ಯು ಆರ್ ಅನಂತಮೂರ್ತಿಯವರ ಪಾಂಗಿತ ಭೋಜನ
‘ಈ ನಕಲಿ ಸ್ವಾತಂತ್ರ್ಯೋತ್ಸವಕ್ಕೆ ದೇವರೇಕೆ ಬೇಕಿತ್ತು? ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಹಿಂದುತ್ವದ ಅಜೆಂಡಾ ತೂರಿಸಿದ್ದಾರೆ.’
-ಎಂದೆಲ್ಲಾ ಬುದ್ವಂತರೊಬ್ಬರು ಕಾರಿಕೊಂಡಿದ್ದರು.ಪಾಪ ಈ ವಿಚಾರವಾದಿಯ ಕಣ್ಣಿಗೆ ಈ ಅಚ್ಚುಕಟ್ಟಾದ ಹೂವಿನ ಅಲಂಕಾರ, ಅದನ್ನು ಒಪ್ಪವಾಗಿ ಜೋಡಿಸಿರುವ ಕಲಾತ್ಮಕ ಸೌಂದರ್ಯ ಯಾವುದೂ ಕಾಣುವುದಿಲ್ಲ. ಈ ಜೋಡಣೆಯ ಶ್ರದ್ಧೆ, ತಾಳ್ಮೆಯಲ್ಲಿ ಅಡಗಿರುವ ದೇಶದ ಮೇಲಿನ ಪ್ರೀತಿ (ಭಕ್ತಿ) ಕಾಣಿಸುವುದಿಲ್ಲ.
ಪ್ರಸಂಗವೊಂದು ನೆನಪಾಗುತ್ತದೆ.
ನನ್ನ ಅಯ್ಯಂಗಾರ್ ಗೆಳೆಯನೊಬ್ಬ ಅನೇಕ ಸ್ನೇಹಿತರೊಂದಿಗೆ ಯು.ಆರ್.ಅನಂತಮೂರ್ತಿಯವರನ್ನು ರಾತ್ರಿ ಔತಣಕ್ಕೆ ಕರೆದಿದ್ದ. ಎಂಟು ಜನರ ಗುಂಪು ಅದು. (೧೯೮೧) ಮಿತ್ರನ ತಾಯಿ ಅನೇಕ ಭಕ್ಷ್ಯಗಳನ್ನು ತಾವೇ ಮಾಡಿದ್ದರು. ಕೆಂಡದಲ್ಲಿ ಸುಡುವ ಹಲಸಿನ ಹಪ್ಪಳವನ್ನು ಕೂಡ ಮಾಡಬೇಕಿತ್ತು. ಗ್ಯಾಸ್ ಇದ್ದ ಮನೆ ಅದು. ನಿಗಿ ನಿಗಿ ಕೆಂಡ ಎಲ್ಲಿಂದ ತರುವುದು? ಅವರ ಮನೆಯ ಹಿತ್ತಲಿನಲ್ಲಿ ಸೌದೆ ಉರಿಸಿ ಕೆಂಡದಲ್ಲಿ ಹಪ್ಪಳ ಸುಡಿಸಿದ್ದರು.
ಅದರ ವಾಸನೆಯ ಘಮಲು ಯುಆರ್‌ಎ ರವರಿಗೆ ಅದಾವ ಜನ್ಮದ ಪೂರ್ವ ವಾಸನೆ ನೆನಪಿಸಿತೋ? ಹಪ್ಪಳ ಸುಡುವ ಜಾಗಕ್ಕೇ ಬಂದರು. ಕೆಂಡದಲ್ಲಿ ಸುಡುವ ಹಪ್ಪಳದ ಬಗ್ಗೆ ಒಂದು ಸೊಗಸಾದ ವ್ಯಾಖ್ಯಾನ ನೀಡಿದರು.
ಅದೇ ಮೂಡಿನಲ್ಲಿ ಎಲ್ಲರೂ ನೆಲದ ಮೇಲೆ ಕುಳಿತು ಊಟ ಮಾಡೋಣ ಎಂದರು. ಟೇಬಲ್ ಮೇಲಿದ್ದ ದೊಡ್ಡ ದೊಡ್ಡ ಬಾಳೆ ಎಲೆಗಳು ನೆಲಕ್ಕಿಳಿದವು. ಅದರ ಮೇಲೆ ಮಘ ಮಘಿಸುವ ಪಲ್ಯ ಇತ್ಯಾದಿಗಳು ಕುಳಿತವು.
‘ನಮ್ಮ ಊರು ನೆನಪಾಗುತ್ತಿದೆ‘ ಎಂದ ಯುಆರ್‌ಎರವರು, ಚಕ್ಕಮಕ್ಕಳ ಹಾಕಿಕೊಂಡು ಅದೇನೋ ಸ್ತೋತ್ರ ಹೇಳಿ (ಅದು ಅವರಿಗೆ ನೆನಪಿತ್ತು!) ಊಟವನ್ನು ಚಪ್ಪರಿಸಿಕೊಂಡು ತಿಂದರು. ಅವರ ತಾಯಿ ಹೇಗೆ ಬಡಿಸುತ್ತಿದ್ದರು, ತುಪ್ಪ ಹಾಕುತ್ತಿದ್ದ ಬಗೆ ಹೇಗೆ? ಅದರ ಒಪ್ಪ ಓರಣ ಹೇಗಿರುತ್ತಿತ್ತು,ಎಂಬುದನ್ನೆಲ್ಲಾ ಸ್ವಾರಸ್ಯಕರವಾಗಿ ವಿವರಿಸುತ್ತಾ ಪಾಂಗಿತವಾಗಿ ಊಟ ಮಾಡಿದರು.
ನನಗೋ ದಿಗ್ಭ್ರಮೆ! ಇಷ್ಟು ವರ್ಷ ಕಂಡ ವಿಚಾರವಾದಿ ಇವರೇನಾ? ಎಂಬ ಅನುಮಾನ. ಈ ಲಂಕ, ಚಂಪಿ ಇವರುಗಳು ಆಡಿಕೊಳ್ಳುವುದಕ್ಕೂ, ಈ ವಯ್ಯ ಆಡುವುದಕ್ಕೂ ಸರಿಯಾಗಿದೆ ಎಂಬ ಬೇಜಾರು. ಊಟದ ಸಂಭ್ರಮದ ನಡುವೆ ಮಾತಾಡಲಾಗದ ಸಂದಿಗ್ಧತೆ.
ಅಡುಗೆಯನ್ನು ಬಾಯಿ ತುಂಬಾ ಹೊಗಳುತ್ತಾ ಮೆಲ್ಲುತ್ತಿದ್ದ ಗುರುಗಳು ಅಂದರು, ‘ನೋಡಿ ನಮ್ಮ ಹಿಂದಿನವರಿಗೆ ಊಟ ಅನ್ನುವುದೂ ಕೂಡಾ ಒಂದು ದೈವೀಪೂಜೆ. ಅದೊಂದು ಶ್ರದ್ಧಾ ಭಕ್ತಿಗಳಿಂದ ಭುಂಜಿಸುವ ಕ್ರಿಯೆ. ಪ್ರತಿಯೊಂದಕ್ಕೂ ವ್ಯವಸ್ಥಿತ ಸಿದ್ಧತೆ ಇರುತ್ತದೆ.
‘ಕೆಲವರಿಗೆ ಊಟ ಅಂದರೆ ನಿಷಿದ್ಧದ ಡಯಟ್! ಅದು ಬೇಡ, ಇದು ಕೊಲೆಸ್ಟರಾಲ್, ಇದು ಡಯಾಬಿಟಿಕ್ ಅಂತ ಹೇಳಿಕೊಂಡು ಊಟದ ಸ್ವಾದಿಷ್ಟ್ಯವನ್ನೇ ಕೊಂದುಬಿಡುತ್ತಾರೆ ಎಂದು ವಿವರಿಸುತ್ತಿದ್ದರು.
ಅಭಿರುಚಿಯನ್ನು ಕುರಿತಂತೆ ಟಿ.ಎಸ್.ಎಲಿಯಟ್ಟನ ಮಾತೊಂದನ್ನು ಉದಾಹರಿಸುತ್ತ ನಾನೆಂದೆ ‘ನಾವು ತಿನ್ನುವ ಆಹಾರದ ಪ್ರತಿಯೊಂದು ಕಣವೂ, ದೇಹದ ಮೇಲೆ ಅದರದೇ ಪರಿಣಾಮ ಬೀರುತ್ತದೆ. ಹಾಗಿದ್ದಾಗ ಅನಾರೋಗ್ಯಕರ ಅಂತ ಹೇಳಿರುವ ಪದಾರ್ಥಗಳನ್ನು ಬಿಟ್ಟರೆ ಒಳ್ಳೆಯದಲ್ಲವೇ?’
ಗುರುಗಳೇ ಹಾಗೆ. ಸರಿ ಅನ್ನಿಸಿದ್ದನ್ನು ತಕ್ಷಣವೇ ಒಪ್ಪಿಕೊಳ್ಳುವ ಗುಣ.
‘ಹೌದೌದು. ಅನಾರೋಗ್ಯಕರವಾದದ್ದನ್ನು ಸೇವಿಸಬಾರದು ನಿಜ. ಆದರೆ ರುಚಿಕಟ್ಟಾದ ಅಡುಗೆಯನ್ನು ಚಪ್ಪರಿಸಿ ತಿನ್ನುವ ಸಂತೋಷ ಕಳೆದುಕೊಳ್ಳಬಾರದು. ಊಟ ಅಂದರೆ, ಬರಿಯ ಹೊಟ್ಟೆ ತುಂಬಿಸಿಕೊಳ್ಳುವ ಯಾಂತ್ರಿಕ ಕ್ರಿಯೆಯಲ್ಲ. ರಸನೆಗಳನ್ನು ಆಸ್ವಾದಿಸುವ ಗುಣ.
‘ಟ್ಯಾಗ್ ಲೈನ್ ಯಾವುದೆಂದರೆ, ಆರೋಗ್ಯಕ್ಕೆ ಮಾರಕವಾಗದಂತೆ ಹಿತ ಮಿತವಾಗಿ ತಿನ್ನುವ ಅಭ್ಯಾಸ.’
ಅವರ ಇನ್ನೊಂದು ಮಾತೂ ನೆನಪಿನಲ್ಲಿದೆ. ‘ಈಗ ಶಾಸ್ತ್ರೋಕ್ತ ಮದುವೆ ಏನಿದೆಯೋ ಅದನ್ನು ಹಾಗೆ ಅದೇ ರೀತಿಯಲ್ಲಿ, ಅದೇ ರಿವಾಜಿನಲ್ಲಿ ಮಾಡಿದರೆ ಚೆಂದ. ಸರಳ ವಿವಾಹಕ್ಕೆ ಒಂದು ಸ್ವರೂಪವಿದೆ. ಅವುಗಳನ್ನು ಹಾಗಾಗೇ ಮಾಡಿದಾಗಲೇ ಸೊಗಸು. ಎರಡನ್ನೂ ಬೆರಕೆ ಮಾಡಿದರೆ ಹದಗೆಡುತ್ತದೆ. ಮಗಳ ಮದುವೆ ಮಾತ್ರ ಸರಳವಾಗಿರಬೇಕು. ಮಗನದಾದರೆ ಅದ್ಧ್ದೂರಿಯಾಗಿರಬೇಕು! ಈ ಧೋರಣೆ ಕೂಡದು. ಹಾಗಾದಾಗ ಎಡಬಿಡಂಗಿಯಾಗುತ್ತೇವೆ.’
