಎಂದೇಕೆ ಕರೆಯುತ್ತೇನೆಂದರೆ ಅದರ ಹಿಂದೊಂದು ಮರ್ಮವಿದೆ. ಅಂಬೇಡ್ಕರ್ ಸಂವಿಧಾನದ ಪ್ರಕಾರ, ಮಹಾಪ್ರಭು ಎನ್ನುವವರು ಇರಬಾರದು. ಆದರೆ, ಇವರು ಮಹಾಪ್ರಭು ರೀತಿ ಓಡಾಡುತ್ತಿದ್ದಾರೆ. ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭು ಬರುತ್ತಾರೆ. ಈ ಪ್ರಸಂಗ ನೋಡಲು ಜನರನ್ನು ಕರೆತರಲು ಸಾಕಷ್ಟು ಬಸ್‌ಗಳು ಓಡಾಡಿದವು. ಆದರೆ, ಕೋವಿಡ್ ಸಂಕಷ್ಟ ಕಾಲದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರಿಗೇಕೆ ಒಂದು ಬಸ್ ಕೂಡ ಓಡಿಸಲಿಲ್ಲ ಎಂದು ನಾವೆಲ್ಲೂರು ಕೇಳಬೇಕು ಎಂದರು.
ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ಹಾದಿ ತಪ್ಪಿದ್ದಾರೆ ಎಂದು ಕುಮಾರಣ್ಣ ಹೇಳಿಕೆ ನೀಡಿದ್ದಾರೆ. ನೀವು ದಾರಿ ತಪ್ಪಿ ಎಷ್ಟು ವರ್ಷವಾಯಿತು? ಎಲ್ಲಿ ಓಡಾಡಿಕೊಂಡಿದ್ದೀರಿ, ಇನ್ನೂ ಒಂದ್ಕಡೆ ಸೇರಿಕೊಂಡಿಲ್ಲವಲ್ಲ ಎಂದು ವ್ಯಂಗ್ಯವಾಗಿ ಕೇಳಿದರು.
ಪ್ರಹಾಪ್ರಭುವಿನ ಆಳ್ವಿಕೆ ನ್ಯಾಯವಾಗಿಲ್ಲ, ಇದು ಅಮಾನವೀಯವಾದುದು. ಇದಕ್ಕೆ ನಾವು ಮೋಸ ಹೋಗಬಾರದು, ದೇಶದಲ್ಲಿ ಬದಲಾವಣೆ ವಿರೋಧ ಪಕ್ಷದಿಂದ ಅಥವಾ ಆಳುವ ಪಕ್ಷದಿಂದಲೂ ಆಗುತ್ತಿಲ್ಲ. ನಮ್ಮಿಂದ ಮಾತ್ರವೇ ಬದಲಾವಣೆ ಸಾಧ್ಯ. ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು, ಇದಕ್ಕೂ ಮುನ್ನ ಈ ಕೊರೊನಾ ಸೋಂಕನ್ನು ಕೆಳಗಿಳಿಸೋಣ ಎಂದು ಕರೆ ನೀಡಿದರು.




