Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ಉಲ್ಲಂಘನೆ ಆರೋಪ : ಸಿಎಂ ಗೆ ಬಹಿರಂಗ ಪತ್ರ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ದಿನಾಂಕ ೨೦ .೧೦.೨೦೨೨ ರಂದು ಹೊರಡಿಸಿರುವ ಟಿಪ್ಪಣಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ೨೦೦೯ ರ ಪ್ರಕರಣ ೨೯ ಸ್ಪಷ್ಟ ಉಲ್ಲಂಘನೆಯಾಗಿದ್ದು ಅದನ್ನು ಕೂಡಲೇ ಹಿಂಪಡೆಯುವoತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕರ್ನಾಟಕ ಜಾಗೃತ ನಾಗರಿಕರ ತಂಡವು ಬಹಿರಂಗವಾಗಿ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲೇನಿದೆ ?

ನಿಮ್ಮ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದೆ. ಅದರೆ ಪ್ರತಿ ದಿನವೂ ಒಂದಿಲ್ಲೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಆದರೆ ಆರೋಪಗಳನ್ನು ನಿರಾಕರಿಸದ ನೀವು ಮತ್ತು ನಿಮ್ಮ ಪಕ್ಷದ ಮುಖಂಡರು ಬದಲಿಗೆ ವಿತಂಡವಾದ ಮಾಡುತ್ತಿರುವುದು, ಹಿಂದಿನ ಸರಕಾರವನ್ನು ದೂಷಿಸುವುದು ದಿನನಿತ್ಯದ ಸುದ್ದಿಯಾಗಿದೆ.

ನಿಮ್ಮ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಮತಾಂಧತೆ, ಜಾತಿ ದೌರ್ಜನ್ಯಗಳು ನಿರಂತರವಾಗಿ ಜಾರಿಯಲ್ಲಿದೆ. ಮಕ್ಕಳು ಮಹಿಳೆಯರ ಮೇಲಿನ ದೌರ್ಜನ್ಯ ಗಳ ನಿಯಂತ್ರಣಕ್ಕೆ ಎಳ್ಳಷ್ಟೂ ಗಮನವಿಲ್ಲ.

ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಬದಲಿಗೆ ಕ್ರಿಯೆಗೆ ಪ್ರತಿಕ್ರಿಯೆ ಎಂದು ನೀವೇ ನೇರವಾಗಿ ಅಪರಾಧಗಳನ್ನು ಸಮರ್ಥನೆ ಮಾಡಿಕೊಳ್ಳುವಿರಿ.
ಗಾಯದ ಮೇಲೆ ಬರೆ ಎಳೆದಂತೆ ಇಲ್ಲಿನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಲಾಗುತ್ತಿದೆ. ನಿಮ್ಮ ಸರಕಾರ ಮತ್ತು ಶಿಕ್ಷಣ ಇಲಾಖೆ ಹೊರಡಿಸುವ ಬಹುತೇಕ ಸುತ್ತೋಲೆಯೂ ಸಂವಿಧಾನ ವಿರೋಧಿಯಾಗಿದೆ.
ಇದನ್ನು ಪ್ರಶ್ನಿಸಿದಾಗ ಮಾನ್ಯ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ರವರು ಯಾವುದೇ ಸಂಯಮವಿಲ್ಲದೆ ಪ್ರತಿ ದಾಳಿ ಮಾಡುತ್ತಾರೆ.

ನಿಮ್ಮ ಸರಕಾರದ ದಮನಕಾರಿ ಆದೇಶಗಳಿಗೆ ಜನರಿಂದ, ಸಂಘಟನೆಗಳು, ಶಿಕ್ಷಣ ತಜ್ಞರಿಂದ ತೀವ್ರ ಪ್ರತಿರೋಧ ವ್ಯಕ್ತವಾದಾಗ ಅದನ್ನು ಹಿಂಪಡೆಯಲಾಗುತ್ತದೆ ಮತ್ತು ಈ ಗೊತ್ತು ಗುರಿಯಿಲ್ಲದ ನೀತಿಯಿಂದ ಆಡಳಿತ ವ್ಯವಸ್ಥೆಯೇ ಕುಸಿದು ಹೋಗಿದೆ

ಇದರ ಮುಂದುವರಿದ ಭಾಗವಾಗಿ ದಿನಾಂಕ 20.10.2022ರಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಧೃಡತೆಗಾಗಿ ಶಾಲೆಗಳಲ್ಲಿ ಧ್ಯಾನ ಮಾಡಬೇಕುಎಂದು ಸುತ್ತೋಲೆ ಹೊರಡಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ಮಕ್ಕಳಿಗೆ ಧ್ಯಾನ ಮಾಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರ ಸಹಿ ಇರುವ ಮನವಿ ಪತ್ರವೊಂದುಮಾನ್ಯ ಶಿಕ್ಷಣ ಸಚಿವರಿಗೆ ಬಂದಿರುತ್ತದೆ

