Mysore
19
overcast clouds
Light
Dark

ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ 25 ವರ್ಷ ಪೂರೈಸಿದ ಅನು ಪ್ರಭಾಕರ್

ನಟಿ ಅನು ಪ್ರಭಾಕರ್‍, ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಬಂದವರು. ಒಂದಿಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಶಿವರಾಜಕುಮಾರ್ ಅಭಿನಯದ ‘ಹೃದಯ ಹೃದಯ’ ಚಿತ್ರದ ಮೂಲಕ ನಾಯಕಿಯಾದರು. ಅವರು ನಾಯಕಿಯಾಗಿ ಇದೀಗ 25 ವರ್ಷಗಳನ್ನು ಪೂರೈಸಿದ್ದಾರೆ.

ಅನು ಪ್ರಭಾಕರ್ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ‘ಹೃದಯ ಹೃದಯ’, 1999ರ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಆ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಅವರು, ಈ 25 ವರ್ಷಗಳಲ್ಲಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಭಾನುವಾರಕ್ಕೆ (ಸೆ.15) ಅವರು ನಟಿಸಿದ ಮೊದಲ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿವೆ.

ಹೀಗಿರುವಾಲೇ, ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಹಗ್ಗ’ ಚಿತ್ರವು ಸೆಪ್ಟೆಂಬರ್ 20ರಂದು ಬಿಡುಗಡೆಯಾಗುತ್ತಿದೆ. ಅನು ಪ್ರಭಾಕರ್‍ ಅಭಿನಯದ ಮೊದಲ ಚಿತ್ರ ಬಿಡುಗಡೆಯಾದ ದಿನವೇ ‘ಹಗ್ಗ’ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದವರು ಅನು ಪ್ರಭಾಕರ್‍ ಅವರನ್ನು ಗೌರವಿಸಿದ್ದಾರೆ. ಕೇಕ್‍ ಕಟ್ ಮಾಡುವ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

25 ವರ್ಷಗಳು ಪೂರೈಸಿದ ಖುಷಿಯಲ್ಲಿ ಮಾತನಾಡಿದ ಅನು ಪ್ರಭಾಕರ್‍, ‘ಚಿತ್ರ ಕಳೆದ ತಿಂಗಳೇ ಬಿಡುಗಡೆಯಾಗಬೇಕಿತ್ತು. ಚಿತ್ರದ ಪ್ರಚಾರ ಸಹ ಸಾಕಷ್ಟು ಆಗಿತ್ತು. ಆದರೆ, ಕಾರಣಾಂತರಗಳಿಂದ ಮುಂದಕ್ಕೆ ಹೋಯಿತು. ಅದು ಒಳ್ಳೆಯದಕ್ಕೇ ಆಯಿತು ಅಂತನಿಸುತ್ತಿದೆ. ಒಂದೊಳ್ಳೆಯ ಸಂದರ್ಭದಲ್ಲಿ ನನ್ನ ಚಿತ್ರ ಬಿಡುಗಡೆ ಆಗುತ್ತಿದೆ’ ಎಂದರು.

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದರ ಕುರಿತು ಮಾತನಾಡಿದ ಅವರು, ‘ನನ್ನ ಅಪ್ಪ-ಅಮ್ಮ ನನಗೆ ಅನ್ನಪೂರ್ಣ ಎಂದು ಹೆಸರಿಟ್ಟು ಬದುಕು ಕೊಟ್ಟರು. ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್‍ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅನ್ನಪೂರ್ಣ ಆಗಿದ್ದವಳನ್ನು ಅನು ಮಾಡಿದರು. ಮಾಲಾಶ್ರೀ ತರಹವೇ ನನ್ನ ಹೆಸರನ್ನು ಅನುಶ್ರೀ ಎಂದು ಬದಲಾಯಿಸಬೇಕು ಎಂಬ ಆಸೆ ಅವರಿಗಿತ್ತು. ಆದರೆ, ನನಗೆ ಅನು ಪ್ರಭಾಕರ್‍ ಎಂದು ಗುರುತಿಸಿಕೊಳ್ಳುವಾಸೆ. ಹಾಗಾಗಿ, ಇದೇ ಹೆಸರಿರಲಿ ಎಂದೆ. ಅವರು ಒಪ್ಪಿದರು. ಅವರೆಲ್ಲರ ಪ್ರೀತಿ, ವಿಶ್ವಾಸದಿಂದ ನಾನು ಚಿತ್ರರಂಗದಲ್ಲಿ 25 ವರ್ಷ ಪೂರೈಸುವಂತಾಯಿತು’ ಎಂದರು.

ಹಾರರ್‍ ಚಿತ್ರಗಳೆಂದರೆ ತನಗೆ ಇಷ್ಟವಿಲ್ಲ ಎಂದೆನ್ನುವ ಅನು ಪ್ರಭಾಕರ್‍, ‘ನಾನು ಹಾರರ್ ಚಿತ್ರಗಳನ್ನು ನೋಡುವುದಿಲ್ಲ. ಆದರೂ ನಾನು ಒಪ್ಪಿದ್ದು ಅವಿನಾಧ್‍ ಹೇಳಿದ ಕಥೆಗಾಗಿ. ನನಗೆ ಅವರ ಸ್ಪಷ್ಟತೆ ಇಷ್ಟವಾಯ್ತು. ಅವರು ಏನು ಹೇಳಿದ್ದರೋ, ಅದನ್ನು ತೆರೆಯ ಮೇಲೆ ತಂದಿದ್ದರು. ಈ ಚಿತ್ರ ನನ್ನ ಪಾಲಿಗೆ ಬಹಳ ಕಷ್ಟವಾಗಿತ್ತು. ನನ್ನ ಭಾಗದ ಚಿತ್ರೀಕರಣ ರಾತ್ರಿ 7ಕ್ಕೆ ಶುರುವಾಗಿ ಬೆಳಗ್ಗೆ ಮುಗಿಯುತ್ತಿತ್ತು. ಆದರೆ, ನಾನು ಎಲ್ಲ ಹೋದ ಮೇಲೆ ಹೋಗಬೇಕಿತ್ತು. ಏಕೆಂದರೆ, ಮೇಕಪ್‍ ಹಾಕುವುದಕ್ಕೆ, ತೆಗೆಯುವುದಕ್ಕೆ ಎರಡು ತಾಸು ಬೇಕಾಗುತ್ತಿತ್ತು’ ಎಂದು ನೆನಪಿಸಿಕೊಂಡರು.