ಈ ಹಿಂದೆ ‘ನಮ್ ಗಣಿ ಬಿಕಾಂ ಪಾಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ನಾಗೇಶ್ ಕುಮಾರ್, ಈಗ ಎರಡು ಚಿತ್ರಗಳನ್ನು ನಿರ್ಮಿಸಿದ್ದಾರೆ. ಎರಡೂ ಚಿತ್ರಗಳನ್ನು ಜೆ.ಜೆ.ಶ್ರೀನಿವಾಸ್ ನಿರ್ದೇಶಿಸಿದ್ದು, ಈ ಎರಡೂ ಚಿತ್ರಗಳು ಆಗಸ್ಟ್.08ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಬ್ಬರೇ ನಿರ್ಮಿಸಿದ ಹಾಗೂ ಒಬ್ಬರೇ ನಿರ್ದೇಶಿಸಿದ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ವಿಶೇಷ.
ಅಂದಹಾಗೆ, ಆ ಚಿತ್ರಗಳ ಹೆಸರು ‘ಕಸ್ಟಡಿ’ ಮತ್ತು ‘ಪಾಲ್ಗುಣಿ’. ಈ ಪೈಕಿ ಮೊದಲನೆಯದು ಆ್ಯಕ್ಷನ್ ಚಿತ್ರವಾದರೆ, ಎರಡನೆಯದು ಮಹಿಳಾ ಪ್ರಧಾನ ಚಿತ್ರ. ಈ ಎರಡೂ ಚಿತ್ರಗಳ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಈ ಎರಡು ಚಿತ್ರಗಳ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಎರಡೂ ಚಿತ್ರಗಳ ಕುರಿತು ಮಾತನಾಡುವ ನಿರ್ದೇಶಕ ಶ್ರೀನಿವಾಸ್, ‘ಕಸ್ಟಡಿ’ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೆ, ‘ಪಾಲ್ಗುಣಿ’ ಮಂಡ್ಯದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿದ ಚಿತ್ರ. ನಾವು ಮೊದಲು ಪ್ರಾರಂಭಿಸಿದ್ದು ‘ಪಾಲ್ಗುಣಿ’. ಆ ಚಿತ್ರ ಮುಕ್ತಾಯದ ಹಂತದಲ್ಲಿ ‘ಭೀಮ’ ಚಿತ್ರವು ಬಿಡುಗಡೆಯಾಗಿತ್ತು. ಆ ಚಿತ್ರದಲ್ಲಿ ಪ್ರಿಯಾ ಅವರ ಅಭಿನಯ ನೋಡಿ, ಕಥೆ ಒಂದಿಷ್ಟು ಬದಲಾಯಿಸಿ ಅವರಿಂದ ಒಂದು ಪಾತ್ರ ಮಾಡಿಸಿದರೆ ಹೇಗೆ ಎಂಬ ಯೋಚನೆಯಲ್ಲಿ ಅವರನ್ನು ಭೇಟಿ ಮಾಡಿದೆ. ಅವರನ್ನು ಭೇಟಿ ಮಾಡಿ ಬಂದ ನಂತರ ಬೇರೆಯ ಯೋಚನೆ ಹೊಳೆಯಿತು. ಎರಡು ದಿನಗಳ ನಂತರ ಅವರನ್ನು ಭೇಟಿ ಮಾಡಿ ಇನ್ನೊಂದು ಕಥೆ ಹೇಳಿದೆ. ಅವರಿಗೆ ಇಷ್ಟವಾಯಿತು. ಅದೇ ‘ಕಸ್ಟಡಿ’. ಈ ಚಿತ್ರವು ಸೈಬರ್ ಕ್ರೈಮ್ ಸುತ್ತ ಸುತ್ತುವ ಚಿತ್ರ. ಇದರಲ್ಲಿ ನಾನು ಸಹ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ’ ಎಂದರು.
ಈ ಚಿತ್ರವನ್ನು ನಾಗೇಶ್ ಕುಮಾರ್ ನಿರ್ಮಿಸುತ್ತಿರುವುದಷ್ಟೇ ಅಲ್ಲ, ತಮ್ಮದೇ ಸಂಸ್ಥೆಯಡಿ ವಿತರಣೆ ಮಾಡುತ್ತಿದ್ದಾರೆ. ‘ಈ ಎರಡೂ ಚಿತ್ರಗಳು ಆಗಸ್ಟ್. 08ರಂದು ಬಿಡುಗಡೆಯಾಗುತ್ತಿದೆ. ನಾವೇ ಕೆಲವು ಸ್ನೇಹಿತರು ಸೇರಿ ಈ ಚಿತ್ರಗಳನ್ನು ವಿತರಣೆ ಕೂಡ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
‘ಭೀಮ’ ಖ್ಯಾತಿಯ ಪ್ರಿಯಾ ಮಾತನಾಡಿ, ‘ನನಗೆ ನಿರ್ದೇಶಕರು ಬಂದು ಕಥೆ ಹೇಳಿದ್ದು ಬೇರೆ ಚಿತ್ರದ್ದು. ಆದರೆ, ಮೂರು ದಿನಗಳ ಬಳಿಕ ಮತ್ತೊಂದು ಕಥೆ ಹೇಳಿದರು. ಅದೇ ‘ಕಸ್ಟಡಿ’ ಚಿತ್ರದ ಕಥೆ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ. ದುರ್ಗಾ ಪರಮೇಶ್ವರಿ ನನ್ನ ಪಾತ್ರದ ಹೆಸರು ಎಂದರು.
‘ಪಾಲ್ಗುಣಿ’ ಚಿತ್ರದಲ್ಲಿ ರೇಖಾಶ್ರೀ ಹಳ್ಳಿ ಹುಡುಗಿ ‘ಪಾಲ್ಗುಣಿ’ಯಾಗಿ ನಟಿಸಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ನಟ-ಸಂಕಲನಕಾರ ನಾಗೇಂದ್ರ ಅರಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.





