ರೇಣುಕಾಸ್ವಾಮಿ ಕುಟುಂಬದ ಪರವಾಗಿ ಮಾತನಾಡಿದ್ದಕ್ಕೆ ದರ್ಶನ್ ಅಭಿಮಾನಿಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದ ನಟಿ ರಮ್ಯಾಗೆ ಇದೀಗ ಧ್ರುವ ಸರ್ಜಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ದರ್ಶನ್ ಬಗ್ಗೆ ಪ್ರಥಮ್ ಮಾತನಾಡಿದ್ದು ತಪ್ಪು ಎಂದು ದರ್ಶನ್ ಪರ ಮಾತಾಡುತ್ತಲೇ, ಇನ್ನೊಂದು ಕಡೆ ದರ್ಶನ್ ಅಭಿಮಾನಿಗಳು ರಮ್ಯಾ ಬಗ್ಗೆ ಕೆಟ್ಟ ಸಂದೇಶಗಳನ್ನು ಕಳಿಸುತ್ತಿರುವ ಬಗ್ಗೆಯೂ ಖಂಡಿಸಿದ್ದಾರೆ. ಈ ವಿಷಯವಾಗಿ ರಮ್ಯಾ ತೆಗೆದುಕೊಂಡ ನಿಲುವು ಸರಿ ಇದೆ ಎಂದು ಹೇಳಿದ್ದಾರೆ.
ಈ ಕುರಿತು ಗುರುವಾರ ಮಾತನಾಡಿರುವ ಧ್ರುವ, ‘ದರ್ಶನ್ ಪ್ರಕರಣದಲ್ಲಿ ರಮ್ಯಾ ಅವರು ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅದಕ್ಕೆ ಅವರಿಗೆ ಸಾಕಷ್ಟು ಅಶ್ಲೀಲ ಸಂದೇಶಗಳು ಬಂದಿದ್ದು, ಈ ಕುರಿತು ಅವರು ದೂರು ನೀಡಿದ್ದಾರೆ. ಈ ವಿಚಾರದಲ್ಲಿ ರಮ್ಯಾ ತೆಗೆದುಕೊಂಡ ನಿಲುವು ಸರಿ ಇದೆ. ನಾವು ಅವರ ಜೊತೆಗೆ ಇರುತ್ತೇವೆ’ ಎಂದಿದ್ದಾರೆ. ಇದಕ್ಕೂ ಮೊದಲು ನಟ ಶಿವರಾಜಕುಮಾರ್ ಸಹ ರಮ್ಯಾ ಪರ ಬೆಂಬಲ ಸೂಚಿಸಿದ್ದರು.
ಇನ್ನು, ದರ್ಶನ್ ಅಭಿಮಾನಿಗಳು ಮತ್ತು ‘ಬಿಗ್ ಬಾಸ್’ ಖ್ಯಾತಿಯ ಪ್ರಥಮ್ ನಡುವಿನ ಜಗಳ ತಾರಕಕ್ಕೇರಿದ್ದು. ಈ ಮಧ್ಯೆ, ಈ ವಿಷಯವಾಗಿ ಧ್ರುವ ಸರ್ಜಾ ಮೊದಲ ಬಾರಿಗೆ ಮಾತನಾಡಿದ್ದಾರೆ, ಪ್ರಥಮ್ ವಿಚಾರದಲ್ಲಿ ತಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಸರ್ಜಾ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಧ್ರುವ, ‘ಚಿಟಿಕೆ ಹೊಡೆದು ವಿಗ್ ಬಗ್ಗೆ ಮಾತಾಡೋದು ಸರಿ ಇಲ್ಲ. ಪ್ರಥಮ್ ಮಾತಾಡಿರೋದು ಸರಿ ಇಲ್ಲ. ಅವರಿಗೆ ಯಾರಾದ್ರೂ ಚಾಕು ತೋರಿಸಿದ್ರೆ ದೂರು ಕೊಡಬೇಕು. ಅದು ಬಿಟ್ಟು ದರ್ಶನ್ ಬಗ್ಗೆ ಹೀಗೆಲ್ಲಾ ಮಾತಾಡೋದು ಸರಿಯಲ್ಲ’ ಎಂದು ಹೇಳಿದ್ದಾರೆ.





