Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

‘ಮ್ಯಾಕ್ಸ್’ ಚಿತ್ರತಂಡದಿಂದ ಬಹುಮುಖ್ಯ ಘೋಷಣೆ; ಡಿ. 25ಕ್ಕೆ ಚಿತ್ರ ಬಿಡುಗಡೆ

ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರವು ಈ ವರ್ಷ ಬಿಡುಗಡೆಯಾಗುವುದಿಲ್ಲ ಎಂಬ ತೀರ್ಮಾನಕ್ಕೆ ಅವರ ಅಭಿಮಾನಿಗಳು ಬಂದು ಬಿಟ್ಟಿದ್ದರು. ಅದಕ್ಕೆ ಕಾರಣ, ಚಿತ್ರದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬಿಡುಗಡೆ ಯಾವಾಗ ಎಂದು ಕೇಳಿದಾಗಲೆಲ್ಲ, ಸುದೀಪ್‍ ತಮಗೇ ಮಾಹಿತಿ ಇಲ್ಲ ಎನ್ನುತ್ತಿದ್ದರು. ಹಾಗಾಗಿ, ಅಭಿಮಾನಿಗಳು ಸಹ ಚಿತ್ರದ ಬಗ್ಗೆ ಆಸೆ ಬಿಟ್ಟಿದ್ದರು.

ಹೀಗಿರುವಾಗಲೇ, ನವೆಂಬರ್ 27ಕ್ಕೆ ಒಂದು ಮುಖ್ಯ ಘೋಷಣೆಯನ್ನು ಮಾಡುವುದಾಗಿ ಒಂದು ಪೋಸ್ಟರ್ ಮೂಲಕ ಚಿತ್ರ ತಂಡ ಇತ್ತೀಚೆಗೆ ತಿಳಿಸಿತ್ತು. ಅಂದು ಚಿತ್ರದ ಬಿಡುಗಡೆಯ ದಿನ ಘೋಷಿಸಬಹುದು ಎಂಬ ಅಭಿಮಾನಿಗಳ ನಂಬಿಕೆ ಸುಳ್ಳಾಗಿಲ್ಲ. ಅಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದ್ದು, ಚಿತ್ರವು ಡಿ. 25ರಂದು ಐದು ಭಾಷೆಗಳಲ್ಲಿ ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆ ಆಗುತ್ತಿದೆ.

ಡಿ. 25ರಂದು ಕ್ರಿಸ್ಮಸ್‍ ರಜೆ ಇದೆ. ಅಂದು ಬುಧವಾರವಾಗಿದ್ದು, ವಾಡಿಕೆಗಿಂತ ಎರಡು ದಿನಗಳು ಮೊದಲೇ ಚಿತ್ರ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ಶುಕ್ರವಾರ ಬಿಡುಗಡೆಯಾಗುತ್ತವೆ. ಹೆಚ್ಚೆಂದರೆ ಗುರುವಾರ ಬಿಡುಗಡೆಯಾಗುತ್ತವೆ. ಆದರೆ, ಬಹಳ ಅಪರೂಪಕ್ಕೆಂಬಂತೆ ‘ಮ್ಯಾಕ್ಸ್’ ಚಿತ್ರವು ಬುಧವಾರವೇ ಬಿಡುಗಡೆಯಾಗುತ್ತಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷ ಡಿಸೆಂಬರ್‍ನಲ್ಲೇ ಚಿತ್ರೀಕರಣ ಮುಕ್ತಾಯವಾಗಲಿದೆ ಎಂದು ಸುದೀಪ್ ‍ಹೇಳಿಕೊಂಡಿದ್ದರು. ಆದರೆ, ಅಂದುಕೊಂಡಂತೆ ಚಿತ್ರ ಬಿಡುಗಡೆ ಆಗಲೇ ಇಲ್ಲ. ಆ ನಂತರ ಚಿತ್ರದ ಬಗ್ಗೆ ಏನಾದರೂ ಮಾಹಿತಿ ಕೊಡಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಆದರೆ, ಚಿತ್ರತಂಡದವರಿಂದ ಯಾವುದೇ ಅಪ್‍ಡೇಟ್‍ ಇರಲಿಲ್ಲ. ಈಗ ಕೊನೆಗೂ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

‘ಮ್ಯಾಕ್ಸ್’ ಒಂದು ಮಾಸ್ ಚಿತ್ರವಾಗಿದ್ದು, ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ‘ಉಗ್ರಂ’ ಮಂಜು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಮ್ಯಾಕ್ಸ್’ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್ ಧನು ತಮ್ಮ ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಸುದೀಪ್ ತಮ್ಮ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಜೊತೆಯಾಗಿ ನಿರ್ಮಿಸಿದ್ದಾರೆ.

Tags: