ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ ಕೊಲೆ ಆರೋಪಿ ನಟ ದರ್ಶನ್ ಸ್ನೇಹಿತರಾಗಿರುವ ಹಾಸ್ಯನಟ ಚಿಕ್ಕಣ್ಣ ಅವರನ್ನು ಅನ್ನಪೂರ್ಣೆಶ್ವರಿ ಠಾಣಾ ಪೊಲೀಸರು ತನಿಖೆ ಒಳಪಡಿಸಿದ್ದರು.
ಕೊಲೆ ಸಂಬಂಧ ಆರ್‌ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ಆಂಡ್ ಬಾರ್ ರೆಸ್ಟೋರೆಂಟ್ ಸ್ಥಳ ಮಹಜರಿಗೆ ತೆರಳುವ ಸಂಬಂಧ ನಟ ಚಿಕ್ಕಣ್ಣಗೆ ನೋಟಿಸ್ ನೀಡಲಾಗಿತ್ತು. ತಮ್ಮದೇ ಕಾರಿನಲ್ಲಿ ಠಾಣೆಗೆ ಬಂದ ಚಿಕ್ಕಣ್ಣರನ್ನು ತಪಾಸಣೆಗೆ ಒಳಪಡಿಸಿದ ಬಳಿಕ ಸ್ಥಳ ಮಹಜರು ನಡೆಸಲಾಯಿತು.
ಪೊಲೀಸರ ತನಿಖೆ ನಂತರ ಹಲವು ವಿಚಾರಗಳನ್ನು ಪೊಲೀಸರು ಕಲೆ ಹಾಕಿದರು ಎನ್ನಲಾಗಿದೆ. ಇತ್ತ ಹತ್ಯೆ ನಡೆದ ದಿನವೇ ದರ್ಶನ್ ಜತೆ ಸ್ಟೋನಿ ಬ್ರೂಕ್ ಪಬ್ ಪಾರ್ಟಿಯಲ್ಲಿ ಚಿಕ್ಕಣ್ಣ ಕಾಣಿಸಿಕೊಂಡಿದ್ದು, ಹಾಗಾಗಿ ಚಿಕ್ಕಣ್ಣ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಸಂಬಂಧ ತಾವು ದರ್ಶನ್ ಅವರನ್ನು ಭೇಟಿಯಾಗಿದ್ದು ಯಾಕೆ ಎಂಬುದನ್ನು ಸ್ವತಃ ಚಿಕ್ಕಣ್ಣ ಹೇಳಿದ್ದಾರೆ.
ದರ್ಶನ್ ಅವರು ನನಗೆ ಕರೆ ಮಾಡಿ ಊಟಕ್ಕೆ ಬರುವಂತೆ ಹೇಳಿದರು ಹೀಗಾಗಿ ಊಟಕ್ಕಾಗಿ ಅಲ್ಲಿದೆ ಹೋದೆ. ದರ್ಶನ್ ಮತ್ತು ನಾನು ಸ್ನೇಹಿತರು. ಅವಾಗವಾಗ ಅಲ್ಲಲ್ಲಿ ಸೇರುತ್ತಿರುತ್ತೇವೆ. ಅವತ್ತು ಕೂಡಾ ಊಟಕ್ಕೆ ಕರೆದಿದ್ದರು ಹಾಗಾಗಿ ಹೋದೆ. ಬಳಿಕ ಅಲ್ಲಿ ಏನಾಯ್ತು ಎಂಬ ಮಾಹಿತಿ ನನಗಿಲ್ಲ. ರೇಣುಕಾಸ್ವಾಮಿ ಹಾಗೂ ಇತರೇ ಯಾವುದೇ ವಿಚಾರದ ಬಗ್ಗೆಯೂ ನನಗೆ ಮಾಹಿತಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾದ ಮೇಲೆಯೇ ನನಗೆ ತಿಳಿದಿದ್ದು, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ಗ್ಯಾಂಗ್‌ನ ಕೆಲ ಆರೋಪಿಗಳು ವಿಚಾರಣೆ ಸಮಯದಲ್ಲಿ ಚಿಕ್ಕಣ್ಣ ಹೆಸರು ಹೇಳಿದ್ದರು ಎನ್ನಲಾಗಿದ್ದು, ಹೀಗಾಗಿ ವಿಚಾರಣೆಗೆ ಚಿಕ್ಕಣ್ಣಗೆ ಪೊಲೀಸರು ನೋಟಿಸ್ ನೀಡಿದ್ದರು ಎಂದು ತನಿಖಾ ಮೂಲಗಳು ಹೇಳಿವೆ.





