Mysore
25
overcast clouds

Social Media

ಸೋಮವಾರ, 21 ಏಪ್ರಿಲ 2025
Light
Dark

600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬ್ಯಾಂಕ್‍ ಜನಾರ್ಧನ್‍ ಇನ್ನಿಲ್ಲ

ಕನ್ನಡ ಚಿತ್ರರಂಗದಲ್ಲಿ ಬ್ಯಾಂಕ್‍ ಜನಾರ್ಧನ್‍ ಎಂದೇ ಜನಪ್ರಿಯವಾಗಿದ್ದ ಹಿರಿಯ ನಟ ಜನಾರ್ಧನ್‍, ರಾತ್ರಿ 2.3ರ ಸುಮಾರಿಗೆ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಮೂಲತಃ ಚಿತ್ರದುರ್ಗದ ಹೊಳಲ್ಕೆಯವರಾದ ಜನಾರ್ಧನ್‍ ಓದಿದ್ದು 10ನೇ ಕ್ಲಾಸಿನವರೆಗೆ ಮಾತ್ರ. ಕಡು ಬಡ ಕುಟುಂಬದವರಾದ ಜನಾರ್ಧನ್‍, ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬೆಳೆದವರು. ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದ ಜನಾರ್ಧನ್‍, ಜಯಲಕ್ಷ್ಮೀ ಬ್ಯಾಂಕ್‍ನಲ್ಲಿ ಜವಾನನಾಗಿ ಕೆಲಸಕ್ಕೆ ಸೇರಿದರು. ಜೊತೆಗೆ ಮಲ್ಲಿಕಾರ್ಜುನ ಟೂರಿಂಗ್‍ ಟಾಕೀಸ್‍ ಎಂಬ ಟಾಕೀಸ್‍ನಲ್ಲೂ ಕೆಲಸ ಮಾಡುತ್ತಿದ್ದರು. ಹೀಗಿರುವಾಗಲೇ, ಅವರ ಅಭಿನಯದ ‘ಗೌಡ್ರ ಗದ್ಲ’ ನಾಟಕ ಯಶಸ್ವಿಯಾಯಿತು. ಈ ನಾಟಕವನ್ನು ವೀಕ್ಷಿಸಿದ ಹಿರಿಯ ನಟ ಧೀರೇಂದ್ರ ಗೋಪಾಲ್‍, ಜನಾರ್ಧನ್‍ ಅವರನ್ನು ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರೋತ್ಸಾಹಿಸಿದರು.

ಒಮ್ಮೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ, ಜನಾರ್ಧನ್‍ ಅವರನ್ನು ‘ಸಾಹಸ ಸಿಂಹ’ ಚಿತ್ರದ ಚಿತ್ರೀಕರಣಕ್ಕೆ ಕರೆದುಕೊಂಡು ಹೋದರಂತೆ ಧೀರೇಂದ್ರ ಗೋಪಾಲ್‍. ಅಲ್ಲಿ ಕುಣಿಗಲ್‍ ನಾಗಭೂಷಣ್‍ ಅವರ ಪರಿಚಯವಾಗಿ, ‘ಊರಿಗೆ ಉಪಕಾರಿ’ ಚಿತ್ರದಲ್ಲೊಂದು ಪಾತ್ರ ಸಿಕ್ಕಿತಂತೆ. ವಜ್ರಮುನಿ ಅವರ ಬಾಡಿಗಾರ್ಡ್ ಪಾತ್ರದಲ್ಲಿ ಗಮನಸೆಳೆದ ಜನಾರ್ಧನ್‍, ನಂತರ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದರಂತೆ. ಲಾಯರ್‍, ಡಾಕ್ಟರ್‍, ಇನ್‍ಸ್ಪೆಕ್ಟರ್ ಹೀಗೆ ಒಂದೊಂದೇ ದೃಶ್ಯವಿರುವ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ.

ಜನಾರ್ಧನ್‍ ಅವರಿಗೆ ದೊಡ್ಡ ಬ್ರೇಕ್‍ ನೀಡಿದ ಚಿತ್ರವೆಂದರೆ ಅದು ಕಾಶೀನಾಥ್‍ ಅಭಿನಯದ ‘ಅಜಗಜಾಂತರ’. ಈ ಚಿತ್ರದಲ್ಲಿ ಬ್ರೋಕರ್‍ ಭೀಮಯ್ಯ ಎಂಬ ಕಾಮಿಡಿ ವಿಲನ್‍ ಪಾತ್ರ ಮಾಡಿ ಜನಪ್ರಿಯವಾದ ಅವರು, ನಂತರ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದಲ್ಲಿ ಪರಂಧಾಮಯ್ಯ ಊರುಬಾಗಿಲ್‍ ಪಾತ್ರದಲ್ಲಿ ದೊಡ್ಡ ಹೆಸರು ಮಾಡಿದರು. ಅಲ್ಲಿಂದ ಅವರ ಮತ್ತು ಜಗ್ಗೇಶ್‍ ಅವರ ಜೋಡಿ ಜನಪ್ರಿಯವಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸುವಂತಾಯಿತು.
ಮುಂದಿನ ದಿನಗಳಲ್ಲಿ ‘ಶ್‍’, ‘ಮೇಕಪ್‍’, ‘ಮಿಸ್ಟರ್ ಬಕ್ರ’, ‘ಓಳು ಸಾರ್ ಬರೀ ಓಳು’, ‘ರೂಪಾಯಿ ರಾಜ’, ‘ಬೊಂಬಾಟ್‍ ಹೆಂಡ್ತಿ’ ಸೇರಿದಂತೆ ಇದುವರೆಗೂ 600 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2023ರಲ್ಲಿ ಬಿಡುಗಡೆಯಾದ ‘ಉಂಡೆನಾಮ’ ಚಿತ್ರವು ಅವರ ಕೊನೆಯ ಚಿತ್ರವಾಯ್ತು. ಕೆಲವು ವರ್ಷಗಳ ಹಿಂದೆಯೇ ಹೃದಯದ ಚಿಕಿತ್ಸೆಗೆ ಒಳಗಾಗಿದ್ದ ಅವರು, ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ರಾತ್ರಿ 2.30ರ ಹೊತ್ತಿಗೆ ಅವರು ನಿಧನರಾಗಿದ್ದಾರೆ.

ಜನಾರ್ಧನ್‍ ಅವರ ಮಗ ಗುರುಪ್ರಸಾದ್‍, ‘ಅಗ್ನಿಮುಷ್ಠಿ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Tags: