ಈ ಹಿಂದೆ ‘ದಿ ಸೂಟ್’ ಎಂಬ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದ ಕಮಲ್ ರಾಜ್, ಈಗ ಒಟ್ಟಿಗೇ ಮೂರು ಚಿತ್ರಗಳನ್ನು ಆರಂಭಿಸಿದ್ದಾರೆ. ‘ಮೊಹಬ್ಬತ್ ಜಿಂದಾಬಾದ್’, ‘ಟಾಸ್ಕ್’ ಹಾಗೂ ‘ನಾಳೆ ನಮ್ಮ ಭರವಸೆ’… ಈ ಮೂರೂ ಚಿತ್ರಗಳಲ್ಲಿ ಅಭಿನಯಿಸುವ ಜೊತೆಗೆ ಕಮಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅವರೇ ಚಿತ್ರ ನಿರ್ಮಾಣ ಸಹ ಮಾಡುತ್ತಿದ್ದಾರೆ.
ಈ ಪೈಕಿ ‘ಮೊಹಬ್ಬತ್ ಜಿಂದಾಬಾದ್’ ಹಿಂದಿ ಚಿತ್ರವಂತೆ. ‘ನಾಳೆ ನಮ್ಮ ಭರವಸೆ’ ಚಿತ್ರವನ್ನು 10 ಜನ ನಿರ್ದೇಶನ ಮಾಡಲಿದ್ದು, ಇದರಲ್ಲಿ ನಾಯಕ ಕಮಲ್ ರಾಜ್ 50 ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಈ ಮೂರೂ ಚಿತ್ರಗಳ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಡಾ.ವಿ.ನಾಗೇಂದ್ರ ಪ್ರಸಾದ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಿರ್ದೇಶಕರಾದ ಸಾಯಿ ಪ್ರಕಾಶ್, ರವಿ ಶ್ರೀವತ್ಸ, ನಟಿ ಪ್ರಿಯಾಂಕ ಉಪೇಂದ್ರ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಮಲ್ ರಾಜ್, ‘ಈ ಮೊದಲು ‘ದಿ ಸೂಟ್’ ಚಿತ್ರದಲ್ಲಿ ನಟಿಸಿದ್ದೆ. ‘ನಾಳೆ ನಮ್ಮ ಭರವಸೆ’ ಚಿತ್ರದಲ್ಲಿ 50 ಪಾತ್ರಗಳನ್ನು ಮಾಡುತ್ತಿದ್ದೇನೆ. 75 ದೃಶ್ಯಗಳಿರುವ ಈ ಚಿತ್ರವನ್ನು ಹತ್ತು ಜನ ನಿರ್ದೇಶಿಸಲಿದ್ದಾರೆ. ಇನ್ನು, ‘ಮೊಹಬ್ಬತ್ ಜಿಂದಾಬಾದ್’ ಚಿತ್ರದಲ್ಲಿ 14 ಹಾಡುಗಳಿದ್ದು, ಬಾಲಿವುಡ್‌ನ ಹಲವು ಕಲಾವಿದರು ನಟಿಸುತ್ತಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ಈ ಚಿತ್ರ ತಯಾರಾಗಲಿದೆ. ಈಗಾಗಲೇ ಮೂರು ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುವ ಯೋಜನೆ ಇದೆ’ ಎಂದರು.
‘ಟಾಸ್ಕ್’ ಚಿತ್ರವನ್ನು ಐದು ಜನ ನಿರ್ದೇಶನ ಮಾಡಲಿದ್ದಾರೆ. ಆ ಪೈಕಿ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಸಹ ಒಂದು ಕಥೆಯನ್ನು ನಿರ್ದೇಶಿಸಲಿದ್ದಾರಂತೆ. ‘ನನ್ನ ‘ಸೆಪ್ಟೆಂಬರ್ 10’ ಚಿತ್ರದ ವಿತರಣೆಗೆ ಕಮಲ್ ಕೈಜೋಡಿಸಿದ್ದಾರೆ. ಅವರು ರಿಯಲ್ ಎಸ್ಟೇಟ್‌ನಲ್ಲಿ ಗುರುತಿಸಿಕೊಂಡವರು. ಈಗ ಸಿನಿಮಾದಲ್ಲಿ ಏನಾದರೂ ಮಾಡಲು ಬಂದಿದ್ದಾರೆ. ನಾನು 105 ಚಿತ್ರ ಮಾಡಿದವನಾದರೂ, ಐದು ನಿರ್ದೇಶಕರಲ್ಲಿ ಒಬ್ಬನಾಗಿರಲು ಒಪ್ಪಿದೆ. ಇದು ಕೊಟ್ಟು ತೆಗೆದುಕೊಳ್ಳುವ ಪಾಲಿಸಿ ಅಷ್ಟೇ’ ಎಂದರು.