ಊಟವಾಯಿತು. ಬೀಡಾ, ಹಣ್ಣು ಬಂದವು. ಇಂತಹ ಔತಣಕ್ಕೆ ಬೀಡಾಗಿಂತ ಎಲೆ ಅಡಿಕೆಯೇ ಚೆಂದ ಅಂದರು. ರಾತ್ರಿ ಹತ್ತು ಮೀರಿತ್ತು. ನಾನು, ವಾಸು (ಪ್ರೊ.ಕೆ.ಪಿ.ವಾಸುದೇವನ್) ಹೋಗಿ ಮೈಸೂರು ಚಿಗುರೆಲೆ ಹುಡುಕಿ ತಂದೆವು.
‘ನಾರಾಣಪ್ಪ ಸತ್ತರೂ ಬ್ರಾಹ್ಮಣ್ಯ ಅವನನ್ನು ಬಿಡಲಿಲ್ಲ. ಅದನ್ನು ಮರೆಯೋದು ಕಷ್ಟ ಅಲ್ಲವಾ ಸಾರ್’ ಎಂದೆ.
‘ನಮ್ಮ ಪರಂಪರೆಯ ಯಾವುದೇ ಒಳ್ಳೆಯ ಅಂಶಗಳನ್ನೂ ನಾನು ಮರೆತಿಲ್ಲ. ಮರೆಯಬಾರದು. ಜಾತ್ಯತೀತವಾಗಿ ಬದುಕುವುದು, ವೈಚಾರಿಕತೆಯನ್ನು ಕಾಪಾಡಿಕೊಳ್ಳುವುದು, ಇವೆಲ್ಲವೂ ವ್ಯಕ್ತಿತ್ವದ ಒಂದು ಭಾಗ. ಹಾಗೆಂದು ನಮ್ಮ ಸಂಸ್ಕೃ ತಿಯ ಉತ್ತಮಾಂಶಗಳನ್ನು ಬಿಟ್ಟರೆ ಗೊಡ್ಡುಗಳಾಗಿ ಬಿಡುತ್ತೇವೆ. ನಮ್ಮ ಪೂರ್ವಿಕರೆಲ್ಲ ಸಾತ್ವಿಕವಾಗಿ ನಮಗಿಂತ ಘನವಾದ ಬದುಕನ್ನು ಬದುಕಿದ್ದಾರೆ.
‘ಈಗ ನೀನೇ ನೋಡಿದೆಯಲ್ಲಾ? ನಮ್ಮ ಊಟ ಮಾಡುವ ಪದ್ಧತಿಯಲ್ಲಿ ಎಂತಹ ಒಂದು ಶಿಸ್ತು ಸೊಗಸು ಇದೆ. ವಾಸು ತಾಯಿಯವರು ಎಷ್ಟು ಶ್ರದ್ಧೆಯಿಂದ ಶ್ರಮವಹಿಸಿ ಅಡುಗೆ ಮಾಡಿದ್ದಾರೆ. ಅದನ್ನು ಅಷ್ಟೇ ಪಾಂಗಿತವಾಗಿ ತಿಂದಾಗಲೇ ಅದಕ್ಕೆ ತಕ್ಕ ಗೌರವ ಸಲ್ಲಿಸಿದಂತಾಗುತ್ತದೆ. ಇವೆಲ್ಲವೂ ನಮ್ಮ ಸಂಸ್ಕೃತಿಯ ಉತ್ತಮ ಭಾಗಗಳು. ಈವತ್ತಿನ ದಿನಗಳಲ್ಲಿ ಇದೇ ರೀತಿ ದಿನವೂ ತಿನ್ನಲಾಗದು. ಅಪರೂಪದ ಔತಣಗಳಲ್ಲಿ ಹೀಗೆ ತಿಂದಾಗಲೇ ಅದಕ್ಕೊಂದು ಸೊಗಸು.
‘ನಾವು ಹೇಳಿಕೊಳ್ಳುವ ನಮ್ಮ ವೈಚಾರಿಕತೆ ಹುಸಿಯಾಗುವುದಿಲ್ಲವೇ?’
