Mysore
19
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

‘ರಣಾಕ್ಷ’ನಾದ ಸೀರುಂಡೆ ರಘು; ಕಾಮಿಡಿಯಿಂದ ಗಂಭೀರ ಪಾತ್ರಕ್ಕೆ ಶಿಫ್ಟ್

ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಸೀರುಂಡೆ ರಘು, ಆ ನಂತರ ಸತ್ಯ ಧಾರಾವಾಹಿಯಲ್ಲಿ ನಾಯಕನಾಗಿ ಗೆಳೆಯನಾಗಿಯೂ ಕಾಣಿಸಿಕೊಂಡರು. ಚಿತ್ರರಂಗಕ್ಕೂ ಕಾಲಿಟ್ಟ ಅವರು, ‘ಮರೆಯದೆ ಕ್ಷಮಿಸು’ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಇದೀಗ ಅವರು ಹೀರೋ ಆಗಿದ್ದಾರೆ.

ಹೌದು, ಸೀರುಂಡೆ ರಘು ಇದೀಗ ‘ರಣಾಕ್ಷ’ ಎಂಬ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದು, ಈ ಚಿತ್ರದು ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದ್ದು, ಈ ತಿಂಗಳ ಕೊನೆಗೆ ಚಿತ್ರ ಸಹ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕೆ.ವಿ.ಆರ್‍ ಪಿಕ್ಚರ್ಸ್ ಬ್ಯಾನರ್‍ ಅಡಿ ರಾಮು ಮತ್ತು ಶೋಭಾ ಶಿವಾಜಿ ರಾವ್‍ ನಿರ್ಮಿಸಿರುವ ಈ ಚಿತ್ರಕ್ಕೆ ರಾಘವ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸೀರುಂಡೆ ರಘುಗೆ ನಾಯಕಿಯಾಗಿ ರಕ್ಷಾ ನಟಿಸಿದ್ದು, ಮಿಕ್ಕಂತೆ ಅಪೂರ್ವ, ಮುನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ರಣಾಕ್ಷ’ ಕುರಿತು ಮಾತನಾಡುವ ಸೀರುಂಡೆ ರಘು, ‘ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾಲ್ಕು ಜನ ಸ್ನೇಹಿತರ ಜೊತೆ ಸಾಗುವ ಪಾತ್ರ ನನ್ನದು. ನನ್ನ ಪಾತ್ರ ಏನು ಎಂದು ಕೊನೆಯಲ್ಲಿ ಬಯಲಾಗುತ್ತದೆ’ ಎಂದರು.

ರಾಘವ್‍ ಇದಕ್ಕೂ ಮೊದಲು ‘ಮರೆಯದೆ ಕ್ಷಮಿಸು’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಸೀರುಂಡೆ ರವಿ ಸಹ ಒಂದು ಪಾತ್ರ ಮಾಡಿದ್ದರಂತೆ. ಆ ಚಿತ್ರದಲ್ಲಿನ ಅವರ ಅಭಿನಯ ನೋಡಿ, ತನ್ನ ಮುಂದಿನ ಚಿತ್ರಕ್ಕೆ ನೀನೇ ಹೀರೋ ಎಂದರಂತೆ ನಿರ್ದೇಶಕ ರಾಘವ್‍. ‘ಏನು ಕಾಮಿಡಿ ನಟನಿಗೆ ಕಾಮಿಡಿ ಮಾಡ್ತಿದ್ದೀರಾ?’ ಎಂದರಂತೆ. ಅದಕ್ಕೆ ರಘುವನ್ನು ‘ರಣಾಕ್ಷ’ ಚಿತ್ರದಲ್ಲಿ ಹೀರೋ ಮಾಡುವ ಮೂಲಕ ತಮ್ಮ ಮಾತು ನಿಜ ಮಾಡಿ ತೋರಿಸಿದ್ದಾರೆ ರಾಘವ್‍.

ಈ ಚಿತ್ರದ ಕುರಿತು ಮಾತನಾಡಿದ ರಾಘವ್‍, ‘‘ರಣಾಕ್ಷ’ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ದೇವರು, ದೆವ್ವ ಎರಡರ ನಡುವಿನ ಸಂಘರ್ಷವೇ ಚಿತ್ರದ ಕಥೆ. ಯಾವುದೇ ಮಂತ್ರ , ತಂತ್ರ , ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ’ ಎಂದರು.

‘ರಣಾಕ್ಷ’ ಚಿತ್ರಕ್ಕೆ ವಿಶಾಲ್ ಆಲಾಪ್ ಸಂಗೀತ ಸಂಯೋಜಿಸಿದ್ದು, ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಮುಂತಾದ ಕಡೆ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ.

Tags:
error: Content is protected !!