ರೇಣುಕಾಸ್ವಾಮಿ ಕೊಲೆ ಆರೋಪದಡಿ ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ದರ್ಶನ್ ಅವರ ತಪ್ಪೊಪ್ಪಿಗೆ ದಾಖಲಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದು ನಿಜ ಎಂದು ದರ್ಶನ್ ತಪ್ಪೊಪ್ಪಿಕೊಳ್ಳುವುದರ ಜೊತೆಗೆ ಸಾಕ್ಷ್ಯ ನಾಶ ಮಾಡುವುದಕ್ಕೆ 38 ಲಕ್ಷ ರೂ. ಸಾಲ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ‘ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದು ನಿಜ. ಅವನಿಗೆ ಕಾಲಿನಿಂದ ಒದ್ದು, ಕೈಯಿಂದ ಗುದ್ದಿದ್ದೆ. ನಾನು ಶೆಡ್‍ನಿಂದ ಹೋಗುವಾಗ ಆತ ಚೆನ್ನಾಗಿಯೇ ಇದ್ದ. ಅವನ ಸಾವಿನ ಬಗ್ಗೆ ರಾತ್ರಿ ಗೊತ್ತಾಯ್ತು. ನಾನು ಅಲ್ಲಿಂದ ಹೋದ ನಂತರ ಅವನಿಗೆ ಪವನ್, ಧನರಾಜ್ ಹಾಗೂ ನಂದೀಶ ಕರೆಂಟ್ ಶಾಕ್ ಕೊಟ್ಟಿದ್ದಲ್ಲದೆ ನೆಲಕ್ಕೆ ಕುಕ್ಕಿ ಹಲ್ಲೆ ಮಾಡಿದ ಸಂಗತಿ ಗೊತ್ತಾಯಿತು’ ಎಂದಿದ್ದಾರೆ.
ಹತ್ಯೆ ಪ್ರಕರಣದ ಸಾಕ್ಷ್ಯ ನಾಶ ಮಾಡಲು 38 ಲಕ್ಷ ರೂ. ಸಾಲ ಮಾಡಿರುವುದಾಗಿ ಹೇಳಿರುವ ದರ್ಶನ್, ‘ಕೊಲೆ ಪ್ರಕರಣದ ಸಾಕ್ಷ್ಯ ನಾಶ ಮಾಡಲು ದುಡ್ಡು ಬೇಕು ಎಂದು ನಾಗರಾಜ್ ಹಾಗೂ ಪ್ರದೂಷ್ ಕೇಳಿದ್ದರು. ನನಗೆ ಪರಿಚಯವಿರುವ ಮೋಹನ್ ಅವರಿಂದ 38 ಲಕ್ಷ ರೂ. ಸಾಲ ಪಡೆದಿದ್ದೆ. ಜೊತೆಗೆ ನನ್ನ ಬಳಿಯಿದ್ದ ಒಂದಿಷ್ಟು ಹಣವನ್ನು ಸೇರಿಸಿ, ಪ್ರದೂಷ್‍ಗೆ 30 ಲಕ್ಷ ಹಾಗೂ ವಿನಯ್‍ಗೆ 10 ಲಕ್ಷ ರೂ.ಗಳನ್ನು ಕೊಟ್ಟಿದ್ದೇನೆ’ ಎಂದು ದರ್ಶನ್ ಹೇಳಿದ್ದಾರೆ.
ಆ ನಂತರ ದರ್ಶನ್ ‘ದಿ ಡೆವಿಲ್’ ಚಿತ್ರದ ಚಿತ್ರೀಕರಣಕ್ಕೆಂದು ಮೈಸೂರಿಗೆ ಭಾನುವಾರ ಸಂಜೆ ಹೊರಟರಂತೆ. ಸೋಮವಾರ ಅಲ್ಲಿನ ಹೋಟೆಲ್‍ನಲ್ಲಿದ್ದಾಗ ಪ್ರದೂಷ್, ವಿನಯ್ ಹಾಗೂ ನಾಗರಾಜು ಪುನಃ ಬಂದು ಭೇಟಿಯಾದರಂತೆ. ಮಂಗಳವಾರ ಬೆಳಿಗ್ಗೆ ಪೊಲೀಸರು ಹೋಟೆಲ್‍ನಲ್ಲಿ ದರ್ಶನ್‍ರನ್ನು ಬಂಧಿಸಿದ್ದಾರೆ.