ಆದರೆ ನಮ್ಮ ಪ್ರಶ್ನೆಯೆಂದರೆ ಇದನ್ನು ಯಾರು ನಿರ್ಧರಿಸಬೇಕು?
ಧ್ಯಾನ ನಡೆಸಬೇಕೆಂದು ಯಾವ ಶಿಕ್ಷಣ ತಜ್ಞರು, ಮಕ್ಕಳ ತಜ್ಞರು ಶಿಫಾರಸ್ಸು ಮಾಡಿದ್ದಾರೆ?
ಮಕ್ಕಳ ಏಕಾಗ್ರತೆಗಾಗಿ ಧ್ಯಾನ ಪರಿಹಾರವೆಂದು ಯಾವ ವೈಜ್ಞಾನಿಕ ಸಂಶೋಧನೆಗಳಲ್ಲಿ ವಿವರಿಸಲಾಗಿದೆ? ಯಾವ ಮನೋವೈದ್ಯರು ಇದನ್ನು ಸೂಚಿಸಿದ್ದಾರೆ?
ಈ ಕುರಿತು ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕೆಂದು ಕೋರುತ್ತೇವೆ.
ಇಲ್ಲವೆಂದರೆ ಯಾವ ಮಾನದಂಡಗಳನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎನ್ನುವುದನ್ನು ಸ್ಪಷ್ಟಪಡಿಸಬೇಕಾಗುತ್ತದೆ.

ಬಹುತೇಕ ಮನೋವೈದ್ಯರ ಪ್ರಕಾರ ಆನ್ ಲೈನ್ ಶಿಕ್ಷಣದಿಂದ ಮಕ್ಕಳ ಖಿನ್ನತೆಗೆ ಒಳಗಾಗಿದ್ದಾರೆ. ಶಿಕ್ಷಣ ಇಲಾಖೆಯಿಂದ ಈ ಕುರಿತು ಅಧ್ಯಯನ ಮಾಡಬೇಕೆಂದು ಕೋರುತ್ತೇವೆ.

ಕೋವಿಡ್ ಕಾಯಿಲೆಯ ಕಾರಣದಿಂದ ಉಂಟಾದ ಕಲಿಕೆಯ ನಷ್ಟ ಮತ್ತು ಕಲಿಕೆಯ ಅಂತರದಿಂದಲೂ ಸಹ ಮಕ್ಕಳ ಏಕಾಗ್ರತೆಗೆ ಭಂಗ ಬಂದಿರುತ್ತದೆ. ಇದನ್ನು ಸರಿಪಡಿಸುವ ಕಡೆಗೆ ಕಾರ್ಯಪ್ರವೃತ್ತರಾಗುವದರ ಬದಲಿಗೆ ಯಾವುದೇ ಬೆಂಬಲಿತ ಆಧಾರವಿಲ್ಲದ ಧ್ಯಾನದಂತಹ ವಿವಾದ ನಡೆಗೆ ಮುಂದಾಗಬೇಡಿ ಎಂದು ಒತ್ತಾಯಿಸುತ್ತೇವೆ.

ಶಿಕ್ಷಣ ಇಲಾಖೆಯ ಧ್ಯಾನ ಮಾಡುವ ನಿರ್ಧಾರದಿಂದ ಸಂವಿಧಾನದ ಪರಿಚ್ಛೇದ 29(1)ರ ‘ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೂ ಅವರದೇ ಆದ ಸಂಸ್ಕೃತಿ, ಭಾಷೆ, ಲಿಪಿ ಇರುತ್ತದೆ. ಈ ಭಿನ್ನತೆಯನ್ನು, ಬಹು ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಅವರ ಹಕ್ಕು’ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಇದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿಕನಿಷ್ಟ ಮೂಲಭೂತ ಅಗತ್ಯವಾದ ನೀರಿನ ವ್ಯವಸ್ಥೆ ಇರುವ ಸ್ವಚ್ಛ ಶೌಚಾಲಯಗಳಿಲ್ಲ. ಇತರ ಸೌಕರ್ಯಗಳಿಲ್ಲ, ಶಿಕ್ಷಕರಿಲ್ಲ, ಗುಣ ಮಟ್ಟದ ಕಲಿಕೆಯಿಲ್ಲ. ಬಜೆಟ್ ನಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಅನುದಾನ ಕೊಡುತ್ತಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವದರ ಬದಲಿಗೆ ಹೀಗೆ ಅನವಶ್ಯಕ ವಿವಾದಗಳನ್ನು ಹುಟ್ಟು ಹಾಕುತ್ತಿರುವುದು ಆಪೇಕ್ಷಣೀಯವಲ್ಲ.

