Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನನ್ನನ್ನು ಅದೆಷ್ಟೇ ಬುದ್ಧಿವಂತ ಅಂತ ಹೊಗಳಿದರೂ, ನಾನು ದಡ್ಡ ಅಂತ ಗೊತ್ತು: ಉಪೇಂದ್ರ

‘ಇಲ್ಲಿ ಮುಗ್ಧತೆ ಉಳಿಸಿಕೊಳ್ಳೋದು ಬಹಳ ಕಷ್ಟ. ಚಿಕ್ಕವರಾಗಿದ್ದಾಗ ಬಹಳ ಮುಗ್ಧರಾಗಿರುತ್ತೇವೆ. ಕೆಲವರು ವಯಸ್ಸಾದ ಮೇಲೂ ಹಾಗೆಯೇ ಇರ್ತಾರೆ. ಕೆಲವರು ಮಾತ್ರ ತಮಗೆ ಎಲ್ಲಾ ಗೊತ್ತು ಎಂದು ತಿಳಿದು ಕೊಂಡಿರ್ತಾರೆ. ನೀವು ನನ್ನನ್ನು ಅದೆಷ್ಟು ಬುದ್ಧಿವಂತ ಅಂತ ಹೊಗಳಿದರೂ, ನನಗೆ ಗೊತ್ತು ನಾನು ದಡ್ಡ ಅಂತ. ನಾನು ಮುಗ್ಧತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ …’

ಉಪೇಂದ್ರ ಹೀಗೆ ಹೇಳಿದ್ದು ‘ಗೌರಿ’ ಚಿತ್ರದ ಪ್ರೀ-ರಿಲೀಸ್‍ ಇವೆಂಟ್‍ನಲ್ಲಿ. ಇಂದ್ರಜಿತ್‍ ಲಂಕೇಶ್‍ ತಮ್ಮ ಮಗ ಸಮರ್ಜಿತ್‍ಗಾಗಿ ನಿರ್ದೇಶನ ಮಾಡಿರುವ ‘ಗೌರಿ’ ಚಿತ್ರವು ಇದೇ ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಂದ್ರಜಿತ್‍ ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಉಪೇಂದ್ರ ಮಾತನಾಡಿದ್ದು ಇದೇ ಸಂದರ್ಭದಲ್ಲಿ.

ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ಸಮರ್ಜಿತ್‍ ಮುಗ್ಧತೆ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಮುಗ್ಧತೆಯನ್ನು ಹೀಗೆಯೇ ಉಳಿಸಿಕೋ ಎಂದು ಸುದೀಪ್‍ ಸಲಹೆ ನೀಡಿದ್ದರು. ಈಗ ಉಪೇಂದ್ರ ಸಹ ಸಮರ್ಜಿತ್‍ಗೆ ಅದೇ ಕಿವಿಮಾತು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ‘ಸಮರ್ಜಿತ್‍ ಲವ್‍ಸ್ಟೋರಿಗಳಿಗೂ ಸೂಟ್ ಆಗ್ತಾನೆ. ಆ್ಯಕ್ಷನ್‍ ಚಿತ್ರಗಳಿಗೂ ಹೊಂದುತ್ತಾನೆ. ಅವನು ಆತ ದೇಹವನ್ನೂ ಚೆನ್ನಾಗಿ ಬೆಳೆಸಿದ್ದಾನೆ. ಡ್ಯಾನ್ಸ್ ಸಹ ಮಾಡ್ತಾನೆ. ಜನ ಈಗಾಗಲೇ ಹೃತಿಕ್‍ ರೋಶನ್‍ ಅಂತ ಹೇಳೋಕೆ ಶುರು ಮಾಡಿದ್ದಾರೆ. ಏನೇ ಆದರೂ ಅವನು ಬಹಳ ಮುಗ್ಧ. ನೀನು ನಿನ್ನ ಮುಗ್ಧತೆಯನ್ನ ಉಳಿಸಿಕೋ ಸಾಕು’ ಎಂದು ಸಲಹೆ ನೀಡಿದರು.

ಸಮರ್ಜಿತ್ ಬಹಳ ಬೇಗ ಬಾಲಿವುಡ್‍ಗೆ ಹಾರುತ್ತಾನೆ ಎಂದ ಉಪೇಂದ್ರ. ‘ಇಂದ್ರಜಿತ್‍ ಅವರದ್ದು ಗೋಲ್ಡನ್‍ ಹ್ಯಾಂಡ್‍. ದೀಪಿಕಾ ಪಡುಕೋಣೆ ಅವರನ್ನು ಕರೆದುಕೊಂಡು ಬಂದು ಬ್ರೇಕ್‍ ಕೊಟ್ಟರು. ಈಗ ಅವರು ಇಂಟರ್‍ನ್ಯಾಷನಲ್‍ ಸ್ಟಾರ್ ಆಗಿದ್ದಾರೆ. ಹಾಗಿರುವಾಗ ಅವರ ಮಗ ಇಲ್ಲಿ ಇರ್ತಾನಾ? ಬಾಲಿವುಡ್ಡೋ, ಹಾಲಿವುಡ್ಡೋ ಹೋಗೋ ತರಹ ಇದ್ದಾನೆ. ಇರಿಸಿಕೊಳ್ಳೋಕೆ ಪ್ರೇಕ್ಷಕರ ಕೈಯಲ್ಲಿ ಮಾತ್ರ ಸಾಧ್ಯ ಇದೆ. ಈ ತರಹ ಹೊಸ ತಲೆಮಾರಿನವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಉಳಿದುಕೊಳ್ಳಬೇಕು ಅಂದರೆ ಪ್ರೇಕ್ಷಕರ ಕೈಯಲ್ಲಿ ಮಾತ್ರ ಸಾಧ್ಯ. ಅವರು ಚಿತ್ರ ನೋಡಿದರೆ ಮಾತ್ರ ಇಲ್ಲಿ ಉಳಿಯುತ್ತಾರೆ ಸಾಧ್ಯ’ ಎಂದರು.

ಉಪೇಂದ್ರ ತರಹದವರು ಕನ್ನಡ ಚಿತ್ರರಂಗದಲ್ಲಿರೋದೇ ನಮ್ಮ ಅದೃಷ್ಟ ಎಂದ ಇಂದ್ರಜಿತ್, ‘ಅವರು ಕನ್ನಡ ಚಿತ್ರರಂಗದಲ್ಲಿರುವುದು ನಮ್ಮ ಅದೃಷ್ಟ. ಉಪ್ಪಿ ಸಾರ್ ಅವರು ತಮ್ಮ ಬುದ್ಧಿವಂತಿಕೆಯಿಂದ ಮತ್ತು ಕ್ರಿಯಾಶೀಲತೆಯಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಸರು ತಂದಿದ್ದಾರೆ. ಇವತ್ತು ಕನ್ನಡ ಚಿತ್ರರಂಗವನ್ನು ಜಗತ್ತಿಗೆ ತೆಗೆದುಕೊಂಡು ಹೋಗಿದ್ದಾರೆ. ‘ಎ’, ‘ಉಪೇಂದ್ರ’ ಮತ್ತು ‘ಸೂಪರ್‍’ ಚಿತ್ರಗಳನ್ನು ನಾವು ಯೋಚನೆ ಮಾಡೋಕೂ ಸಾಧ್ಯವಿಲ್ಲ. ಅವರ ರೀತಿಯ ಯೋಚನೆ ಮಾಡೋದು ಅಸಾಧ್ಯ. ಅವರು ನಮ್ಮ ನಡುವೆ ಇದ್ದಾರೆ ಅನ್ನೋದು ನಮ್ಮ ಹೆಮ್ಮೆ’ ಎಂದರು.

Tags: