ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದ ಚಿತ್ರೀಕರಣ ಕೆಲವು ದಿನಗಳಿಂದ ಹೈದರಾಬಾದ್ನಲ್ಲಿ ಸತತವಾಗಿ ನಡೆಯುತ್ತಿದೆ. ರಜನಿಕಾಂತ್ ಅಭಿನಯದ ಹಲವು ಪ್ರಮುಖ ದೃಶ್ಯಗಳನ್ನು ನಿರ್ದೇಶಕ ಲೋಕೇಶ್ ಕನಕರಾಜ್ ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ, ಚಿತ್ರದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಗುಸುಗುಸು ಕೇಳಿಬರುತ್ತಿದೆ.
ಹೌದು, ‘ಕೂಲಿ’ ಚಿತ್ರದ ಒಂದು ಪ್ರಮುಖ ಪಾತ್ರದಲ್ಲಿ ಆಮೀರ್ ಖಾನ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಏನು ಪಾತ್ರ, ಯಾವಾಗ ಚಿತ್ರೀಕರಣ … ಮುಂತಾದ ಯಾವ ವಿಷಯದ ಬಗ್ಗೆಯೂ ಚಿತ್ರತಂಡ ಬಾಯಿಬಿಟ್ಟಿಲ್ಲ. ಅಸಲಿಗೆ ಚಿತ್ರದಲ್ಲಿ ಆಮೀರ್ ಖಾನ್ ನಟಿಸುತ್ತಿದ್ದಾರೋ, ಇಲ್ಲವೋ ಎಂಬುದನ್ನೇ ಬಹಿರಂಗಪಡಿಸಿಲ್ಲ. ಹೀಗಿರುವಾಗಲೇ, ಈ ತರಹದ ಸುದ್ದಿ ಕೇಳಿಬಂದಿದೆ.
ಅದು ನಿಜವೇ ಆದರೆ, ಸುಮಾರು 30 ವರ್ಷಗಳ ನಂತರ ರಜನಿಕಾಂತ್ ಮತ್ತು ಆಮೀರ್ ಖಾನ್ ಒಟ್ಟಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರಿಬ್ಬರೂ ‘ಆತಂಕ್ ಹೀ ಆತಂಕ್’ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಚಿತ್ರ 1995ರಲ್ಲಿ ಬಿಡುಗಡೆಯಾಗಿತ್ತು. ಇದು ರಜನಿಕಾಂತ್ ಅವರು ಹಿಂದಿಯಲ್ಲಿ ಕಾಣಿಸಿಕೊಂಡ ಪೂರ್ಣಪ್ರಮಾಣದ ಕೊನೆಯ ಚಿತ್ರ. ಆ ನಂತರ ಅವರು ಒಂದೆರಡು ಚಿತ್ರಗಳಲ್ಲಿ ನಟಿಸಿದರೂ, ಅವೆಲ್ಲವೂ ಅತಿಥಿ ಪಾತ್ರಗಳಾಗಿದ್ದವು.
ರಜನಿಕಾಂತ್ ಇತ್ತೀಚೆಗೆ ಹಲವು ಜನಪ್ರಿಯ ನಟರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ‘ಜೈಲರ್’ ಚಿತ್ರದಲ್ಲಿ ಅವರ ಜೊತೆಗೆ ಶಿವರಾಜಕುಮಾರ್, ಜಾಕಿ ಶ್ರಾಫ್ ಹಾಗೂ ಮೋಹನ್ ಲಾಲ್ ನಟಿಸಿದ್ದರು. ‘ವೆಟ್ಟಾಯನ್’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಮುಂತಾದವರು ನಟಿಸಿದ್ದರು. ಈಗ ‘ಕೂಲಿ’ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಜೊತೆಗೆ ಆಮೀರ್ ಖಾನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಶ್ರುತಿ ಹಾಸನ್, ಉಪೇಂದ್ರ, ಸತ್ಯರಾಜ್, ಮಹೇಂದ್ರನ್ ಮುಂತಾದವರು ನಟಿಸುತ್ತಿದ್ದು, ಲೋಕೇಶ್ ಕನಕರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.