ಇದಕ್ಕೂ ಹಿಂದೆ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ, ತಜ್ಞರೊಂದಿಗೆ, ಶಿಕ್ಷಣದ ಭಾಗೀದಾರರೊಂದಿಗೆ ಸಮಾಲೋಚಿಸದೆ ಸ್ವ ಹಿತಾಸಕ್ತಿಗಾಗಿ ಉನ್ನತ ಶಿಕ್ಷಣದಲ್ಲಿ ಎನ್ ಇಪಿ 2020ನ್ನು ಜಾರಿಗೊಳಿಸಿದ ಕಾರಣಕ್ಕೆ ಇಂದು ವಂಚಿತ ಸಮುದಾಯಗಳ, ಬಡ ಕುಟುಂಬಗಳ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನದಲ್ಲಿದೆ.

ಪಠ್ಯಪುಸ್ತಕ ಪುನರ್ ಪರಿಶೀಲನೆ ನೆಪದಲ್ಲಿ ಅನಧಿಕೃತ ಸಮಿತಿಯನ್ನು ರಚನೆ ಮಾಡಿ ಅದರ ಸಂವಿಧಾನ ವಿರೋಧಿ ಶಿಪಾರಸ್ಸುಗಳಿಂದ ವಿವಾದ ಉಂಟಾಗಿದ್ದು, ನಂತರ ತೀವ್ರ ವಿರೋಧ ಬಂದ ನಂತರ ತೇಪೆ ಹಾಕುವ ಕೆಲಸ ಮಾಡಲಾಯಿತು.

ಇತ್ತೀಚೆಗೆ ಪೋಷಕರಿಂದ ಪ್ರತಿ ತಿಂಗಳು ರೂ.100 ಸಂಗ್ರಹಿಸಬೇಕೆಂದು ಶಿಕ್ಷಣ ಇಲಾಖೆಯು ಎಸ್ ಡಿಎಂಸಿಗೆ ಹೊರಡಿಸಿದ ಸುತ್ತೋಲೆಯು ಸಹ ವಿವಾದಕ್ಕೆ ಕಾರಣವಾಗಿ ಇದಕ್ಕೂ ತೀವ್ರ ಪ್ರತಿರೋಧ ಬಂದ ನಂತರ ಸುತ್ತೋಲೆ ಹಿಂದಕ್ಕೆ ಪಡೆಯಲಾಯಿತು.

ಮೇಲಿನ ಎಲ್ಲಾ ವಿಚಾರಗಳು ನಿಮ್ಮ ಗಮನಕ್ಕೆ ಬಂದಿರುತ್ತದೆ ಎಂದು ಆಶಿಸುತ್ತೇವೆ.
ಶೈಕ್ಷಣಿಕ ವರ್ಷದ ಕಡೆಯ ಹಂತದಲ್ಲಿ ಈ ರೀತಿಯ ಸುತ್ತೋಲೆ ಹೊರಡಿಸುವುದು ನ್ಯಾಯಯುತಲ್ಲ.
ಮಕ್ಕಳ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಈ ಕೂಡಲೇ ಧ್ಯಾನ ನಡೆಸುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಕೋರುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ..

ಕರ್ನಾಟಕ ಜಾಗೃತ ನಾಗರಿಕ ತಂಡದಲ್ಲಿ ಯಾರೆಲ್ಲ ಇದ್ದಾರೆ?

ಡಾ. ಕೆ. ಮರುಳಸಿದ್ಧಪ್ಪ

ಡಾ.ಜಿ.ರಾಮಕೃಷ್ಣ

ಡಾ. ವಿಜಯಾ
ಪ್ರೊ.ಎಸ್. ಜಿ. ಸಿದ್ದರಾಮಯ್ಯ
ಡಾ.ಬಂಜಗೆರೆ ಜಯಪ್ರಕಾಶ್
ಕೆ. ಎಸ್. ವಿಮಲ
ಪ್ರೊ.ರಾಜೇಂದ್ರ ಚೆನ್ನಿ
ಮಾವಳ್ಳಿ ಶಂಕರ್
ಡಾ.ವಸುಂಧರಾ ಭೂಪತಿ
ಡಾ.ಮೀನಾಕ್ಷಿ ಬಾಳಿ
ಎಸ್. ವೈ. ಗುರುಶಾಂತ್
ಬಿ. ಶ್ರೀಪಾದ ಭಟ್
ಕೆ. ನೀಲಾ
ವಸಂತರಾಜ ಎನ್.ಕೆ.
ಗುರುಪ್ರಸಾದ್ ಕೆರಗೋಡು
ಸುರೇಂದ್ರ ರಾವ್. ಟಿ
ಆರ್. ರಾಮಕೃಷ್ಣ.
ರುದ್ರಪ್ಪ ಹುನಗವಾಡಿ
ಡಾ. ಲೀಲಾ ಸಂಪಿಗೆ
ವಿ. ಪಿ. ನಿರಂಜನಾರಾಧ್ಯ
ಯೋಗಾನಂದ ಬಿ. ಎನ್.
ಶಿವಣ್ಣ
ಎನ್ ಆರ್ ವಿಶುಕುಮಾರ್
ಎನ್. ಗಾಯತ್ರಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