Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

‘ಪುಷ್ಪ 2’ ಚಿತ್ರೀಕರಣಕ್ಕೆ ವಾಪಸ್ಸಾದ ಅಲ್ಲು ಅರ್ಜುನ್ ಮತ್ತು ಸುಕುಮಾರ್

ಕೆಲವೇ ದಿನಗಳ ಹಿಂದಿನ ಮಾತು. ‘ಪುಷ್ಪ 2’ ಚಿತ್ರದ ನಾಯಕ ಅಲ್ಲು ಅರ್ಜುನ್‍ ಮತ್ತು ನಿರ್ದೇಶಕ ಸುಕುಮಾರ್‍ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ಕಿತ್ತಾಡಿಕೊಂಡಿದ್ದಾರೆ, ಶೂಟಿಂಗ್ ಮಾಡುವುದನ್ನು ಬಿಟ್ಟು ಊರು ಸುತ್ತುತ್ತಿದ್‍ದಾರೆ ಎಂಬಂತಹ ಗುಸುಗುಸುಗಳು ಕೇಳಿಬಂದಿತ್ತು. ಅದಕ್ಕೆ ಸರಿಯಾಗಿ ಚಿತ್ರೀಕರಣ ಸಹ ನಿಂತಿತ್ತು. ಇದರಿಂದ ಚಿತ್ರದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ, ಡಿಸೆಂಬರ್ ಬದಲು ಏಪ್ರಿಲ್‍ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು.

‘ಪುಷ್ಪ 2’ ಚಿತ್ರದ ಈ ಸ್ಥಿತಿಯ ಬಗ್ಗೆ ಅಭಿಮಾನಿಗಳು ಆತಂಕ ಮನೆ ಮಾಡಿರುವಾಗಲೇ, ಚಿತ್ರೀಕರಣ ಶುರುವಾಗಿರುವುದಷ್ಟೇ ಅಲ್ಲ, ಅಂದುಕೊಂಡಂತೆಯೇ ಡಿಸೆಂಬರ್ 06ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ನಿಜಕ್ಕೂ ನಿರ್ದೇಶಕರ ಮತ್ತು ನಾಯಕನ ನಡುವೆ ಸಮಸ್ಯೆ ಇತ್ತೋ ಅಥವಾ ಊಹಾಪೋಹಗಳೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಮೊನ್ನೆ ಸೋಮವಾರದಿಂದ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಶುರುವಾಗಿದೆ. ಮೈನವಿರೇಳಿಸುವ ಆ್ಯಕ್ಷನ್‍ ದೃಶ್ಯಗಳನ್ನು ಈ ಹಂತದ ಚಿತ್ರೀಕರಣದಲ್ಲಿ ಸೆರೆಹಿಡಿಯಲಾಗುವುದಂತೆ. ಆಗಸ್ಟ್ 31ರ ಹೊತ್ತಿಗೆ ಚಿತ್ರೀಕರಣ ಮುಗಿಸಿ, ಆ ನಂತರ ಡಿ. 6ರಂದು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್‍ಷನ್ ಕೆಲಸಗಳು ಸಹ ಸೈಡ್‍ ಬೈ ಸೈಡ್ ನಡೆಯುತ್ತಿವೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರವು ಆಗಸ್ಟ್ 15ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಚಿತ್ರದ ಕೆಲಸಗಳು ಮುಗಿಯದಿದ್ದರಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು. ‘ನಾವು ಹಗಲು-ರಾತ್ರಿ ಶ್ರಮವಹಿಸಿ ಚಿತ್ರೀಕರಣ ಮಾಡುತ್ತಿದ್ದೇವೆ. ಆದರೆ, ಚಿತ್ರದ ಕೆಲಸಗಳು ಇನ್ನೂ ಮುಗಿದಿಲ್ಲ. ಬಾಕಿ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಎಂದೆಲ್ಲಾ ಸೇರಿ ಚಿತ್ರ ಮುಗಿಯುವುದಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ, ಚಿತ್ರವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿ ಬಂದಿದೆ. ಚಿತ್ರವು ಡಿಸೆಂಬರ್‍ 06ರಂದು ಬಿಡುಗಡೆ ಆಗಲಿದೆ’ ಎಂದು ಚಿತ್ರತಂಡ ಹೇಳಿಕೊಂಡಿತ್ತು.

‘ಪುಷ್ಪ – ದಿ ರೂಲ್‍’ ಚಿತ್ರವು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಪುಷ್ಪ – ದಿ ರೈಸ್‍’ ಚಿತ್ರದ ಮುಂದುವರೆದ ಭಾಗವಾಗಿದೆ. ಪುಷ್ಪರಾಜ್‍ ಎಂಬ ಗ್ಯಾಂಗ್‍ಸ್ಟರ್‍ ಜೀವನದಲ್ಲಿ ನಡೆಯುವ ಕಥೆ ಇರುವ ಈ ಚಿತ್ರದಲ್ಲಿ ಪುಷ್ಪರಾಜ್‍ ಆಗಿ ಅಲ್ಲು ಅರ್ಜುನ್‍ ನಟಿಸಿದ್ದಾರೆ. ಇನ್ನು, ರಶ್ಮಿಕಾ ಮಂದಣ್ಣ ನಟಿಸಿದ್ದು, ಮಿಕ್ಕಂತೆ ಧನಂಜಯ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Tags: