ಚಂದನ್ ಶೆಟ್ಟಿ ಅವರ ತಂದೆಗೆ ತಮ್ಮ ಮಗ ಸಿನಿಮಾದಲ್ಲಿ ಹೀರೋ ಆಗಬೇಕು ಎಂಬ ಆಸೆ ಇತ್ತಂತೆ. ಚಂದನ್ ಹೀರೋ ಆಗಿ ಎರಡ್ಮೂರು ವರ್ಷಗಳಾದರೂ, ಅವರು ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಅಭಿನಯಿಸಿರುವ ಯಾವೊಂದು ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗ ‘ಸೂತ್ರಧಾರಿ’ ಇದೇ ಮೇ.09ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಮೂಲಕ ತಂದೆಯ ಆಸೆಯನ್ನು ಪೂರೈಸಿದ್ದಾರೆ ಚಂದನ್.
‘ಸೂತ್ರಧಾರಿ’ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆ ಆಗಿದೆ. ವಿಜಯ್ ಈಶ್ವರ್ ಅವರು ಬರೆದಿರುವ ‘ಸೂತ್ರಧಾರಿ’ ಚಿತ್ರದ ಶೀರ್ಷಿಕೆ ಗೀತೆಯನ್ನು ಚಂದನ್ ಶೆಟ್ಟಿ ಹಾಡುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. A2 ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ.
ಈ ಚಿತ್ರದ ಕುರಿತು ಮಾತನಾಡಿರುವ ಚಂದನ್, ‘ನಾನು ಸಿನಿಮಾದಲ್ಲಿ ನಾಯಕನಾಗಬೇಕೆಂಬ ಆಸೆ ನಮ್ಮ ಅಪ್ಪನದು. ಮೇ.9ನೇ ತಾರೀಖಿನಂದು ಅವರ ಆಸೆ ಈಡೇರುತ್ತಿದೆ. ಗಾಯಕನಾಗಿ ನನ್ನನ್ನು ಜನ ಮೆಚ್ಚಿಕೊಂಡು ಆಶೀರ್ವದ ಮಾಡಿದ್ದಾರೆ. ಈಗ ನಾಯಕನಾಗೂ ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಈ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.
‘ಸೂತ್ರಧಾರಿ’ ಚಿತ್ರದ ‘ಡ್ಯಾಶ್’ ಹಾಡು ನಿರೀಕ್ಷೆಗೂ ಮೀರಿ ಜನಪ್ರಿಯವಾಗಿತ್ತು. ‘ಈ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ. ಉತ್ತಮ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ’ ಎಂದರು ಚಂದನ್ ಶೆಟ್ಟಿ.
ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ 1800ಕ್ಕೂ ಅಧಿಕ ಚಿತ್ರಗಳ ಇವೆಂಟ್ ಗಳನ್ನು ಆಯೋಜಿಸಿರುವ ನವರಸನ್, ‘ಸೂತ್ರಧಾರಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಸೂತ್ರಧಾರಿ’ ಚಿತ್ರಕ್ಕೆ ಕಿರಣ್ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘ಸೂತ್ರಧಾರಿ’ ಚಿತ್ರದಲ್ಲಿ ಚಂದನ್ ಶೆಟ್ಟಿಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದು, ಸಂಜನಾ ಆನಂದ್ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.





