ಹೈದರಾಬಾದ್: ತ್ರಿನಯನಿ ಧಾರವಾಹಿ ಖ್ಯಾತಿಯ ನಟಿ ಪವಿತ್ರಾ ಜಯರಾಮ್ ಅವರು ಅಪಘಾತದಿಂದ ಮರಣಹೊಂದಿದ ಕೆಲವು ದಿನಗಳ ಬಳಿಕ ಅವರ ಗೆಳೆಯ ಚಂದು ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಕೆಲವು ದಿನಗಳ ಹಿಂದೆ ಮಂಡ್ಯ ಮೂಲದ ನಟಿ ಪವಿತ್ರಾ ಜಯರಾಮ್ ಅವರು ಕಾರು ಅಪಘಾತದಲ್ಲಿ ಮರಣ ಹೊಂದಿದ್ದರು. ಅಪಘಾತ ನಡೆದಾಗ ಸಹನಟ/ಗೆಳೆಯ ಚಂದು ಕೂಡಾ ಅವರೊಂದಿಗೆ ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇನ್ನು ಪವಿತ್ರಾ ಅವರ ಅಗಲಿಕೆಯಿಂದ ಚಂದು ದುಃಖಿತರಾಗಿದ್ದರು. ಇದರ ಬೆನ್ನಲ್ಲೇ ಅವರು ಆತ್ಮಹತ್ಯೆಗೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಚಂದು ಅವರಿಗೆ 2015ರಲ್ಲಿ ತಮ್ಮ ಪ್ರಿಯತಮೆ ಜತೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ನಟಿ ಪವಿತ್ರಾ ನಿಧನ ಬಳಿಕ ಮನೊಂದಿದ್ದ ಚಂದು ಹೈದರಾಬಾದ್‌ನ ಮಣಿಕೊಂಡದಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ಈವರೆಗೆ ಗೊತ್ತಾಗಿಲ್ಲ. ಈ ಸಂಬಂಧ ನಾರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಸಿನಿಮಾ ಒಂದಕ್ಕೆ ಸಹಿ ಹಾಕಲು ನಟಿ ಪವಿತ್ರಾ ಜಯರಾಮ್ ಅವರು ಬೆಂಗಳೂರಿಗೆ ಬಂದಿದ್ದರು. ಬಳಿಕ ಬೆಂಗಳೂರಿನಿಂದ ಹೈದರಾಬಾದ್‌ಗೆ ಹಿಂತಿರುಗುವಾಗ ರಸ್ತೆ ಅಪಘಾತ ಸಂಭವಿಸಿ ನಟಿ ಮರಣ ಹೊಂದಿದರು. ಅವರ ಜತೆಯಲ್ಲಿದ್ದ ನಟ/ಗೆಳೆಯ ಚಂದು ಅವರಿಗೂ ಗಾಯಗಳಾಗಿದ್ದವು. ಈ ನೋವು ಮಾಸುವ ಮುನ್ನವೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.





