ಶ್ರಾವಣ ಬಂತು ಎಂದರೆ ಹಬ್ಬಗಳ ಸಾಲು. ಹೊಸ ಹೂಗಳ ಪರಿಮಳ, ಸಾಂಪ್ರದಾಯಿಕ ವಸ್ತ್ರಗಳ ಆಡಂಬರ . ಹೌದು, ಮನೆಯಲ್ಲಿ ಹಿರಿಯರೊಬ್ಬರಿದ್ದರೆ ಸಾಕು ನಮ್ಮ ಎಲ್ಲಾ ಹಬ್ಬ ಹುಣ್ಣಿಮೆಯ ವಿವರಣೆಯನ್ನು ಅವರು ಕೊಡುತ್ತಾರೆ . ಅಷ್ಟೇ ಅಲ್ಲದೆ ಸಾಂಪ್ರದಾಯಿಕವಾಗಿ ಹೇಗೆ ತಯಾರಾಗುವುದು ಎಂದೂ ನಮಗೆ ಹೇಳಿಕೊಡುತ್ತಾರೆ.
ಈಗಿನ ಯುವಜನತೆ ಗೂಗಲ್‌ನ ಮೊರೆ ಹೋಗುವ ಬದಲು ನಿಮ್ಮ ಮನೆಯಲ್ಲಿ ಇರುವ ಹಿರಿಯರ ಬಳಿ ಹೋಗಿ ಕುಳಿತು ಮಾತನಾಡಿ. ಕಾರಣ ನಿಮ್ಮ ಮನೆಯ ಪರಂಪರೆ ಹಾಗೂ ಸಂಪ್ರದಾಯ, ಶಾಸ್ತ್ರ ನಿಮಗೆ ತಿಳಿಯುತ್ತದೆ. ಅಷ್ಟೇ ಅಲ್ಲದೆ ಹಿರಿಯರಿಗೆ ಬರುವ ಎಷ್ಟೋ ಸಾಂಪ್ರದಾಯಿಕ ಹಾಡುಗಳು ನಿಮ್ಮ ಗೂಗಲ್‌ಗೆ ಬರುವುದಿಲ್ಲ. ಹಾಗಾಗಿ ಆ ಸಾಂಪ್ರದಾಯಿಕ ಹಾಡುಗಳು ಹಾಗೂ ಆಚರಣೆಗಳನ್ನು ನೀವು ಅವರ ಬಾಯಿಂದಲೇ ಕೇಳಿ ತಿಳಿಯಬೇಕು.
ಹಬ್ಬಗಳೆಂದರೆ ಪ್ರತಿಯೊಬ್ಬರ ಮನೆಯಲ್ಲೂ ಕೇಳಿ ಅವರದೇ ಆದ ಕೆಲವು ಆಚರಣೆಗಳು ಹಾಗೂ ಸಂಪ್ರದಾಯಗಳು ಇರುತ್ತವೆ. ಅವುಗಳನ್ನು ನೀವು ಅವರಿಂದ ತಿಳಿದು ಒಂದು ಕಡೆ ಬರೆದಿಟ್ಟುಕೊಳ್ಳಿ. ಅಷ್ಟೇ ಅಲ್ಲದೆ ಮದುವೆ ಹಾಗೂ ಕೆಲವು ಹಬ್ಬಗಳಿಗೆ ಅವರದೇ ಆದಂತಹ ಸಂಪ್ರದಾಯದ ರಂಗೋಲಿಗಳು ಸಹಇರುತ್ತದೆ ನೀವು ಅವನ್ನೂ ಅವರ ಬಳಿ ಕೇಳಿ ತಿಳಿದುಕೊಳ್ಳಬೇಕು.
ಮನೆಯಲ್ಲಿ ಹಿರಿಯರೊಬ್ಬರು ಇದ್ದರೆ ಅವರೊಂದು ವಿಕಿಪೀಡಿಯದ ಹಾಗೆ. ಅವರಿಗೆ ಎಲ್ಲ ವಿಷಯಗಳೂ ಸಾಕಷ್ಟು ಅವರ ಅನುಭವದಿಂದ ತಿಳಿದಿರುತ್ತದೆ. ಯಾವ ಅಂಗಡಿಯಲ್ಲಿ ಸಾಂಪ್ರದಾಯಿಕ ವಸ್ತುಗಳು ಸಿಗುತ್ತವೆ. ಎಲ್ಲಿ ನಿಮಗೆ ಉತ್ತಮವಾದ ರೇಷ್ಮೆ ಸಿಗುತ್ತದೆ ಎಂಬ ಮಾಹಿತಿ ತಿಳಿಯಲಿದೆ. ಅಷ್ಟೇ ಅಲ್ಲ ಸಾಂಪ್ರದಾಯಿಕ ಅಡುಗೆಯ ಭಂಡಾರ ನಮ್ಮ ಹಿರಿಯರು. ಅವರು ಹೇಳಿಕೊಡುವ ಕೆಲವು ಅಡುಗೆಯ ರುಚಿಯೇ ಬೇರೆ ಹಾಗಾಗಿ ಹೇಗಿದ್ದರೂ ಹಬ್ಬದ ಸಾಲುಗಳು ಆರಂಭವಾಗುತ್ತಿವೆ. ದಯಮಾಡಿ ಮನೆಯಲ್ಲಿನ ಹಿರಿಯರ ಬಳಿ ಕುಳಿತು ಅವರಲ್ಲಿ ಇರುವಂತಹ ಜ್ಞಾನವನ್ನು ಪಡೆದುಕೊಳ್ಳಿ.
ದೈಹಿಕವಾಗಿ ಅವರು ಬಳಲಿದ್ದರೂ ಮಾನಸಿಕವಾಗಿ ಅವರು ಸದೃಢರು. ಹಾಗಾಗಿ ಅವರ ಕೈಯಲ್ಲಿ ಕೆಲವು ಅಡುಗೆಗಳನ್ನು ಮಾಡಿಸಿ ಹಾಗೂ ಅವರ ಕೈ ರುಚಿಯನ್ನು ನೀವು ಸವಿಯಿರಿ, ಅಜ್ಜಿ ತಾತನ ಕೈ ರುಚಿ ಸವಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಕೆಲವರಿಗೆ ಮಾತ್ರ ಆ ಪುಣ್ಯ ಲಭ್ಯ. ನಿಮಗೆ ಆ ಅವಕಾಶವಿದ್ದರೆ ಹೇಗಿದ್ದರೂ ಹಬ್ಬದಲ್ಲಿ ರಜಾ ಇರುತ್ತದೆ, ಹಾಗಾಗಿ ಅವರ ಕೈ ರುಚಿ ಹಾಗೂ ಅವರ ರೀತಿಯಲ್ಲಿ ಪೂಜೆ, ಪುನಸ್ಕಾರಗಳನ್ನು ಮಾಡುವ ಬಗ್ಗೆ ತಿಳಿದು ಒಂದು ಬದಲಾವಣೆಯನ್ನು ನೀವು ಖಂಡಿತಾ ಮಾಡಿಕೊಳ್ಳಬಹುದು.
ಹೂ ಕಟ್ಟುವುದು, ಜಡೆ ಹಾಕುವುದು, ಪೂಜೆಗೆ ಅಣಿ ಮಾಡುವುದು, ಅಷ್ಟೇ ಅಲ್ಲ ಸಂಪ್ರದಾಯವಾಗಿ ಅವರು ಸೀರೆ , ಪಂಚೆಗಳನ್ನು ಉಡುವುದನ್ನು ಅವರಿಂದ ಕಲಿತುಕೊಳ್ಳಬಹುದು . ತಾತನ ಜೊತೆ ಮೊಮ್ಮಕ್ಕಳೂ ಒಂದೇ ರೀತಿ ಕಚ್ಚೆಯನ್ನು ಹಾಕಿ ಫೋಟೋ ತೆಗೆದು ನಿಮ್ಮ ಸ್ಟೇಟಸ್‌ಗೆ ಹಾಕಿಕೊಳ್ಳಿ. ಅಷ್ಟೇ ಅಲ್ಲ ಅಜ್ಜಿಯ ಹಾಗೆ ನೀವೂ ತಯಾರಾದರೆ ಅವರ ಮುಖದಲ್ಲಿ ಮೂಡುವ ನಗುವಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಾವು ಅವರಿಗಾಗಿ ಏನನ್ನು ಕೊಡಲೂ ಸಾಧ್ಯವಿಲ್ಲ.
ಕಾರಣ ಅವರಿಗೆ ಆಸೆ ಬಹಳ ಕಮ್ಮಿ. ಆದರೆ ಅವರ ಬಳಿ ನೀವು ಸಮಯ ಕಳೆದಾಗ ಅವರ ಮುಖದಲ್ಲಿ ಮೂಡುವ ಮಂದಹಾಸಕ್ಕೆ ಎಣೆಯಿಲ್ಲ. ಮುಂದೆ ಬರುವ ಹಬ್ಬಗಳಲ್ಲಿ ಹಾಗೆ ನಡೆದು ಹಿರಿಯರ ಮುಖದಲ್ಲಿ ನಗು ತರುವ ಕೆಲಸವನ್ನು ನಾವು ನೀವೆಲ್ಲರೂ ಮಾಡೋಣ.
-ಸೌಮ್ಯ ಕೋಠಿ, ಮೈಸೂರು





