ಪ್ರಜ್ವಲ್ ದೇವರಾಜ್ ಅಭಿನಯದ ‘ಮಾಫಿಯಾ’ ಚಿತ್ರದ ಕೆಲಸಗಳು ಕಳೆದ ವರ್ಷವೇ ಮುಗಿದಿತ್ತು. ನಾಲ್ಕೈದು ಕೋಟಿ ಹಾಕಿ ಮಾಡಿದ ಚಿತ್ರಕ್ಕೆ ಒಂದು ರೂಪಾಯಿ ಸಹ ಬರದಿದ್ದರೆ ಹೇಗೆ, ಒಂದಿಷ್ಟು ವ್ಯಾಪಾರವಾದ ಮೇಲೆ ಚಿತ್ರ ಬಿಡುಗಡೆ ಮಾಡೋಣ ಎಂದು ಸುಮ್ಮನಿದ್ದರು. ಆದರೆ, ಬ್ಯುಸಿನೆಸ್ ಆಗದ ಕಾರಣ, ಚಿತ್ರತಂಡದವರು ಚಿತ್ರದ ಬಿಡುಗಡೆಯನ್ನು ಘೋಷಿಸಿರಲಿಲ್ಲ. ಕೊನೆಗೆ ಚಿತ್ರವನ್ನು ಜುಲೈ 26ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದ್ದರು. ಆದರೆ, ಈ ವಾರವೂ ಚಿತ್ರ ಬಿಡುಗಡೆ ಆಗುವಂತೆ ಕಾಣುತ್ತಿಲ್ಲ.
ಹೌದು, ಜುಲಥ 26ರಂದು ‘ಮಾಫಿಯಾ’ ಬಿಡುಗಡೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಚಿತ್ರ ಬಿಡುಗಡೆಗೆ ಇನ್ನು ನಾಲ್ಕೇ ದಿನಗಳಿದ್ದರೂ, ಚಿತ್ರದ ಪ್ರಚಾರವೂ ಆಗುತ್ತಿಲ್ಲ, ಚಿತ್ರದ ಬಿಡುಗಡೆಯನ್ನು ಮುಂದೂಡಿದ ಸುದ್ದಿಯೂ ಇಲ್ಲ. ಹಾಗಾದರೆ, ‘ಮಾಫಿಯಾ’ ಈ ವಾರ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಮೂಲಗಳ ಪ್ರಕಾರ, ಚಿತ್ರದ ಬಿಡುಗಡೆ ಈ ವಾರವೂ ಇಲ್ಲ. ಬಹುಶಃ ಬಿಡುಗಡೆಯ ದಿನಾಂಕವನ್ನು ಘೋಷಿಸಿದರೆ, ಒಂದಿಷ್ಟು ವ್ಯಾಪಾರ ಆಗಬಹುದು ಎಂದು ಚಿತ್ರತಂಡದವರು ನಿರೀಕ್ಷಿಸಿ, ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದರಂತೆ. ಆದರೆ, ಇದುವರೆಗೂ ಚಿತ್ರದ ಯಾವುದೇ ಹಕ್ಕುಗಳು ಮಾರಾಟವಾಗದ ಕಾರಣ, ಇನ್ನೊಂದಿಷ್ಟು ದಿನ ಕಾದು ನೋಡುವ ತಂತ್ರಕ್ಕೆ ಚಿತ್ರತಂಡದವರು ಬಂದಿದ್ದಾರೆ ಎನ್ನಲಾಗಿದೆ. ‘ಮಾಫಿಯಾ’ ಸೇರಿದರೆ ಈ ವಾರ ಒಟ್ಟು ಆರು ಚಿತ್ರಗಳು ಬಿಡುಗಡೆ ಆಗಬೇಕಿತ್ತು. ಆದರೆ, ಈಗ ಐದೇ ಚಿತ್ರಗಳು ಬಿಡುಗಡೆ ಆಗುತ್ತಿದೆ.
‘ರೆಡ್ ಮಾರ್ಕೆಟ್’ ಎಂದು ಹೆಚ್ಚು ಸುದ್ದಿಯಾಗದಿರುವ ಮಾಫಿಯಾ ಕುರಿತಾದ ಚಿತ್ರ ಇದಾಗಿದ್ದು, ಆ ಮಾಫಿಯಾ ವಿರುದ್ಧ ತಡೆತಟ್ಟುವ ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಪ್ರಜ್ವಲ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ.
ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ, ಲೋಹಿತ್ ಹೆಚ್ ನಿರ್ದೇಶಿಸಿರುವ ‘ಮಾಫಿಯಾ’ ಚಿತ್ರದಲ್ಲಿ ಪ್ರಜ್ವಲ್‍ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಮಿಕ್ಕಂತೆ ದೇವರಾಜ್, ಸಾಧು ಕೋಕಿಲ, ಶೈನ್ ಶೆಟ್ಟಿ, ವಾಸುಕಿ ವೈಭವ್, ವಿಜಯ್ ಚೆಂಡೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್. ಪಾಂಡಿಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.