ಬಾನಾ ಸುಬ್ರಮಣ್ಯ
ಚಲನಚಿತ್ರ ಸಮಾಜಗಳ ಒಕ್ಕೂಟ ಚಿತ್ರೋತ್ಸವದಲ್ಲಿ ಮುಕ್ತ ವೇದಿಕೆಯ ಮೂಲಕ ಚಿತ್ರೋತ್ಸವಗಳಿಗೆ ಸಂಬಂಧಿಸಿದಂತೆ ಚರ್ಚಿಸುವುದು ವಾಡಿಕೆ. ಈ ಬಾರಿ ಅದಕ್ಕೆ ತಿಲಾಂಜಲಿ ಅರ್ಪಿಸಿದಂತಿದೆ!
ಎಂದಿನಂತೆ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಮಲಯಾಳ ಚಿತ್ರರಂಗದ ಮಂದಿ. ಆರಂಭದ ವರ್ಷಗಳಲ್ಲಿ ಇದ್ದಂತೆ ಪ್ರತಿನಿಧಿಗಳು ಈಗ ಬರುತ್ತಿಲ್ಲ ಎನ್ನುವುದು ಇಲ್ಲಿ ಕೇಳಿ ಬರುತ್ತಿರುವ ಮಾತು. ಬಹುತೇಕ ರಾಜ್ಯಗಳಲ್ಲಿ ಅಲ್ಲಿನವೇ ಚಿತ್ರೋತ್ಸವಗಳಿವೆ. ಅದಕ್ಕಿಂತಲೂ ಹೆಚ್ಚಾಗಿ, ಇಲ್ಲಿನ ಕಾರ್ಯಕ್ರಮಗಳು, ತಜ್ಞರ ಜೊತೆ ಮಾತುಕತೆಯೇ ಮೊದಲಾದವುಗಳಲ್ಲಿ ಹಿಂದಿ ಚಿತ್ರರಂಗದ ಮಂದಿಗೆ ಆದ್ಯತೆ. ಕನ್ನಡದ ಮಂದಿಗೆ ಆಹ್ವಾನ ಅಪರೂಪ. ದೇಶವಿದೇಶಗಳಲ್ಲಿ ಸಂಚಲನ ಮೂಡಿಸುತ್ತಿರುವ ಕನ್ನಡ ಚಿತ್ರ ರಂಗದ ಯಾರನ್ನೂ ಯಾವುದೇ ರೀತಿಯಲ್ಲೂ ತೊಡಗಿಸಿಕೊಂಡಿರಲಿಲ್ಲ. ನಿನ್ನೆ ಅಚಾನಕ್ಕಾಗಿ ರಿಷಭ್ ಶೆಟ್ಟಿ ಅವರೊಂದಿಗೆ ಮಾತುಕತೆ ನಿಗದಿ ಮಾಡಿದ್ದು ಎಲ್ಲರ ಹುಬ್ಬೇರಸಿದ್ದಂತೂ ಹೌದು.
ಭಾರತದ ಅಂತಾರಾಷ್ಟೀಯ ಚಿತ್ರೋತ್ಸವದ (ಇಫ್ಫಿ) ೫೩ ನೇ ಆವೃತ್ತಿ ವೇಳಾಪಟ್ಟಿಯಂತೆ ನವೆಂಬರ್ ೨೦ರಿಂದ ಗೋವಾದ ಪಣಜಿಯಲ್ಲಿ ನಡೆಯುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಚಲನಚಿತ್ರ ನಿರ್ದೇಶನಾಲಯ, ಗೋವಾ ಎಂಟರ್ಟೈನ್ ಸೊಸೈಟಿಯ ಸಹಯೋಗದೊಂದಿಗೆ ಈ ಉತ್ಸವವನ್ನು ೨೦೦೪ರಿಂದ ನಡೆಸುತ್ತಿತ್ತು. ಕಳೆದ ವರ್ಷದಿಂದ ಈ ಉತ್ಸವವನ್ನು ನಡೆಸುವ ಹೊಣೆ ಚಲನಚಿತ್ರ ನಿರ್ದೇಶನಾಲಯದಿಂದ, ರಾಷ್ಟ್ರೀಯ ಚಲನಚಿತ್ರಅಭಿವೃದ್ಧಿ ನಿಗಮಕ್ಕೆ ಸೇರಿದೆ. ಸಿನಿಮಾರಂಗದ ಗಣ್ಯರ ಸಮಿತಿಯೊಂದರ ಶಿಫಾರಸಿನಂತೆ, ಚಲನಚಿತ್ರೋತ್ಸವ ನಿರ್ದೇಶನಾಲಯ, ಮಕ್ಕಳ ಚಿತ್ರ ಸಮಾಜ, ಫಿಲಂ ಡಿವಿಜನ್ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ ಮತ್ತು ಫಿಲಂ ಡಿವಿಜನ್ ಈ ನಾಲ್ಕು ಸಂಸ್ಥೆಗಳ ಮೇಲ್ವಿಚಾರಣೆ, ಆಡಳಿತ ಚಲನಚಿತ್ರಅಭಿವೃದ್ಧೀ ನಿಗಮಕ್ಕೆ ಸೇರುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಕೇಂದ್ರ ಸರ್ಕಾರದ ಪರವಾಗಿ ನಿಗಮ ನಡೆಸುತ್ತಿದೆ.
ಈ ಬಾರಿ ಚಿತ್ರೋತ್ಸವದ ಉದ್ಘಾಟನೆಯ ವೇಳೆ ಬದಲಾವಣೆಯ ಪರಿಚಯ ಎಲ್ಲರಿಗೂಆಯಿತು. ಸಾಮಾನ್ಯವಾಗಿ ವಾಹಿನಿಗಳು ನಡೆಸುವ ರಿಯಾಲಿಟಿ ಶೋ, ಇಲ್ಲವೇ ಇತರ ಕಾರ್ಯಕ್ರಮಗಳಂತೆ, ಇಲ್ಲೂ ಕೂಡಾ ಉದ್ಘೋಷಕ, ಪ್ರಾಯೋಜಕರ ಹೆಸರು ಹೇಳಿಕೊಂಡೇ ಆರಂಭಿಸಿದ್ದು ಚಿತ್ರೋತ್ಸವದ ಕುರಿತಂತೆ ತಿಳಿದವರ ಹುಬ್ಬೇರುವಂತೆ ಮಾಡಿತ್ತು. ಕಾರ್ಯಕ್ರಮದ ರೂಪುರೇಷೆ ಬದಲಾಗಿತ್ತು. ಸಾಮಾನ್ಯವಾಗಿ ಚಿತ್ರರಂಗದ ಗಣ್ಯರೊಬ್ಬರು ಈ ಚಿತ್ರೋತ್ಸವವನ್ನು ಉದ್ಘಾಟಿಸುವುದು ವಾಡಿಕೆ. ಆದರೆ ಈ ಬಾರಿಕೇಂದ್ರ ವಾರ್ತಾ ಸಚಿವರು, ಇಲಾಖೆಯ ರಾಜ್ಯಸಚಿವರು, ಗೋವಾ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ವಾರ್ತಾ ಕಾರ್ಯದರ್ಶಿಗಳಿಗೆ ಈ ಜವಾಬ್ದಾರಿ. ಹಿಂದಿನ ದಿನಗಳಲ್ಲಿ ತಾರೆಯೊಬ್ಬರು ದೀಪ ತಂದು ಬೆಳಗಲು ನೆರವಾಗುತ್ತಿದ್ದರು. ಬದಲಾದ ಪರಿಸರದಲ್ಲಿ ಕ್ಯಾಂಡಲ್ ದೀಪದ ಸ್ಥಾನ ಪಡೆದಿತ್ತು. ತಾರೆ ಇರಲಿಲ್ಲ. ಅದಕ್ಕೆ ಕಾರಣವೂ ಇತ್ತೆನ್ನಿ. ಕೆಲವು ವರ್ಷಗಳ ಹಿಂದೆ ಉದ್ಘಾಟನೆಗೆ ನಟ ಶಾರೂಕ್‌ಖಾನ್‌ರನ್ನು ಆಹ್ವಾನಿಸಿದರೆ, ಎರಡು ವರ್ಷಗಳ ನಂತರ ಅವರನ್ನು ನಿರೂಪಕರಾಗಿ ಆಹ್ವಾನಿಸಿದ್ದರು! ಹಿಂದಿ ತಾರೆಯರನ್ನು ಮೆರೆಸುವ ವೇದಿಕೆಯಾಗಿ ಈ ಚಿತ್ರೋತ್ಸವ ಆಗುತ್ತಿದೆ ಎನ್ನುವುದು ಗಂಭೀರ ಚಿತ್ರಪರಂಪರೆಯ ಮಂದಿಯ ಆರೋಪವನ್ನು ಈತ್ತೀಚಿನ ಬೆಳವಣಿಗೆಗಳು ಸಾಕ್ಷೀಕರಿಸುತ್ತಿವೆ.
ಹಾಗಂತ ತಾರೆಯರು ಇರಲಿಲ್ಲ ಎಂದೇನೂ ಇಲ್ಲ. ಕೆಲವು ಮಂದಿ ತಾರೆಯರೂ ಇದ್ದರು. ಅವರಲ್ಲಿ ಹೆಚ್ಚಿನವರು ಹಿಂದಿ ಚಿತ್ರರಂಗದವರೇ. ಅವರನ್ನು ವೇದಿಕೆಗೆ ಕರೆದು ಗೌರವಿಸಲಾಯಿತು.
ಅಕ್ಷರಶಃ ವಾಹಿನಿಗಳ ಕಾರ್ಯಕ್ರಮಗಳನ್ನು ನೆನಪಿಸುತ್ತಿದ್ದ ಉದ್ಘಾಟನಾ ಸಮಾರಂಭದಲ್ಲಿ ನಿರೂಪಕರೂ ಅದನ್ನು ಮತ್ತೆ ಮತ್ತೆ ನೆಪಿಸುತ್ತಿದ್ದುದು ಸಭಾಸದರನ್ನು ಆಗಾಗ ಚಪ್ಪಾಳೆ ಹಾಕಲು ಕೋರುವುದರ ಮೂಲಕ! ದಕ್ಷಿಣ ಭಾರತದ, ಅದರಲ್ಲೂ ಕನ್ನಡದ ಕಲಾವಿದರು ಅಲ್ಲಿರಲಿಲ್ಲ.
ಈ ಬಾರಿ ಸತ್ಯಜಿತ್ ರೇ ಹೆಸರಿನಲ್ಲಿ ಉದ್ಘಾಟನಾ ದಿನದಂದು ನೀಡುವ ಪ್ರಶಸ್ತಿಗೆ ಸ್ಪಾನಿಶ್ ನಿರ್ದೇಶಕ ಕಾರ್ಲೋಸ್ ಸೋರಾ ಭಾಜನರಾಗಿದ್ದಾರೆ. ತಮ್ಮ ಅನಾರೋಗ್ಯದ ಕಾರಣ ಬರಲಾಗದ ಅವರ ಪರವಾಗಿ ಮಗಳು ಆನಾ ಸೋರಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ವೇಳೆ ಸಮಾರೋಪ ಸಮಾರಂಭದಲ್ಲಿ ನೀಡಲಾಗುವ ಭಾರತೀಯ ಚಿತ್ರರಂಗದ ವರ್ಷದ ವ್ಯಕ್ತಿ ಪ್ರಶಸ್ತಿಗೆ ತೆಲುಗಿನ ನಟ ಚಿರಂಜೀವಿ ಅವರನ್ನು ಆಯ್ಕೆ ಮಾಡಿರುವುದಾಗಿ ಪ್ರಕಟಿಸಲಾಯಿತು. ಆ ಆಯ್ಕೆ ಪ್ರಧಾನಿ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದು, ಅದಕ್ಕೆ ಚಿರಂಜೀವಿ ಕೃತಜ್ಞತೆ, ಮುಂದಿನ ದಿನಗಳಲ್ಲಿದ್ದವು.
೭೯ ದೇಶಗಳ ೨೮೦ ಚಿತ್ರಗಳು, ಸಮಕಾಲೀನ ವಿಶ್ವ ಸಿನಿಮಾ, ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗ, ಭಾರತೀಯ ಪನೋರಮಾ, ದೇಶ ಕೇಂದ್ರಿತ ಚಿತ್ರಗಳು (ಪ್ರಾನ್ಸ್), ಐಸಿಎಫ್ಟಿ -ಯುನೆಸ್ಕೊ ಪ್ರಶಸ್ತಿ, ಗೌರವ, ಶ್ರದ್ಧಾಂಜಲಿ, ಪ್ರೀಮಿಯರ್ ಹೀಗೆ ವಿವಿಧ ವಿಭಾಗಗಳಲ್ಲಿ ಈ ಚಿತ್ರೋತ್ಸವದಲ್ಲಿ ಪ್ರದರ್ಶನಕಾಣುತ್ತಿವೆ.
ಈ ಬಾರಿ ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದಿಂದ ಮೂರು ಚಿತ್ರಗಳಿವೆ. ಪೃಥ್ವಿ ಕೊಣನೂರು ನಿರ್ಮಿಸಿ, ನಿರ್ದೇಶಿಸಿರುವ ಹದಿನೇಳೆಂಟು, ಬೆಸಗರಹಳ್ಳಿ ರಾಮಣ್ಣ ಅವರ ಕಥೆ ಆಧರಿಸಿ ಕೃಷ್ಣೇಗೌಡ ನಿರ್ಮಿಸಿ ನಿರ್ದೇಶಿಸಿರುವ ನಾನುಕುಸುಮ ಕಥಾ ಚಿತ್ರಗಳಾದರೆ, ಬಸ್ತಿ ದಿನೇಶ್ ಶೆಣೈಅವರ ಮಧ್ಯಂತರ ಕಥೇತರ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಚಿತ್ರ. ಹದಿನೇಳೆಂಟು ಚಿತ್ರ ಪನೋರಮಾ ವಿಭಾಗದಲ್ಲಿ ಉದ್ಘಾಟನಾ ಚಿತ್ರದ ಗೌರವಕ್ಕೆ ಪಾತ್ರವಾದರೆ, ನಾನುಕುಸುಮಾ ಚಿತ್ರವು ಐಸಿಎಫ್ಟಿ -ಯುನೆಸ್ಕೊ ಪ್ರಶಸ್ತಿಯ ಸ್ಪರ್ಧೆಗೆ ಆಯ್ಕೆಯಾಗಿದೆ.
ಡಿಜಿಟಲ್ ಲೋಕದ ನಡುವೆ, ಸೆಲುಲಾಯಿಡ್‌ನಲ್ಲಿ, ೧೬ ಎಂ.ಎಂ.ನಲ್ಲಿ ಚಿತ್ರಿಸಿರುವ ಚಿತ್ರ ಮಧ್ಯಂತರ.
ಹದಿನೇಳೆಂಟು ಚಿತ್ರತಂಡದ ಸಾಕಷ್ಟು ಮಂದಿ ಚಿತ್ರದ ಪ್ರದರ್ಶನದ ವೇಳೆ ಹಾಜರಿದ್ದರು. ನಾನುಕನಸು ಚಿತ್ರದ ನಿರ್ದೇಶಕ ನಿರ್ಮಾಪಕ ಕೃಷ್ಣೇಗೌಡ ಮತ್ತು ಶೀರ್ಷಿಕಾ ಪಾತ್ರ ನಿರ್ವಹಿಸಿರುವ ಗ್ರೀಷ್ಮ ಶ್ರೀಧರ್ ಪಾಲ್ಗೊಂಡಿದ್ದಾರೆ. ಕಡಿಮೆ ವೆಚ್ಚದ ಕಥಾಚಿತ್ರದ ವೆಚ್ಚಕ್ಕಿಂತ ಹೆಚ್ಚು ವ್ಯಯಿಸಿ ಮಧ್ಯಂತರ ವನ್ನು ೧೬ಎಂ.ಎಂ.ನಲ್ಲಿ ಚಿತ್ರಿಸಿರುವ ದಿನೇಶ್ ಶೆಣೈಯವರ ತಂಡದ ಸದಸ್ಯರಲ್ಲಿ ಹಲವರು ನಾಡದು ಪ್ರದರ್ಶನದ ವೇಳೆ ಬರಲಿದ್ದಾರೆ. ಕರ್ನಾಟಕದಿಂದ, ಪನೋರಮಾ ಆಯ್ಕೆಯ ಸದಸ್ಯರಾಗಿದ್ದ, ಈಗ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿರುವ ಅಶೋಕಕಶ್ಯಪ್, ಉಮೇಶ ನಾಯಕ್, ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ದೊಡ್ಡಣ್ಣ, ಸೇರಿದಂತೆ ಹಲವರು ಚಿತ್ರರಂಗದ ಮಂದಿ ಪಾಲ್ಗೊಂಡಿದ್ದಾರೆ.
ಎಂದಿನಂತೆ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಮಲಯಾಳ ಚಿತ್ರರಂಗದ ಮಂದಿ.
