Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಈ ವಾರ ಮತ್ತೆ ‘ಹೆಬ್ಬುಲಿ’ಯಾಗಿ ಘರ್ಜಿಸಲಿದ್ದಾರೆ ಸುದೀಪ್‍

ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರದ ಬಿಡುಗಡೆ ಯಾವಾಗ ಎಂದು ಅವರ ಅಭಿಮಾನಿಗಳು ತಲೆ ಕೆಡಿಸಕೊಂಡು ಕುಳಿತಿದ್ದಾರೆ. ಆದರೆ, ಚಿತ್ರತಂಡದಿಂದ ಯಾವೊಂದು ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಚಿತ್ರದ ಚಿತ್ರೀಕರಣ ಮುಗಿದಿದೆ ಎಂದು ಹೇಳಲಾಗುತ್ತಿದೆಯಾದರೂ, ಅಲ್ಲೂ ಹಲವು ಗೊಂದಲಗಳಿವೆ. ಪ್ರಮುಖವಾಗಿ ಚಿತ್ರದ ಬಜೆಟ್‍ ಹೆಚ್ಚಾಗಿರುವುದರಿಂದ ನಿರ್ಮಾಪಕರು ಮತ್ತು ನಿರ್ದೇಶಕರ ನಡುವೆ ಸಮಸ್ಯೆ ತಲೆದೋರಿದೆ ಮತ್ತು ಬಾಕಿ ಇರುವ ಚಿತ್ರೀಕರಣವನ್ನು ಎಲ್ಲಾದರೂ ದುಡ್ಡು ಹೊಂದಿಸಿ ಚಿತ್ರ ಮುಂದುವರೆಸುವುದಕ್ಕೆ ನಿರ್ಮಾಪಕರು, ನಿರ್ದೇಶಕರಿಗೆ ತಾಕೀತು ಮಾಡಿದ್ದಾರೆ ಎಂದೆಲ್ಲಾ ಮಾತುಗಳು ಕೇಳಿಬರುತ್ತಿವೆ.

ಕಾರಣ ಏನಾದರೂ ಇರಲಿ, ‘ಮ್ಯಾಕ್ಸ್’ ಸದ್ಯಕ್ಕೆ ಬಿಡುಗಡೆಯಾಗುವುದು ಸಂಶಯ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರ ಬಿಡುಗಡೆಗೆ ಇನ್ನೂ ಮೂರ್ನಾಲ್ಕು ತಿಂಗಳುಗಳು ಬೇಕು ಎಂಬ ಮಾತಿದೆ. ಹೀಗಿರುವಾಗಲೇ, ಸುದೀಪ್‍ ಅಭಿನಯದ ‘ಹೆಬ್ಬುಲಿ’ ಚಿತ್ರವು ಈ ವಾರ (ಆಗಸ್ಟ್ 02) ಮರುಬಿಡುಗಡೆಯಾಗುತ್ತಿದೆ.

ಇತ್ತೀಚಿನ ತಿಂಗಳುಗಳಲ್ಲಿ ಪುನೀತ್‍ ರಾಜಕುಮಾರ್, ದರ್ಶನ್‍, ಧ್ರುವ ಸರ್ಜಾ, ಉಪೇಂದ್ರ, ಯಶ್‍ ಮುಂತಾದವರ ಚಿತ್ರಗಳು ಮರುಬಿಡುಗಡೆಯಾಗಿವೆ. ಆದರೆ, ಸುದೀಪ್‍ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಹೀಗಿರುವಾಗಲೇ, ಸುದೀಪ್‍ ಅಭಿನಯದ ‘ಹೆಬ್ಬುಲಿ’ ಚಿತ್ರವು ಈ ವಾರ ಮತ್ತೊಮ್ಮೆ ತೆರೆಗೆ ಬರುತ್ತಿದೆ.

2017ರಲ್ಲಿ ಬಿಡುಗಡೆಯಾದ ‘ಹೆಬ್ಬುಲಿ’ ಚಿತ್ರದಲ್ಲಿ ಸುದೀಪ್‍ ಯೋಧನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ರವಿಚಂದ್ರನ್‍ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಯೋಧನೊಬ್ಬ ತನ್ನ ಅಣ್ಣನ ಸಾವಿಗೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬ ಕಥೆ ಈ ಚಿತ್ರದಲ್ಲಿತ್ತು. ಜೊತೆಗೆ ವೈದ್ಯಕೀಯ ಲೋಕದ ಮಾಫಿಯಾ ಬಗ್ಗೆಯೂ ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿತ್ತು. ಈ ಚಿತ್ರ ಯಶಸ್ವಿಯಾಗಿ ಹಿಂದಿ ಮತ್ತು ತಮಿಳಿಗೂ ಡಬ್‍ ಆಗಿ ಬಿಡುಗಡೆಯಾಗಿತ್ತು.

‘ಹೆಬ್ಬುಲಿ’ ಚಿತ್ರವನ್ನು ಎಸ್‍. ಕೃಷ್ಣ ನಿರ್ದೇಶಿಸಿದರೆ, ರಘುನಾಥ್‍ ಮತ್ತು ಉಮಾಪತಿ ಶ್ರೀನಿವಾಸ ಗೌಡ ಜೊತೆಯಾಗಿ ನಿರ್ಮಿಸಿದ್ದರು. ಚಿತ್ರದಲ್ಲಿ ಸುದೀಪ್‍, ರವಿಚಂದ್ರನ್, ಅಮಲಾ ಪಾಲ್‍, ಪಿ. ರವಿಶಂಕರ್, ಕಬೀರ್ ದುಹಾನ್ ಸಿಂಗ್, ರವಿಕಿಶನ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರ 2017ರ ಶಿವರಾತ್ರಿಗೆ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಈಗ ಮರುಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎಂದು ನೋಡಬೇಕಿದೆ.

Tags: