Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಒಂದೇ ದಿನ ದರ್ಶನ್‍ ಅಭಿನಯದ ಎರಡು ಚಿತ್ರಗಳ ಬಿಡುಗಡೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಈ ವರ್ಷ ದರ್ಶನ್‍ ಅಭಿನಯದ ಯಾವೊಂದು ಚಿತ್ರವು ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಯಾವ ಹೊಸ ಚಿತ್ರ ಬಿಡುಗಡೆ ಆಗುವ ಹಾಗೆ ಕಾಣುತ್ತಿಲ್ಲ. ಈ ಮಧ್ಯೆ, ಒಂದೇ ದಿನ ದರ್ಶನ್‍ ಅಭಿನಯದ ಎರಡು ಚಿತ್ರಗಳು ಮರುಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.

ಹೌದು, ದರ್ಶನ್‍ ಅವರ ಹೊಸ ಚಿತ್ರಗಳ ಗೈರು ಹಾಜರಿಯಲ್ಲಿ ಅವರ ಹಳೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ‘ಶಾಸ್ತ್ರಿ’, ‘ಕರಿಯ’ ಮತ್ತು ‘ಪೊರ್ಕಿ’ ಚಿತ್ರಗಳು ಮರುಬಿಡುಗಡೆಯಾಗಿವೆ. ಈ ಪೈಕಿ ‘ಶಾಸ್ತ್ರಿ’ ಚಿತ್ರವು ಸ್ವಲ್ಪ ಸದ್ದು ಮಾಡಿದ್ದು ಬಿಟ್ಟರೆ, ಮಿಕ್ಕಂತೆ ಎರಡೂ ಚಿತ್ರಗಳು ಸದ್ದು ಮಾಡಲಿಲ್ಲ. ಹೀಗಿರುವಾಗಲೇ ದರ್ಶನ್‍ ಅಭಿನಯದ ಎರಡು ಚಿತ್ರಗಳು ಮರುಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ನವೆಂಬರ್‍ 09ರಂದು ದರ್ಶನ್‍ ಅಭಿನಯದ ಎರಡು ಜನಪ್ರಿಯ ಚಿತ್ರಗಳಾದ ‘ನವಗ್ರಹ’ ಮತ್ತು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಆ ವಾರ ಸದ್ಯ ಯಾವುದೇ ದೊಡ್ಡ ಚಿತ್ರ ಬಿಡುಗಡೆಯಾಗದಿರುವುದರಿಂದ ಈ ಎರಡೂ ಚಿತ್ರಗಳು ಒಂದೇ ದಿನ ತೆರೆಕಾಣಲಿದೆ.

ಅಂದಹಾಗೆ, ‘ನವಗ್ರಹ’ ಚಿತ್ರವು 2008ರ ನವೆಂಬರ್ 07ರಂದು ಬಿಡುಗಡೆಯಾಗಿತ್ತು. ಈಗ ಚಿತ್ರವು 09ರಂದು ಬಿಡುಗಡೆಯಾಗುತ್ತಿದೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಮೀನಾ ತೂಗುದೀಪ ಚಿತ್ರದಲ್ಲಿ ದರ್ಶನ್‍ ನಟಿಸಿದರೆ, ಅವರ ಸಹೋದರ ದಿನಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ವಿಲನ್‍ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ಜನಪ್ರಿಯ ನಟರಾದ ಪ್ರಭಾಕರ್, ಸುಧೀರ್‍, ಕೀರ್ತಿರಾಜ್‍, ದಿನೇಶ್, ಸುಂದರಕೃಷ್ಣ ಅರಸ್‍ ಮತ್ತು ತೂಗುದೀಪ ಶ್ರೀನಿವಾಸ್‍ ಅವರ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದರು.

ಇನ್ನು, 2012ರಲ್ಲಿ ಬಿಡುಗಡೆಯಾದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವೂ ಅದೇ ದಿನ ಬಿಡುಗಡೆಯಾಗುತ್ತಿದೆ. ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ಅವರ ಜೀವನವನ್ನಾಧರಿಸಿದ ಈ ಚಿತ್ರವನ್ನು ಆನಂದ್ ಅಪ್ಪುಗೋಳ್‍ ನಿರ್ಮಿಸಿದರೆ, ನಾಗಣ್ಣ ನಿರ್ದೇಶನ ಮಾಡಿದ್ದರು. ಈ ಚಿತ್ರವು ಬಿಡುಗಡೆಯಾದ ಒಂದು ವರ್ಷ ಕಾಲ ಪ್ರದರ್ಶನ ಕಂಡಿತ್ತು.

ಈಗ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದೆ. ಈ ಎರಡರಲ್ಲಿ ಯಾವುದನ್ನು ಮೊದಲು ನೋಡಬೇಕು ಎಂಬ ಗೊಂದಲದಲ್ಲಿ ಅಭಿಮಾನಿಗಳು ಇದ್ದಾರೆ.

Tags: