ನಟಿ ಸಂಜನಾ ಗಲ್ರಾನಿ, ಕೆಲವು ವರ್ಷಗಳ ಹಿಂದೆ ‘ಬಿಗ್ ಬಾಸ್ ಕನ್ನಡ’ದ ಮೊದಲ ಸೀಸನ್‍ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದು ಗೊತ್ತೇ ಇದೆ. ಇದೀಗ ಅವರು ‘ಬಿಗ್ ಬಾಸ್ ತೆಲುಗು – ಸೀಸನ್ 9’ರ 10ನೇ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಸಂಜನಾ, ಕನ್ನಡವಲ್ಲದೆ ತೆಲುಗಿನಲ್ಲೂ ಚಿರಪರಿಚಿತ ಮುಖ. ‘ಗಂಡ ಹೆಂಡತಿ’ ಚಿತ್ರದ ಮೂಲಕ ಕನ್ನಡದಲ್ಲಿ ನಟಿಸುವ ಮೊದಲೇ ಅವರು ‘ಸೊಗ್ಗಾಡು’ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ನಂತರ, ಪ್ರಭಾಸ್ ಅಭಿನಯದ ‘ಬುಜ್ಜಿಗಾಡು’, ‘ಸತ್ಯಮೇವ ಜಯತೇ’ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದರು. 2017ರಲ್ಲಿ ಬಿಡುಗಡೆಯಾದ ಸುನೀಲ್ ಅಭಿನಯದ ‘2 ಕಂಟ್ರೀಸ್’ ಚಿತ್ರದಲ್ಲಿ ನಟಿಸಿದ ಮೇಲೆ ಅವರು ಯಾವುದೇ ತೆಲುಗು ಚಿತ್ರದಲ್ಲೂ ನಟಿಸಿರಲಿಲ್ಲ.
ಕೆಲವು ವರ್ಷಗಳ ಹಿಂದೆ ಮದುವೆ, ಮಗು ಆದ ಮೇಲೆ ಸಂಜನಾ, ಕನ್ನಡದಲ್ಲೂ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಸಕ್ರಿಯವಾಗಿದ್ದ ಅವರು, ಇದೀಗ ತೆಲುಗಿನ ‘ಬಿಗ್ ಬಾಸ್’ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಕನ್ನಡದ ‘ಬಿಗ್ ಬಾಸ್’ ಕಾರ್ಯಕ್ರಮವು ಸೆ.28ರಿಂದ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು ಶನಿವಾರ, ತೆಲುಗಿನ ಒಂಭತ್ತನೇ ಸೀಸನ್ ಪ್ರಾರಂಭವಾಗಿದೆ. ಈ ಕಾರ್ಯಕ್ರಮವನ್ನು ತೆಲುಗಿನ ಜನಪ್ರಿಯ ನಟ ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ 15 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಅದರಲ್ಲಿ ಸಂಜನಾ ಸಹ ಒಬ್ಬರು.
ಸಂಜನಾ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಾಲ್ಕು ತಿಂಗಳ ಮಗುವನ್ನು ಬಿಟ್ಟು, ಸಂಜನಾ ಇದೀಗ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಇರುವಷ್ಟು ದಿನ ತನ್ನ ತಂದೆ – ತಾಯಿ ಮನೆಯಲ್ಲಿದ್ದು ಮಗುವನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಬಾರಿಯ ತೆಲುಗು ‘ಬಿಗ್ ಬಾಸ್’ನಲ್ಲಿ ಸಂಜನಾ ಅಲ್ಲದೆ, ಫ್ಲೋರಾ ಸೈನಿ, ಕಲ್ಯಾನ್ ಪದಲ, ತನುಜಾ ಗೌಡ, ಶಾಸ್ತ್ರಿ ವರ್ಮ, ಜಬರ್ದಸ್ಥ್ ಎಮಾನ್ಯುಯೆಲ್, ಹರಿತ ಹರೀಷ್, ರಿತು ಚೌಧರಿ, ಡಿಮಾನ್ ಪವನ್, ಭರಣಿ ಶಂಕರ್, ರಾಮು ರಾಥೋಡ್ ಸೇರಿದಂತೆ ಮುಂತಾದವರು ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ.





