ಅಮೆರಿಕಾ/ನವದೆಹಲಿ: ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರು ನಿನ್ನೆ(ಡಿ.24) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಡಾ.ಮುರುಗೇಶ ಮನೋಹರನ್ ತಿಳಿಸಿದ್ದಾರೆ.
ಈ ಕುರಿತು ವಿಡಿಯೋ ಸಂದೇಶದಲ್ಲಿ ಮಾಹಿತಿ ನೀಡಿರುವ ಅವರು, ಶಿವರಾಜ್‌ಕುಮಾರ್ ಅವರಿಗೆ ನಿನ್ನೆ ಮಾಡಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅವರು ಈಗ ಸ್ಥಿರ ಪರಿಸ್ಥಿತಿಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿಸಲು ಈ ಸಂವಾದವನ್ನು ಹಂಚಿಕೊಳ್ಳುತ್ತಿರುವುದು ಸಂತೋಷವಾಗುತ್ತಿದೆ ಎಂದಿದ್ದಾರೆ.
ಶಿವರಾಜ್‌ಕುಮಾರ್ ಅವರ ಆರೋಗ್ಯ ಸ್ಥಿತಿಯೂ ಶಸ್ತ್ರಚಿಕಿತ್ಸೆಯ ವೇಳೆ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ ಸಮಯದಲ್ಲಿ ಸ್ಥಿರವಾಗಿತ್ತು. ಅವರ ಸುಗಮ ಚೇತರಿಕೆಯನ್ನು ಖಚಿತಪಡಿಸಲು ಅವರು ಪ್ರಸ್ತುತ ತೀವ್ರ ನಿರೀಕ್ಷಣೆಯಲ್ಲಿದ್ದಾರೆ. ಜೊತೆಗೆ ಪರಿಣಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ತಂಡದಿಂದ ಅತ್ಯುತ್ತಮ ಆರೈಕೆ ಮತ್ತು ಗಮನವನ್ನು ಪಡೆಯುತ್ತಿದ್ದಾರೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಹಾಗೂ ಮಾಧ್ಯಮಗಳು ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





