Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಮುಂದಿನದಕ್ಕೆ ತಯಾರಾಗಿರಿ; ಸಮರ್ಜಿತ್‍ ಮತ್ತು ಸಾನ್ಯಾಗೆ ಹಾರೈಸಿದ ಸುದೀಪ್‍

ಇಂದ್ರಜಿತ್ ಲಂಕೇಶ್‍ ತಮ್ಮ ಮಗ ಸಮರ್ಜಿತ್‍ ಲಂಕೇಶ್‍ಗಾಗಿ ನಿರ್ಮಿಸಿ-ನಿರ್ದೇಶಿಸಿರುವ ‘ಗೌರಿ’ ಚಿತ್ರವು ಇದೇ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಸೋಮವಾರ ನಟ ಸುದೀಪ್‍ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಇಂದ್ರಜಿತ್‍ ಮತ್ತು ನಾನು ಹಳೆಯ ಗೆಳೆಯರು. ಇಬ್ಬರೂ ಜೊತೆಗೆ ಬ್ಯಾಡ್ಮಿಂಟನ್‍ ಆಡುತ್ತಿದ್ದೆವು. ಇಂದ್ರಜಿತ್, ಲಂಕೇಶ್‍ ಅವರ ಮಗ ಅಂತ ನನಗೆ ಗೊತ್ತಿರಲಿಲ್ಲ. ಅವರು ಬಹಳ ಚೆನ್ನಾಗಿ ಶಟಲ್‍ ಆಡೋರು. ಅವರ ಜೊತೆಗೆ ಆಡಬೇಕು ಎಂದು ಬೇಗ ಹೋಗುತ್ತಿದ್ದೆ. ಅವರಿಗೆ ಸೋಲುವುದಕ್ಕೆ ಇಷ್ಟವಿಲ್ಲ. ಅದು ಅವರ ವ್ಯಕ್ತಿತ್ವ. ಈಗ ಸ್ವಲ್ಪ ಮಾಗಿದ್ದಾರೆ. ಸೋಲನ್ನು ಒಪ್ಪಿಕೊಳ್ಳೋದನ್ನು ಕಲಿತಿದ್ದಾರೆ’ ಎಂದರು.

ಇವತ್ತು ಅಪ್ಪ-ಮಗನಿಗೆ ವಿಶೇಷ ದಿನ ಎಂದ ಸುದೀಪ್‍, ‘ಟ್ರೇಲರ್ ನೋಡಿ ನಮ್ಮ ವಿಮರ್ಶೆ, ಅಭಿಪ್ರಾಯ ಏನೇ ಇರಲಿ. ಇವತ್ತು ಅವರಿಬ್ಬರಿಗೆ ಆಗುವಷ್ಟು ಸಂತೋಷ, ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಆಗೋದಕ್ಕೆ ಸಾಧ್ಯವೇ ಇಲ್ಲ. ಸಮರ್ಜಿತ್‍ನ ಯಶಸ್ಸು ಅವನೊಬ್ಬನ ಯಶಸ್ಸು ಆಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್‍ ಯಶಸ್ಸೂ ಇದೆ’ ಎಂದರು.

ಟ್ರೇಲರ್‍ನ ಕೊನೆಗೆ ಬರುವ ಒಂದು ಮಾತು ಇಂದ್ರಜಿತ್‍ ಅವರ ಮನಸ್ಸಿನ ಮಾತು ಎಂದ ಸುದೀಪ್‍, ‘ಎಷ್ಟೋ ತರಲೆಗಳನ್ನು ನೋಡಿರುವ ತಲೆಮಾರು ನಮ್ಮದು, ನಿಮ್ಮ ತಲೆಮಾರಿಗೆ ಹೆದರುತ್ತೀನಾ? ಅಂತ ಹೀರೋ ಹೇಳುವ ಸಂಭಾಷಣೆ ಇಂದ್ರಜಿತ್‍ ಅವರ ಮನಸ್ಸಿನ ಮಾತು. ಇಂದ್ರಜಿತ್‍ ತಮ್ಮ ಮಗನ ಮೂಲಕ ಈ ಮಾತನ್ನು ಪ್ರಪಂಚಕ್ಕೆ ಹೇಳಿದ್ದಾರೆ. ಅವರು ಮಗನಿಗಾಗಿ ಬೇರೆ ತರಹದ ಚಿತ್ರ ಮಾಡಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಇಂದ್ರಜಿತ್‍ ಲಂಕೇಶ್, ‘ಹಿಂದೆ ನನ್ನ ನಿರ್ದೇಶನದ ‘ತುಂತಾಟ’ ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಆದರೆ, ಅವರು ನನ್ನಿಂದ ಯಾವ ಸಂಭಾವನೆಯನ್ನು ಪಡೆದಿರಲಿಲ್ಲ. ಆಮೇಲೆ ನಾನು ಅವರಿಗೆ ಏನು ಕೊಡುವುದು? ಅವರ ಬಳಿ ಎಲ್ಲಾ ಇದೆ ಎಂದು ಕೊಂಡು, ಅವರ ಮಗಳಿಗೆ ವಿಶೇಷ ಉಡುಗೊರೆ ತೆಗೆದುಕೊಂಡು ಅವರ ಮನೆಗೆ ಹೋದೆ. ಆದರೆ, ಸುದೀಪ್ ಅವರು ಅದನ್ನು ನನಗೆ ಕೊಡಲು ಬಿಡಲಿಲ್ಲ. ಇಂದು ನನ್ನ ಮಗನ ಮೊದಲ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ.. ಇಂದು ಕೂಡ ನನ್ನ ಬಳಿ ಅವರು ಯಾವ ಉಡುಗೊರೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಅವರಿಗಾಗಿ ಇಂಗ್ಲೆಂಡ್ ನಿಂದ ವಿಶೇಷ ಬ್ಯಾಟ್ ತರಿಸಿದ್ದೇನೆ’ ಎಂದು ಇಂದ್ರಜಿತ್ ತಿಳಿಸಿದರು.

‘ಗೌರಿ’ ಚಿತ್ರದ ಮೂಲಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನೈಜ ಘಟನೆ ಆಧರಿಸಿ ನಿರ್ಮಾಣವಾಗಿರುವ ‘ಗೌರಿ’ ಚಿತ್ರದಲ್ಲಿ ‘ಲೂಸ್ ಮಾದ’ ಖ್ಯಾತಿಯ ಯೋಗಿ, ಪ್ರಿಯಾಂಕಾ ಉಪೇಂದ್ರ, ಮಾನಸಿ ಸುಧೀರ್‍ ಮುಂತಾದವರು ನಟಿಸಿದ್ದಾರೆ.

Tags: