Mysore
18
overcast clouds

Social Media

ಭಾನುವಾರ, 25 ಜನವರಿ 2026
Light
Dark

ಸೆ.28ರಿಂದ ‘ಬಿಗ್‍ ಬಾಸ್‍- ಸೀಸನ್‍ 12’ ಪ್ರಾರಂಭ: ಸುದೀಪ್‍ ನಿರೂಪಣೆ

‘ಬಿಗ್‍ ಬಾಸ್‍ – ಸೀಸನ್‍ 12’ರ ಪ್ರಾರಂಭ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದ್ದು, ಸೆ.28ರಿಂದ ‘ಬಿಗ್‍ ಬಾಸ್‍’, ಕಲರ್ಸ್ ಕನ್ನಡದಲ್ಲಿ ಮತ್ತೆ ಪ್ರಾರಂಭವಾಗಲಿದೆ. ಹಾಗೆಂದು ಕಲರ್ಸ್ ಕನ್ನಡ, ಸೋಷಿಯಲ್‍ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದೆ.

‘ಬಿಗ್‍ ಬಾಸ್‍ – ಸೀಸನ್‍ 11’ ತಮ್ಮ ಕೊನೆಯ ಸೀಸನ್‍ ಆಗಲಿದೆ ಎಂದು ಕಳೆದ ವರ್ಷದ ಅಕ್ಟೋಬರ್‍ ತಿಂಗಳಲ್ಲೇ ಸುದೀಪ್‍ ಘೋಷಿಸಿದ್ದರು. ಈ ಬಾರಿಯ ಗ್ರಾಂಡ್‍ ಫಿನಾಲೆ ತಮ್ಮ ಕೊನೆಯ ಗ್ರಾಂಡ್‍ ಫಿನಾಲೆ ಆಗಲಿದೆ ಎಂದು ಸಹ ಸುದೀಪ್‍ ಹೇಳಿಕೊಂಡಿದ್ದರು. ಹೀಗಿರುವಾಗಲೇ, ‘ಬಿಗ್‍ ಬಾಸ್‍’ನ 12 ಸೀಸನ್‍ ನಡೆಸಿಕೊಡುವುದಕ್ಕೆ ಅವರು ಮುಂದಾಗಿದ್ದಾರೆ. ಬರೀ ಈ ವರ್ಷವಷ್ಟೇ ಅಲ್ಲ, ಇನ್ನೂ ನಾಲ್ಕು ಸೀಸನ್‍ಗಳ ನಿರೂಪಣೆ ಮಾಡಲಿದ್ದಾರಂತೆ.

ಇತ್ತೀಚೆಗೆ, ‘ಬಿಗ್‍ ಬಾಸ್‍ – ಸೀಸನ್‍ 12’ ಕಾರ್ಯಕ್ರಮದ ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್‍, ‘ನಾನು ಕಾರ್ಯಕ್ರಮವನ್ನು ನಿರೂಪಿಸುವುದಿಲ್ಲ ಎಂದು ಕಳೆದ ವರ್ಷದ ಸೀಸನ್‍ ಪ್ರಾರಂಭದಲ್ಲೇ ಹೇಳಿದ್ದೆ. ಅದಕ್ಕೆ ಕಾರಣವಿತ್ತು. ಈಗ ವಾಪಸ್ಸು ಬರುತ್ತಿರುವುದಕ್ಕೂ ಕಾರಣವಿದೆ. ನಾನು ವಾಪಸ್ಸು ಬರುತ್ತಿರುವುದಕ್ಕೆ ಮುಖ್ಯ ಕಾರಣ, ಜನರ ಪ್ರೀತಿ. ಬಹಳಷ್ಟು ಜನ ನಾನು ಕಾರ್ಯಕ್ರಮವನ್ನು ಮುಂದುವರೆಸಬೇಕು ಎಂದು ಆಸೆ ಪಟ್ಟಿದ್ದಾರೆ. ಕಾರ್ಯಕ್ರಮ ಬೆಳೆಯುತ್ತಿರುವ ರೀತಿ ಮತ್ತು ಜನ ಅದನ್ನು ಪ್ರೀತಿಯಿಂದ ನೋಡುತ್ತಿರುವ ರೀತಿ ನೋಡಿ ನಾನು ವಾಪಸ್ಸು ಬರುವುದಕ್ಕೆ ಒಪ್ಪಿದೆ. ಕಳೆದ ಮೂರು ವರ್ಷಗಳಲ್ಲಿ ಕಾರ್ಯಕ್ರಮ ಬಹಳ ದೊಡ್ಡದಾಗಿ ಬೆಳೆದಿದೆ. ಜನ ಐಪಿಎಲ್‍ ಮಟ್ಟಕ್ಕೆ ಈ ಕಾರ್ಯಕ್ರಮವನ್ನು ನೋಡುತ್ತಾರೆ. ಈ ಕಾರ್ಯಕ್ರಮವನ್ನು ಇನ್ನಷ್ಟು ಚೆನ್ನಾಗಿ ರೂಪಿಸುವುದು ನಮ್ಮ ಜವಾಬ್ದಾರಿ ಸಹ ಹೌದು ಎಂದು ಹೇಳಿದ್ದರು.

ಸದ್ಯ ಬರೀ ಕಾರ್ಯಕ್ರಮದ ಪ್ರಾರಂಭದ ಘೋಷಣೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ, ವಿಶೇಷತೆಗಳೇನು ಎಂಬ ವಿಷಯಗಳ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿವೆ.

Tags:
error: Content is protected !!