ಆಗಾಗ ತಮ್ಮ ಚಿತ್ರದ ಒಂದೊಂದು ಪಾತ್ರವನ್ನು ಪರಿಚಯಿಸುತ್ತಲೇ ಇದ್ದರು ನಿರ್ದೇಶಕ ಪಿ.ಸಿ.ಶೇಖರ್. ಆದರೆ, ತಮ್ಮ ನಿರ್ದೇಶನದ ‘BAD’ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಆ ಚಿತ್ರಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದ್ದು, ‘BAD’ ಮಾರ್ಚ್.28ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಈ ಹಿಂದೆ ‘ಪ್ರೀತಿಯ ರಾಯಭಾರಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ ಅಭಿನಯಿಸಿರುವ ‘BAD’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ವೆಂಕಟೇಶ್ ಗೌಡ ನಿರ್ಮಿಸುತ್ತಿದ್ದು, ನಕುಲ್ ಗೌಡ, ಮಾನ್ವಿತಾ ಅಲ್ಲದೆ ಹರೀಶ್, ಸಾಯಿಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಇದು ನನ್ನ ನಿರ್ದೇಶನದ 11ನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಪಿ.ಸಿ.ಶೇಖರ್, ‘ಇದೊಂದು ವಿಭಿನ್ನ ಚಿತ್ರಕಥೆಯುಳ್ಳ ಚಿತ್ರ. ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ಈ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಚಿತ್ರ ಇದೇ ತಿಂಗಳ 28 ರಂದು ತೆರೆಗೆ ಬರಲಿದೆ ಎಂದರು.
ಈ ಚಿತ್ರಕ್ಕೆ ‘ಬ್ಯಾಡ್’ ಎಂಬ ಹೆಸರಿಡಲೂ ಕಾರಣವಿದೆ. ಇಲ್ಲಿ ನಾಯಕ, ನಾಯಕಿಯಷ್ಟೇ ಅಲ್ಲ, ಎಲ್ಲರೂ ವಿಲನ್ಗಳೇ ಆಗಿರುತ್ತಾರಂತೆ. ಅಕಿರಾ ಕುರುಸಾವಾ ನಿರ್ದೇಶನದ ಜಪಾನ್ ಚಿತ್ರ ರಾಶೋಮಾನ್ ಮಾದರಿಯಲ್ಲಿ ಈ ಚಿತ್ರ ಇರಲಿದ್ದು, ಒಂದೇ ಕಥೆಯನ್ನೇ ಹಲವು ದೃಷ್ಟಿಕೋನಗಳಲ್ಲಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.
‘BAD’, ನಕುಲ್ ಗೌಡ ನಟಿಸಿರುವ ಎರಡನೇ ಚಿತ್ರ. ಈ ಚಿತ್ರದ ಕುರಿತು ಮಾತನಾಡುವ ನಕುಲ್, ‘ಪಿ.ಸಿ. ಶೇಖರ್ ಅವರ ನಿರ್ದೇಶನದಲ್ಲಿ ಈ ಚಿತ್ರ ಚೆನ್ನಾಗಿ ಬಂದಿದೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಆಗದಂತಹ ಚಿತ್ರವಿದು. ನನ್ನ ಪಾತ್ರ ಕೂಡ ವಿಭಿನ್ನವಾಗಿದೆ’ ಎಂದರು.
ಇದು ಶೇಖರ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೋಡಿಯ ಒಂಬತ್ತನೇ ಚಿತ್ರ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ, ಸಂಕಲನವನ್ನೂ ಶೇಖರ್ ಅವರೇ ಮಾಡಿದ್ದಾರೆ. ಶೇಖರ್ ಅವರ ‘ರಾಗ’ ಹಾಗೂ ‘ದಿ ಟೆರರಿಸ್ಟ್’ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದ ಸಚಿನ್ ಬಿ. ಹೊಳಗುಂಡಿ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ.