ಆರಂಭದ ವರ್ಷಗಳಲ್ಲಿ ಇದ್ದಂತೆ ಪ್ರತಿನಿಧಿಗಳು ಈಗ ಬರುತ್ತಿಲ್ಲ ಎನ್ನುವುದು ಇಲ್ಲಿ ಕೇಳಿ ಬರುತ್ತಿರುವ ಮಾತು. ಬಹುತೇಕ ರಾಜ್ಯಗಳಲ್ಲಿ ಅಲ್ಲಿನವೇ ಚಿತ್ರೋತ್ಸವಗಳಿವೆ. ಅದಕ್ಕಿಂತಲೂ ಹೆಚ್ಚಾಗಿ, ಇಲ್ಲಿನ ಕಾರ್ಯಕ್ರಮಗಳು, ತಜ್ಞರ ಜೊತೆ ಮಾತುಕತೆಯೇ ಮೊದಲಾದವುಗಳಲ್ಲಿ ಹಿಂದಿ ಚಿತ್ರರಂಗದ ಮಂದಿಗೆ ಆದ್ಯತೆ. ಕನ್ನಡದ ಮಂದಿಗೆ ಆಹ್ವಾನ ಅಪರೂಪ. ದೇಶವಿದೇಶಗಳಲ್ಲಿ ಸಂಚಲನ ಮೂಡಿಸುತ್ತಿರುವ ಕನ್ನಡ ಚಿತ್ರ ರಂಗದ ಯಾರನ್ನೂ ಯಾವುದೇ ರೀತಿಯಲ್ಲೂ ತೊಡಗಿಸಿಕೊಂಡಿರಲಿಲ್ಲ. ನಿನ್ನೆ ಅಚಾನಕ್ಕಾಗಿ ರಿಷಭ್ ಶೆಟ್ಟಿ ಅವರೊಂದಿಗೆ ಮಾತುಕತೆ ನಿಗದಿ ಮಾಡಿದ್ದು ಎಲ್ಲರ ಹುಬ್ಬೇರಸಿದ್ದಂತೂ ಹೌದು.
ಸಾಂಸ್ಕೃತಿಕ ವೈವಿಧ್ಯತೆಯ ಪ್ರಾತಿನಿಧ್ಯ ಮತ್ತು ಹೊಸ ಮಾರುಕಟ್ಟೆ ಗುರುತಿಸುವಿಕೆ ಈ ವಿಷಯದ ಕುರಿತಂತೆ ಅವರ ಜೊತೆ ಮಾತುಕತೆ. ಕಾಂತಾರ ಚಿತ್ರದ ಹಿನ್ನೆಲೆಯಲ್ಲಿ ಈ ವಿಷಯ ಆರಿಸಿರಬೇಕು. ಕೊನೆಯ ಕ್ಷಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿಂದೆ ಇದ್ದ ಕಾರ್ಯಕ್ರಮವನ್ನು ವೇಳಾಪಟ್ಟಿಯಲ್ಲಿ ಬದಲಾಯಿಸಿಲ್ಲ, ಆಪ್ ನಲ್ಲಿ ಮಾತ ್ರಆಗಿದೆ ಎನ್ನುವ ಆರೋಪವೂ ಇತ್ತು.
ಈ ವಾರ ತೆರೆ ಕಾಣುತ್ತಿರುವ ರೇಮೋ ಚಿತ್ರದ ಪ್ರೀಮಿಯರ್ ಮತ್ತು ವಿಶೇಷ ಪ್ರದರ್ಶನ ಇತ್ತು. ಅದನ್ನು ತೆಲುಗು ಚಿತ್ರಎಂದು ಪಿಐಬಿ ಪ್ರಕಟಣೆಯಲ್ಲಿ ಈ ಹಿಂದೆ ಹೇಳಿತ್ತು.
