Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಉಪೇಂದ್ರರಿಂದ ಪ್ರಭಾವಗೊಂಡಿದ್ದೇನೆ ಎಂದ ‘ಪುಷ್ಪ’ ನಿರ್ದೇಶಕ ಸುಕುಮಾರ್

seetha payanam

ನಟ-ನಿರ್ದೇಶಕ ಉಪೇಂದ್ರ ಅವರ ಅಭಿಮಾನಿ ಬಳಗ ದೊಡ್ಡದಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗಿನ ಹಲವು ಜನಪ್ರಿಯ ನಿರ್ದೇಶಕರು ತಾವು ಉಪೇಂದ್ರ ಅವರ ಅಭಿಮಾನಿಗಳು ಮತ್ತು ತಾವು ಉಪೇಂದ್ರ ಅವರ ನಿರ್ದೇಶನ ಶೈಲಿಯಿಂದ ಸಾಕಷ್ಟು ಪ್ರಭಾವಗೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈಗ ಆ ಸಾಲಿಗೆ ತೆಲುಗಿನ ಖ್ಯಾತ ನಿರ್ದೇಶಕ ‘ಪುಷ್ಪ’ ಖ್ಯಾತಿಯ ಸುಕುಮಾರ್ ಸಹ ಸೇರಿದ್ದಾರೆ.

ಬುಧವಾರ ಹೈದರಾಬಾದ್‍ನಲ್ಲಿ ಅರ್ಜುನ್‍ ಸರ್ಜಾ ನಿರ್ದೇಶನದ ‘ಸೀತಾ ಪಯಣಂ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಸಮಾರಂಭಕ್ಕೆ ನಟ ಉಪೇಂದ್ರ ಮತ್ತು ಸುಕುಮಾರ್ ಇಬ್ಬರೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸುಕುಮಾರ್, ಉಪೇಂದ್ರ ಕುರಿತು ಮಾತನಾಡಿರುವುದಷ್ಟೇ ಅಲ್ಲ, ಅವರಿಂದ ಹಲವು ವಿಷಯಗಳನ್ನು ಕದ್ದಿರುವುದಾಗಿ ಹೇಳಿಕೊಂಡಿದ್ದಾರೆ.

‘ಇಡೀ ದೇಶದಲ್ಲಿ ಉಪೇಂದ್ರರ ತರಹ ವಿಭಿನ್ನವಾಗಿ ಯೋಚಿಸುವ ಇನ್ನೊಬ್ಬ ನಿರ್ದೇಶಕ ಸಿಗುವುದಿಲ್ಲ. ಒಬ್ಬ ನಿರ್ದೇಶಕ ‘ಎ’, ‘ಓಂ’ ಮತ್ತು ‘ಉಪೇಂದ್ರ’ದಂತಹ ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರೆ, ಅವರು ರಿಟೈರ್ ಆಗಬಹುದಿತ್ತು. ನಾನೇನಾದರೂ ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದರೆ, ಖಂಡಿತಾ ರಿಟೈರ್ ಆಗುತ್ತಿದ್ದೆ. ಪ್ರತಿಯೊಬ್ಬ ನಿರ್ದೇಶಕರೂ ಅವರಿಂದ ಒಂದಲ್ಲ ಒಂದು ರೀತಿ ಪ್ರೇರಣೆಗೊಂಡಿದ್ದಾರೆ. ಇವತ್ತು ನನ್ನ ಚಿತ್ರಗಳೇನಾದರೂ ವಿಭಿನ್ನವಾಗಿದ್ದರೆ, ಅದಕ್ಕೆ ಉಪೇಂದ್ರರ ಚಿತ್ರಗಳೇ ಪ್ರೇರಣೆ. ನಾನು ಆ ಮೂರು ಚಿತ್ರಗಳಿಂದ ಬಹಳ ಪ್ರಭಾವಗೊಂಡಿದ್ದೇನೆ. ಅಲ್ಲಿಂದ ಸಾಕಷ್ಟು ವಿಷಯಗಳನ್ನು ಕದ್ದಿದ್ದೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪೇಂದ್ರ, ‘ನಾನೊಬ್ಬನೇ ಅಲ್ಲ, ಬಹಳಷ್ಟು ನಿರ್ದೇಶಕರು ಸುಕುಮಾರ್ ಅವರ ಅಭಿಮಾನಿಗಳು. ಒಂದು ಕಥೆಯನ್ನು ವಿಭಿನ್ನವಾಗಿ ಕಮರ್ಷಿಯಲ್‍ ಆಗಿ ಹೇಗೆ ಮಾಡಬೇಕು ಎಂದು ತೋರಿಸಿಕೊಟ್ಟವರು ಅವರು’ ಎಂದರು.

‘ಸೀತಾ ಪಯಣಂ’ ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‍ ನಾಯಕನಾಗಿ ಆಭಿನಯಿಸಿದ್ದು, ಅವರಿಗೆ ನಾಯಕಿಯಾಗಿ ಅರ್ಜುನ್‍ ಸರ್ಜಾ ಅವರ ಮಗಳು ಐಶ್ವರ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಅರ್ಜುನ್‍ ಸರ್ಜಾ ನಿರ್ಮಿಸಿ-ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

Tags:
error: Content is protected !!