Mysore
18
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಸಿನಿಮಾ ಒಂದೇ ಅಲ್ಲ, ಜನರಿಗೆ ಸಾವಿರ ಆಯ್ಕೆಗಳಿವೆ: ರಿಷಭ್ ಶೆಟ್ಟಿ

ಮೊದಲು ಹೀಗಿರಲಿಲ್ಲ, ಕೋವಿಡ್‍ ನಂತರ ಜನ ಕ್ರಮೇಣ ಚಿತ್ರಮಂದಿರಗಳಿಂದ ವಿಮುಖರಾದರು. ಇದಕ್ಕೆ ಓಟಿಟಿ ಕಾರಣ ಎನ್ನಲಾಯ್ತು, ಚಿತ್ರಗಳ ಗುಣಮಟ್ಟ ಎಂದು ಹೇಳಲಾಯ್ತು. ಕಾರಣ ಏನೇ ಇರಲಿ, ಮೊದಲಿಗೆ ಹೋಲಿಸಿದರೆ, ಜನ ಚಿತ್ರಮಂದಿರಗಳ ಕಡೆ ಬರುವುದು ಕಡಿಮೆಯಾಗಿದೆ. ಈ ಬಗ್ಗೆ ಸಾಕಷ್ಟು ನಟರು, ನಿರ್ದೇಶಕರು ಮಾತನಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ‘ಶಿವಮ್ಮ’ ಚಿತ್ರದ ಪತ್ರಿಕಾಗೋಷ್ಠಿಯ ನಂತರ ರಿಷಭ್‍ ಶೆಟ್ಟಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.

ಈಗ ಪುನಃ ಒಂದಿಷ್ಟು ಮಾತನಾಡಿದ್ದಾರೆ. ಅದಕ್ಕೆ ವೇದಿಕೆಯಾಗಿದ್ದು ‘ಲಾಫಿಂಗ್‍ ಬುದ್ಧ’ ಚಿತ್ರದ ಹಾಡು ಬಿಡುಗಡೆ ಸಮಾರಂಭ. ಹಾಡು ಬಿಡುಗಡೆಯ ನಂತರ ರಿಷಭ್‍ ಚಿತ್ರರಂಗದ ಕುರಿತು ಕೆಲವು ವಿಷಯಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಇವತ್ತು ಸಿನಿಮಾ ಒಂದೇ ಅಲ್ಲ, ಜನರ ಮುಂದೆ ಹಲವು ಆಯ್ಕೆಗಳಿವೆ ಎಂದು ಹೇಳಿದ್ದಾರೆ.

ಚಿತ್ರಮಂದಿರದಲ್ಲಿ ನೋಡುವಂಥ ಅನುಭವ ಕೊಟ್ಟರೆ ತಾನೇ ಜನ ಚಿತ್ರಮಂದಿರಗಳಿಗೆ ಬರೋದು ಎನ್ನುವ ರಿಷಭ್, ‘ಜನ ಚಿತ್ರ ನೋಡುತ್ತಿಲ್ಲ ಎಂದು ಬಯ್ಯುವುದು ಸರಿಯಲ್ಲ. ಜನ ಚಿತ್ರಮಂದಿರಕ್ಕೆ ಬರೋದು ಅಲ್ಲಿನ ಅನುಭವ ಪಡೆಯೋಕೆ. ಆದರೆ, ಚಿತ್ರಮಂದಿರಗಳಿಗೆ ಸಿನಿಮಾ ಮಾಡೋದನ್ನು ಕಡಿಮೆ ಮಾಡಿದ್ದಾರೆ. ಕಥೆ, ಚಿತ್ರಗಳು ಚೆನ್ನಾಗಿರಬಹುದು. ಆದರೆ, ಚಿತ್ರಮಂದಿರದಲ್ಲಿ ನೋಡುವ ಅನುಭವ ಕೊಟ್ಟರೆ ತಾನೇ ಜನ ಚಿತ್ರಮಂದಿರಗಳಿಗೆ ಬರೋದು. ಆಮೇಲೆ ಜನ ಬರಲಿಲ್ಲ ಎಂದು ಬಯ್ಯುವುದು ಸರಿಯಲ್ಲ. ಜನರಿಗೆ ಸಾವಿರ ಆಯ್ಕೆಗಳಿವೆ. ಒಮ್ಮೆ ಫೋನ್‍ ತೆಗೆದುಕೊಂಡು ಪ್ರತಿದಿನ ಎಷ್ಟು ಸ್ಕ್ರೀನ್ ಸಮಯ ಆಗಿದೆ ಎಂದು ಗಮನಿಸಿ. ಕನಿಷ್ಠವೆಂದರೂ ಪ್ರತಿಯೊಬ್ಬರೂ ನಾಲ್ಕೈದು ಗಂಟೆಗಳ ಕಾಲ ನಾವು ಮೊಬೈಲ್‍ ನೋಡಿರುತ್ತೇವೆ. ಜನ ಹಾಗೆ ಮೊಬೈಲ್‍ ಒಳಗೆ ಕಳೆದುಹೋಗಿದ್ದಾರೆ’ ಎಂದರು.

‘ಸಿನಿಮಾ ಮಾಡುವವರ ಸಂಖ್ಯೆ ಜಾಸ್ತಿಯಾಗಿರುವುದರಿಂದ, ನೋಡೋರು ಕಡಿಮೆಯಾಗಿದ್ದಾರೆ. ಮನೆಯಲ್ಲಿ ಗಂಡ-ಹೆಂಡತಿ ಯಾವುದೋ ವೀಡಿಯೋ ಶೂಟಿಂಗ್ ಮಾಡುತ್ತಿರುತ್ತಾರೆ. ಅವರೇ ಎಡಿಟ್‍ ಮಾಡಿ, ಮ್ಯೂಸಿಕ್‍ ಮಾಡುತ್ತಿರುತ್ತಾರೆ. ಅದು ಮಿಲಿಯನ್‍ಗಟ್ಟಲೆ ವೀಕ್ಷಣೆ ಆಗುತ್ತಿರುತ್ತದೆ. ಅದರ ಕಾಮೆಂಟ್ಸ್ ನೋಡುವುದರಲ್ಲಿ ಅವರು ಬ್ಯುಸಿಯಾಗಿರುತ್ತಾರೆ. ಅವರು ನಮಗಿಂತ ಬಹಳ ಬ್ಯುಸಿಯಾಗಿರುತ್ತಾರೆ. ಹಾಗಿರುವಾಗ ಅವರು ಚಿತ್ರಮಂದಿರಕ್ಕೇಕೆ ಬರುತ್ತಾರೆ?’ ಎಂದರು.

ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಾಭಾವನೆ ಇದೆ ಎಂದ ರಿಷಭ್, ‘ಬಹಳ ದಿನಗಳಿಂದ ಜನ ಚಿತ್ರಮಂದಿರಗಳಿಗೆ ಬಂದಿಲ್ಲ. ‘ಭೀಮ’ದಿಂದ ಜನ ಚಿತ್ರಮಂದಿರಗಳಿಗೆ ಬರಬಹುದು ಎಂಬ ನಂಬಿಕೆ ಇದೆ. ನಂತರ ಗಣೇಶ್‍ ಅವರ ಚಿತ್ರಕ್ಕೆ ಬರಬಹುದು. ‘ಪೌಡರ್‍’ಗೆ ಬರಬಹುದು. ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಇರುವುದರ ಜೊತೆಗೆ, ಚಿತ್ರಮಂದಿರದಲ್ಲಿ ಒಳ್ಳೆಯ ಅನುಭವ ಕೊಡುವ ಚಿತ್ರಗಳಿರುವುದರಿಂದ ಪರಿಸ್ಥಿತಿ ಸರಿ ಹೋಗಬಹುದು ಎಂಬ ನಂಬಿಕೆ ಇದೆ. ಜನರಿಗೂ ಆ ನಂಬಿಕೆ ಉಳಿದರೆ ಜನ ಇನ್ನಷ್ಟು ಸಂಖ್ಯೆಯಲ್ಲಿ ಬರಬಹುದು ಎಂಬ ಆಶಾಭಾವನೆ ಇದೆ’ ಎಂದರು.

Tags:
error: Content is protected !!