ಚಿತ್ರಗಳಆಯ್ಕೆ, ಕಾರ್ಯಕ್ರಮಗಳು ಎಲ್ಲವೂ ಜನಪ್ರಿಯ ಚಿತ್ರಗಳನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿದೆ ಎನ್ನುವುದನ್ನು ಯಾರಾದರೂ ಹೇಳಬಹುದು. ಅಜಯ್ ದೇವಗನ್ ಅವರ ದೃಶ್ಯಂ ೨ ಚಿತ್ರದ ಪ್ರೀಮಿಯರ್ ಈ ಚಿತ್ರೋತ್ಸವದಲ್ಲಿದೆ ಎಂದರೆ, ಹಿಂದಿ ಚಿತ್ರರಂಗದ ಓಲೈಕೆ ಮತ್ತು ಚಿತ್ರೋತ್ಸವದಲ್ಲಿ ಚಿತ್ರಗಳ ಆಯ್ಕೆಯ ಕುರಿತಂತೆ ಯಾರಾದರೂ ತಿಳಿಯಬಹುದು. ದೃಶ್ಯಂ ೨ ಮಲಯಾಳ ಚಿತ್ರದ ಹಿಂದಿ ಅವತರಣಿಕೆ, ನೊಣಂಪ್ರತಿ ಎನ್ನಲಾದಚಿತ್ರ. ಕನ್ನಡದಲ್ಲೂ ಅದು ರಿಮೇಕ್ ಆಗಿ ತೆರೆಕಂಡಿತ್ತು. ರಿಮೇಕ್ ಚಿತ್ರದ ಪ್ರೀಮಿಯರ್, ಅದರ ನಟನಿಗೆ ಉದ್ಘಾಟನೆಯ ಸಂದರ್ಭದಲ್ಲಿ ಗೌರವ, ಚಿತ್ರೋತ್ಸವದಲ್ಲಿ ಅಪರೂಪದ ಘಟನೆ!
ಏಷ್ಯಾದ ಅತ್ಯಂತ ಹಿರಿಯ ಚಿತ್ರೋತ್ಸವವಿದು. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಚಿತ್ರೋತ್ಸವ. ಮಾನ್ಯತೆ ನೀಡುವ ಸಂಸ್ಥೆಯ ಸದಸ್ಯತ್ವ ಭಾರತೀಯ ಚಲನಚಿತ್ರಒಕ್ಕೂಟ ಮತ್ತು ಚಲನಚಿತ್ರಅಭಿವೃದ್ಧಿ ನಿಗಮಗಳಿಗಿವೆ. ಭಾರತೀಯ ಚಲನಚಿತ್ರ ಒಕ್ಕೂಟದ(ಫಿಲಂ ಫೆಡರೇಶನ್‌ಆಫ್ ಇಂಡಿಯಾ- ಎಫ್‌ಎಫ್‌ಐ) ಅಧ್ಯಕ್ಷರು ಉದ್ಘಾಟನಾ ವೇದಿಕೆಯಲ್ಲಿರುವುದು ವಾಡಿಕೆ. ಈ ಬಾರಿ ಅವಕಾಶ ಇರಲಿಲ್ಲ. ಅಷ್ಟೇ ಅಲ್ಲ, ಎಫ್‌ಎಫ್‌ಐ ಸದಸ್ಯರಿಗೆಆಹ್ವಾನವೂ ಸರಿಯಾಗಿ ಇರಲಿಲ್ಲ. ಈ ಕುರಿತಂತೆ ಚರ್ಚಿಸುತ್ತಾ, ಪರ್ಯಾಯ ಚಿತ್ರೋತ್ಸವದ ವರೆಗೆ ಮಾತುಗಳಿದ್ದವು.
ಚಲನಚಿತ್ರ ಸಮಾಜಗಳ ಒಕ್ಕೂಟ, ಚಿತ್ರೋತ್ಸವದ ದಿನಗಳಲ್ಲಿ ಪ್ರತಿದಿನ ಮುಕ್ತ ವೇದಿಕೆಯ ಮೂಲಕ ಚಿತ್ರರಂಗ, ಚಿತ್ರೋತ್ಸವಗಳಿಗೆ ಸಂಬಂಧಿಸಿದಂತೆ ಚರ್ಚಿಸುವುದು ವಾಡಿಕೆ. ಈ ಬಾರಿ ಅದಕ್ಕೆ ತಿಲಾಂಜಲಿ ಅರ್ಪಿಸಿದಂತಿದೆ! ಮೂಲಗಳ ಪ್ರಕಾರ, ಅದಕ್ಕೆ ಜಾಗದ ಕೊರತೆ ಎನ್ನುವ ಕಾರಣ ಹೇಳಲಾಗಿದೆ.
ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಮೂಲ ಉದ್ದೇಶಗಳು ಮರೆಯಾಗುತ್ತಾ, ಕೇವಲ ವ್ಯವಹಾರ, ಮಾರುಕಟ್ಟೆ, ಗ್ಲಾಮರ್, ಬಾಲಿವುಡ್‌ಎಂದು ಕರೆಸಿಕೊಳ್ಳುತ್ತಿರುವ ಹಿಂದಿ ಚಿತ್ರರಂಗದತ್ತ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ಹೊರಳುತ್ತಿರುವುದನ್ನು ಈಗ ಡಾಳಾಗಿ ಕಾಣಬಹುದು.





