ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ರಮ್ಯಾ ಪರವಾಗಿ ಪ್ರಥಮ್ ಹೊರತುಪಡಿಸಿದರೆ, ಮಿಕ್ಕಂತೆ ಯಾರೂ ಧ್ವನಿ ಎತ್ತಿರಲಿಲ್ಲ. ಇದೀಗ Film Industry for Rights and Equality (FIRE) ಸಂಸ್ಥೆಯು ಬೆಂಬಲಕ್ಕೆ ನಿಂತಿದ್ದು, ಮಹಿಳಾ ವಿರೋಧಿ ಟ್ರೋಲಿಂಗ್ ನಿಲ್ಲಿಸುವುದಕ್ಕೆ ಆಗ್ರಹಿಸುವುದರ ಜೊತೆಗೆ, ಈ ತರಹ ಟ್ರೋಲ್ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಪರಮೇಶ್ವರ್ ಅವರನ್ನು ಆಗ್ರಹಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಬಂಧನವಾಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ರಮ್ಯಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದ್ದು, ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅವಹೇಳನಕಾರಿ ಸಂದೇಶಗಳನ್ನು ಕಳಿಸಿದ್ದಾರೆ. ತಮಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ದರ್ಶನ್ ಫ್ಯಾನ್ಸ್ ಹೆಸರಿನ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಸ್ಕ್ರೀನ್‌ಶಾಟ್ ತೆಗೆದು, ಅಪ್ಲೋಡ್ ಮಾಡುತ್ತಿದ್ದಾರೆ.
ಈ ತರಹ ಸಮಸ್ಯೆ ಬರೀ ತಾವೋಬ್ಬರೇ ಅಲ್ಲ, ಹಲವು ನಟ-ನಟಿಯರು ಎದುರಿಸುತ್ತಿದ್ದಾರೆ ಎಂದು ರಮ್ಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕೆಟ್ಟ ಕೆಟ್ಟ ಪದ ಬಳಕೆ ಮಾಡುತ್ತಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಹಾಗೂ ದರ್ಶನ್ ಅಭಿಮಾನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದಿದ್ದರು. ಇಂತಹ ಸ್ತ್ರೀದ್ವೇಷಿ ಮನೋಭಾವದವರಿಂದಲೇ ಹೆಣ‍್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಈ ಸಂಬಂಧ ರಮ್ಯಾ, ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದರು. ಅದಕ್ಕೆ ಪೂರಕವಾಗಿ ರಾಜ್ಯ ಮಹಿಳಾ ಆಯೋಗಕ್ಕೆ, ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದರು.
ರಮ್ಯಾ ಹೀಗೆ ಒಂಟಿ ಹೋರಾಟ ನಡೆಸುತ್ತಿರುವಾಗ, ಚಿತ್ರರಂಗದಿಂದ ಅವರ ಪರವಾಗಿ ಯಾರೂ ಧ್ವನಿ ಎತ್ತಿರಲಿಲ್ಲ. ಇದೀಗ Film Industry for Rights and Equality (FIRE) ಸಂಸ್ಥೆಯು ಬೆಂಬಲಕ್ಕೆ ನಿಂತಿದ್ದು ರಮ್ಯಾ ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಟ್ರೋಲಿಂಗ್ ವಿರುದ್ಧ ಖಂಡಿಸುವುದರ ಜೊತೆಗೆ, ಅವರ ಬೆಂಬಲಕ್ಕೆ ನಿಂತಿದೆ.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ಅವರಗಳ ನಡುವೆ ಸಂವಾದ ನಡೆಯಬೇಕು. ಆದರೆ, ಆ ಸಂವಾದ ಸಭ್ಯತೆಯೊಂದಿಗೆ ಮತ್ತು ಗೌರವಪೂರ್ಣವಾಗಿ ನಡೆಯಬೇಕು. ರಮ್ಯಾ ಅವರ ವಿರುದ್ಧ ನಡೆಯುತ್ತಿರುವ ದ್ವೇಷಪೂರಿತ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾಗಿದ್ದು, ತಕ್ಷಣವೇ ಕರ್ನಾಟಕ ಗೃಹ ಇಲಾಕೆ ಮತ್ತು ಸೈಬರ್ ಕ್ರೈಮ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು FIRE ಸಂಸ್ಥೆ ಒತ್ತಾಯಿಸಿದೆ.





