ಶಾರುಖ್ ಖಾನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಚಿತ್ರ ಮಾಡುವುದು ವಿಶೇಷವೇನಲ್ಲ. ಈಗಾಗಲೇ ‘ಹ್ಯಾಪಿ ನ್ಯೂ ಇಯರ್’ ಎಂಬ ಚಿತ್ರದಲ್ಲಿ ಇಬ್ಬರೂ ಸ್ನೇಹಿತರಾಗಿ ದರೋಡೆ ಮಾಡಿದ್ದಿದೆ. ಈಗ ಮೊದಲ ಬಾರಿಗೆ ಶಾರುಖ್ ಖಾನ್‍ಗೆ ಅಭಿಷೇಕ್ ಬಚ್ಚನ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಹೌದು, ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳಲ್ಲಿ ಶಾರುಖ್ ಖಾನ್ ನಟಿಸಿದ್ದರು. ಆ ನಂತರ ಅವರ ಮುಂದಿನ ಚಿತ್ರ ಯಾವುದು ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಶಾರೂಖ್ ಖಾನ್, ‘ಕಿಂಗ್’ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದ, ಸುಜಯ್ ಘೋಷಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಾರೂಖ್ ಎದುರು ಅಭಿಷೇಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಹಾಗಂತ ಈ ವಿಷಯವನ್ನು ಅಭಿಷೇಕ್ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಅವರ ತಂದೆ ಅಮಿತಾಭ್ ಸೂಚ್ಯವಾಗಿ ಹೌದು ಎಂದು ಹೇಳಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಕೇಳಿಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತಾಭ್ ಬಚ್ಚನ್, ‘ಒಳ್ಳೆಯದಾಗಲಿ ಅಭಿಷೇಕ್. It’s time’ ಎಂದು ಬರೆದುಕೊಂಡಿದ್ದಾರೆ.
ಅಭಿಷೇಕ್ ಬಚ್ಚನ್ ಇತ್ತೀಚಿನ ವರ್ಷಗಳಲ್ಲಿ ಹಲವು ರೀತಿಯ ಪಾತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಆದರೆ, ಪೂರ್ಣಪ್ರಮಾಣದ ನೆಗೆಟಿವ್ ಪಾತ್ರದಲ್ಲಿ, ಅದರಲ್ಲೂ ಶಾರೂಖ್ ಖಾನ್‍ರಂತಹ ಪಕ್ಕಾ ಕಮರ್ಷಿಯಲ್ ಹೀರೋ ಎದರು ವಿಲನ್ ಆಗಿ ಕಾಣಿಸಿಕೊಂಡಿರಲಿಲ್ಲ. ಅಂಥದ್ದೊಂದು ಅವಕಾಶ ಬಂದಾಗ, ಅವರು ತಕ್ಷಣವೇ ಒಪ್ಪಿಕೊಂಡಿದ್ದಾರೆ. ಇನ್ನು, ಅವರನ್ನು ಇದಕ್ಕೂ ಮೊದಲು ನೋಡಿರದಂತೆ ವಿಭಿನ್ನ ರೀತಿಯಲ್ಲಿ ತೋರಿಸುವುದಕ್ಕೆ ಚಿತ್ರತಂಡದವರು ಪ್ರಯತ್ನ ನಡೆಸಿದ್ದಾರಂತೆ.
ಚಿತ್ರಕ್ಕೆ ‘ಕಿಂಗ್’ ಎಂಬ ಹೆಸರನ್ನು ಇಟ್ಟಿರುವುದು ಬಿಟ್ಟರೆ, ಮಿಕ್ಕಂತೆ ಚಿತ್ರತಂಡ ಯಾವುದೇ ವಿಷಯವನ್ನೂ ಹೇಳಿಕೊಂಡಿಲ್ಲ. ಸುಮಾರು ಆರು ತಿಂಗಳುಗಳ ಕಾಲ ಈ ಚಿತ್ರದ ಬಗ್ಗೆ ಶಾರೂಖ್ ಮತ್ತು ಸುಜಯ್ ಚರ್ಚೆ ನಡೆಸಿದ್ದಾರಂತೆ. ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ನೋಡಿರದ ಒಂದಿಷ್ಟು ಆ್ಯಕ್ಷನ್ ದೃಶ್ಯಗಳು ಈ ಚಿತ್ರದಲ್ಲಿ ಇರಲಿದ್ದು, ಸದ್ಯದಲ್ಲೇ ಈ ಕುರಿತು ಚಿತ್ರತಂಡ ಅಧಿಕೃತ ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.