Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಕಾರ್ತಿಗೆ ನಾಯಕಿಯಾದ ಆಶಿಕಾ ರಂಗನಾಥ್‍; ‘ಸರ್ದಾರ್ 2’ ಚಿತ್ರದಲ್ಲಿ ನಟನೆ

ರಶ್ಮಿಕಾ ಮಂದಣ್ಣ, ನಭಾ ನಟೇಶ್‍, ಶ್ರೀಲೀಲಾ ನಂತರ ಕನ್ನಡದ ಮತ್ತೊಬ್ಬ ನಟಿ ಕನ್ನಡ ಚಿತ್ರರಂಗದಿಂದ ಬಹುತೇಕ ದೂರವಾಗುತ್ತಿರುವಂತೆ ಕಾಣುತ್ತಿದೆ. ಅದು ಬೇರ್ಯಾರೂ ಅಲ್ಲ ಆಶಿಕಾ ರಂಗನಾಥ್‍. ಆಶಿಕಾ ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕಿಂತ ಬೇರೆ ಭಾಷೆಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರ ಚಿತ್ರಗಳ ಪಟ್ಟಿಯಲ್ಲಿ ಇನ್ನೊಂದು ಪರಭಾಷಾ ಚಿತ್ರವು ಸೇರಿಕೊಂಡಿದೆ.

ತಮಿಳು ನಟ ಕಾರ್ತಿ ಅಭಿನಯದ ‘ಸರ್ದಾರ್ 2’ ಚಿತ್ರಕ್ಕೆ ಆಶಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ವಿಷಯವನ್ನು ಅವರೇ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಆಶಿಕಾ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಅವರನ್ನು ಚಿತ್ರಕ್ಕೆ ಅಧಿಕೃತವಾಗಿ ಬರಮಾಡಿಕೊಂಡಿದ್ದಾರೆ. ಆಶಿಕಾ ಸಹ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಒಂದು ಭಾಗ ಮಾಡಿಕೊಂಡಿದ್ದಿಕ್ಕೆ ಚಿತ್ರತಂಡದವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಅಂದಹಾಗೆ, ‘ಸರ್ದಾರ್‍ 2’ ಚಿತ್ರವನ್ನು ಪ್ರಿನ್ಸ್ ಪಿಕ್ಚರ್ಸ್ ಸಂಸ್ಥೆಯವರು ನಿರ್ಮಿಸುತ್ತಿದ್ದು, ಕಾರ್ತಿಗೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಈ ಪೈಕಿ ಆಶಿಕಾ ಒಬ್ಬರಾದರೆ, ಮಾಳವಿಕಾ ಮೋಹನನ್ ಇನ್ನೊಬ್ಬ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವನ್‍ ಶಂಕರ್‍ ರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಆಶಿಕಾಗೆ ತಮಿಳು ಚಿತ್ರರಂಗ ಹೊಸದೇನಲ್ಲ. ಇದು ಅವರ ಮೂರನೆಯ ಚಿತ್ರ. ಅಥರ್ವ ಅಭಿನಯದ ‘ಪಟ್ಟತ್ತು ಅರಸನ್‍’ ಚಿತ್ರದ ಮೂಲಕ ತಮಿಳಿಗೆ ಹೋದ ಆಶಿಕಾ, ಆ ನಂತರ ‘ಮಿಸ್ ಯೂ’ ಎಂಬ ಇನ್ನೊಂದು ಚಿತ್ರದಲ್ಲೂ ನಟಿಸಿದ್ದಾರೆ. ಈಗ ಕಾರ್ತಿಯಂತಹ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದಲ್ಲದೆ, ತೆಲುಗಿನಲ್ಲಿ ಒಂದು ದೊಡ್ಡ ಚಿತ್ರಕ್ಕೂ ಆಶಿಕಾ ಸೇರ್ಪಡೆಯಾಗಿದ್ದಾರೆ. ಚಿರಂಜೀವಿ ಅಭಿನಯದ ‘ವಿಶ್ವಂಬರಾ’ ಎಂಬ ಚಿತ್ರದಲ್ಲಿ ಆಶಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಅಂದಹಾಗೆ, ‘ಅವತಾರ ಪುರುಷ 2’ ಚಿತ್ರದ ನಂತರ ಆಶಿಕಾ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಅದೂ ಸಹ ನಾಲ್ಕು ವರ್ಷಗಳ ಹಿಂದೆಯೇ ಒಪ್ಪಿಕೊಂಡ ಚಿತ್ರವಾಗಿತ್ತು. ಕನ್ನಡದಿಂದ ಸೂಕ್ತ ಅವಕಾಶಗಳು ಸಿಗುತ್ತಿಲ್ಲವೋ ಅಥವಾ ಪರಭಾಷಾ ಚಿತ್ರಗಳಿಂದ ಪುರುಸೊತ್ತು ಸಿಗುತ್ತಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಆಶಿಕಾ ರಂಗನಾಥ್‍ ಇತ್ತೀಚೆಗೆ ಯಾವುದೇ ಕನ್ನಡ ಚಿತ್ರವನ್ನೂ ಒಪ್ಪಿಲ್ಲ.

Tags: