ಅರವಿಂದ್ ಕೌಶಿಕ್ ನಿರ್ದೇಶನದ ಹೊಸ ಚಿತ್ರದಲ್ಲಿ ಉಪೇಂದ್ರ ನಾಯಕನಾಗಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಬಂದಿತ್ತು. ‘ನೆಕ್ಸ್ಟ್ ಲೆವೆಲ್’ ಹೆಸರಿನ ಈ ಚಿತ್ರಕ್ಕೆ ಇದೀಗ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
‘ಕಾಟೇರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದ ಆರಾಧನಾ, ಈ ಒಂದೂವರೆ ವರ್ಷಗಳಲ್ಲಿ ಯಾವ ಚಿತ್ರವನ್ನೂ ಒಪ್ಪಿಕೊಮಡಿರಲಿಲ್ಲ. ಮೊದಲ ಸಿನಿಮಾದಲ್ಲಿಯೇ ದರ್ಶನ್ ಅವರಂತಹ ಸ್ಟಾರ್ ಹೀರೋಗೆ ಜೋಡಿಯಾಗಿ ಅಭಿನಯಿಸಿದ್ದ ಆರಾಧನಾ, ಈಗ ಕನ್ನಡ ಚಿತ್ರರಂಗದ ಮತ್ತೊಬ್ಬ ಜನಪ್ರಿಯ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ವಾಪಸ್ಸಾಗಿದ್ದಾರೆ.
ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತರುಣ್ ಶಿವಪ್ಪ ‘ನೆಕ್ಸ್ಟ್ ಲೆವೆಲ್’ ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದು, ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿರಲಿದೆಯಂತೆ. ಬೆಂಗಳೂರಿನಲ್ಲಿ ಸದ್ಯದಲ್ಲೇ ‘ನೆಕ್ಸ್ಟ್ ಲೆವೆಲ್’ ಸಿನಿಮಾದ ಅದ್ಧೂರಿ ಮುಹೂರ್ತ ನಡೆಯಲಿದ್ದು, ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ಭಾರತದ ಹಲವು ಕಡೆ ಚಿತ್ರದ ಚಿತ್ರೀಕರಣ ನಡೆಯಲಿದೆ.
ಸಿನಿಮಾದ ಹೆಚ್ಚಿನ ಭಾಗ ವಿಎಫ್‌ಎಕ್ಸ್‌ನಿಂದ ಕೂಡಿರಲಿದ್ದು, ಇದಕ್ಕಾಗಿ ಚಿತ್ರತಂಡವು ಕೆನಡಾ ಸೇರಿದಂತೆ ಅನೇಕ ವಿದೇಶಿ ಗ್ರಾಫಿಕ್ಸ್ ಸ್ಟುಡಿಯೋಗಳು ಹಾಗೂ ಭಾರತದ ಪ್ರತಿಷ್ಠಿತ ಗ್ರಾಫಿಕ್ಸ್ ನಿರ್ಮಾಣ ಸಂಸ್ಥೆಗಳ ಸಹಯೋಗದೊಂದಿಗೆ ಪ್ಯಾನ್ ಇಂಡಿಯಾ ಮಟ್ಟದ ಈ ದೊಡ್ಡ ಸಿನಿಮಾವನ್ನು ಕಡಿಮೆ ಅವಧಿಯಲ್ಲಿ ನಿರ್ಮಿಸುವ ಗುರಿ ಹೊಂದಿದೆ.
ಉಪೇಂದ್ರ ಮತ್ತು ಆರಾಧನಾ ರಾಮ್ ಹೊರತುಪಡಿಸಿದರೆ, ಮಿಕ್ಕಂತೆ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎಂಬ ವಿಷಯವನ್ನು ಚಿತ್ರತಂಡ ಬಹಿರಂಗಗೊಳಿಸಿಲ್ಲ. ಈ ಹಿಂದೆ, ತರುಣ್‍್ ಶಿವಪ್ಪ ‘ಛೂ ಮಂತರ್’ ಚಿತ್ರದ ಛಾಯಾಗ್ರಾಹಕ ಅನೂಪ್ ಕಟ್ಟುಕರನ್ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಮತ್ತು ಉಳಿದ ತಂತ್ರಜ್ಞರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.





