ರೇಣುಕಾಸ್ವಾಮಿ ಕೊಲೆ ಆರೋಪದಡಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಪವಿತ್ರಾ ಅವರ ತಪ್ಪೊಪ್ಪಿಗೆ ದಾಖಲಾಗಿದೆ. ಇದರಲ್ಲಿ ದರ್ಶನ್ ತಮಗೆ ಕೆಲವು ವರ್ಷಗಳ ಹಿಂದೆ 1.5 ಕೋಟಿ ರೂ. ಮೌಲ್ಯದ ಮನೆ ಕೊಡಿಸಿದ್ದಾಗಿ ಪವಿತ್ರಾ ಗೌಡ ಹೇಳಿಕೊಂಡಿದ್ದಾರೆ.
ತಮ್ಮ ಮತ್ತು ದರ್ಶನ್ ನಡುವಿನ ಸಂಬಂಧದ ಕುರಿತು ಮಾತನಾಡಿರುವ ಅವರು, ’10 ವರ್ಷಗಳ ಹಿಂದೆ ‘ಬುಲ್‍ಬುಲ್’ ಚಿತ್ರದ ಆಡಿಷನ್‍ಗೆ ಹೋದಾಗ ದರ್ಶನ್ ಅವರ ಪರಿಚಯವಾಯಿತು. ಕ್ರಮೇಣ ನಮ್ಮಲ್ಲಿ ಆತ್ಮೀಯತೆ ಮೂಡಿತು. 2018ರಲ್ಲಿ ಅವರು ನನಗೆ 1.5 ಕೋಟಿ ರೂ. ಮೌಲ್ಯದ ಮನೆ ಕೊಡಿಸಿದರು. ಈ ಮನೆ ಖರೀದಿಸುವುದಕ್ಕೆ ಸೌಂದರ್ಯ ಜಗದೀಶ್ ಸಾಲ ಕೊಟ್ಟಿದ್ದರು. ಅಂದಿನಿಂದ ಒಟ್ಟಿಗೆ ಸಂಸಾರ ಮಾಡುತ್ತಿದ್ದೇವೆ. ನನ್ನ 13 ವರ್ಷದ ಮಗಳು ಸಹ ನನ್ನ ಜೊತೆಗಿದ್ದಳು’ ಎಂದು ಹೇಳಿಕೊಂಡಿದ್ದಾರೆ.
ಪತ್ನಿ ವಿಜಯಲಕ್ಷ್ಮೀ ಜೊತೆಗೆ ದರ್ಶನ್ ಅವರು ದುಬೈಗೆ ಹೋಗಿದ್ದಕ್ಕೆ ಅವರೊಂದಿಗೆ ಜಗಳವಾಡಿದ್ದೆ ಎಂದಿರುವ ಪವಿತ್ರಾ, ‘ಕಳೆದ ಮೇ ತಿಂಗಳಲ್ಲಿ ದರ್ಶನ್ ನನಗೆ ತಿಳಿಸದೇ ವಿಜಯಲಕ್ಷ್ಮೀ ಅವರ ಜೊತೆಗೆ ದುಬೈಗೆ ಹೋಗಿದ್ದರು. ಅಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಬಗ್ಗೆ ದರ್ಶನ್ ಜೊತೆಗೆ ಜಗಳವಾಡಿಕೊಂಡು ಮಾತುಬಿಟ್ಟಿದ್ದೆ’ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆಯ ಬಗ್ಗೆ ಮಾತನಾಡಿರುವ ಅವರು, ‘ನನಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ರೇಣುಕಾಸ್ವಾಮಿಯ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು, ಅವನನ್ನು ಬಿಡಬೇಡಿ ಸಾಯಿಸಿ ಎಂದು ಅಲ್ಲಿದ್ದವರಿಗೆ ಹೇಳಿದೆ. ಎಲ್ಲರೂ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದರು’ ಎಂದು ಪವಿತ್ರಾ ಗೌಡ ತಪ್ಪೊಪ್ಪಿಕೊಂಡಿದ್ದಾರೆ.