‘ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದೇವೆ ಎಂದರೆ ನಮ್ಮ ಪರಂಪರೆಯ ಉತ್ತಮಗಳನ್ನು ತಿರಸ್ಕರಿಸಿದ್ದೇವೆ ಅಂತಲ್ಲ. ಮಾತೇ ಇದೆಯಲ್ಲಾ? ಹಳೆ ಬೇರು ಹೊಸ ಚಿಗುರು ಎರಡರ ಸಮತೋಲನ ಮುಖ್ಯ’ ಎಂದರು.
(ಅವರು ಮನೆಯಲ್ಲಿ, ತಮ್ಮ ತೋಟದಲ್ಲಿ ದಲಿತ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು ನನಗೆ ಗೊತ್ತಿತ್ತು. ಚಿಕನ್, ಮಟನ್ ತಿನ್ನುತ್ತಿದ್ದರು. ರಮ್ಯ ಹೋಟೆಲ್‌ನಲ್ಲಿ ಕುಳಿತಾಗ, ‘ಕಾಯಿ ಚೂರು ಹಾಕಿದ ಈ ಉದ್ದಿನವಡೆಯ ಟೇಸ್ಟ್ ಮುಂದೆ ಚಿಕನ್ ಮುಂಚೂರಿಯನ್ನು ನಿವಾಳಿಸಬೇಕು ಕಣಯ್ಯಾ!’ ಎಂದು ಚಪ್ಪರಿಸಿದ್ದರು).
ಅದು ಹೇಗೋ ಗುರುಗಳು ಶಾಸ್ತ್ರೋಕ್ತವಾಗಿ ಊಟ ಮಾಡಿದ ಸುದ್ದಿ ಲೀಕಾಯಿತು. ದ್ವಂದ್ವಾಚಾರಿ, ಗೊಂದಲಾಸುರ ಎಂದು ಚಂಪಾ ಪಟಾಲಂ ಟೀಕಿಸಿ ಕುಣಿದಾಡಿತು.
ಗುರುಗಳನ್ನು ಕಂಡಾಗ,
‘ಬಲ್ಲವನೇ ಬಲ್ಲ ಬೆಲ್ಲದ ಸವಿಯ. ಅದನು ಉಳಿದವರೇನು ಬಲ್ಲರು!’ ಎಂದು ನಕ್ಕರು. ಗುರುಗಳ ಉದಾತ್ತತೆ ಎಷ್ಪೆತ್ತೆಂದರೆ ಯಾವನೆಷ್ಟೇ ಕಟು ಶಬ್ದಗಳಿಂದ ನಿಂದಿಸಲಿ. ಅವರೆಂದೂ ಕಹಿಯಾಗಿ ಉತ್ತರಿಸುತ್ತಿರಲಿಲ್ಲ. ಎದುರು ಸಿಕ್ಕಾಗ ಮುಖ ಉರಿದುಕೊಂಡು ಮಾತಾಡುತ್ತಿರಲಿಲ್ಲ. ಅದು ನಿಮ್ಮ ನಿಲುವು, ನನ್ನದು ನನಗೆ ಟಠಿeಜ್ಞಿಜ mಛ್ಟಿoಟ್ಞZ ಎಂಬ ಧೋರಣೆ. ನಾನೇ ಕಂಡಂತೆ ಅನೇಕ ಕಹಿ ಟೀಕೆಗಳನ್ನು ಮರೆತೇ ಬಿಟ್ಟಿರುತ್ತಿದ್ದರು. ಹೆಗಲ ಮೇಲೆ ಕೈಹಾಕಿ ಹಳೇ ವಿಶ್ವಾಸದಲ್ಲಿ ಮಾತಾಡಿದೊಡನೆ, ಅವರ ಕಟು ಟೀಕಾಸ್ತ್ರಿಗಳು ತಂತಾವೇ ಹುಳ್ಳುಳ್ಳಗಾಗುತ್ತಿದ್ದವು.
ಕಾಲಕಾಲಕ್ಕೆ ಸರಿ ಅನ್ನಿಸಿದಂತೆ ಬದುಕಿದ ಜೀವ ಅದು. ೨೧-೧೨-೧೯೩೨ ಅವರ ಜನ್ಮದಿನ.