ಬಂಡೀಪುರ…ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಹಸಿರು ತಾಣ. ನೀಲಗಿರಿ ಜೀವವೈವಿಧ್ಯ ತಾಣದ ಹೃದಯ ಭಾಗವಾಗಿರುವ ಬಂಡೀಪುರ ಮೈಸೂರು ಮಹಾರಾಜರು ೧೯೩೮ರಲ್ಲಿಯೇ ಗುರುತಿಸಿದ ವೇಣುಗೋಪಾಲಸ್ವಾಮಿ ವನ್ಯಜೀವಿ ತಾಣ. ೯೦ ಚದರ ಕಿ.ಮಿ. ಪ್ರದೇಶಕ್ಕೆ ಸೀಮಿತವಾಗಿದ್ದ ಈ ಪ್ರದೇಶ ಮಹಾರಾಜರ ಬೇಟೆಯ ತಾಣವೂ ಆಗಿತ್ತು. ಮೈಸೂರು ಅರಮನೆಯ ಅತಿಥಿಯಾಗಿ ಬರುವವರನ್ನು ಇಲ್ಲಿ ಬೇಟೆಗೆ ಕರೆತರಲಾಗುತ್ತಿತ್ತು. ಇದು ೩೫ ವರ್ಷ ಕಾಲದವರೆಗೂ ಮೈಸೂರು ರಾಜ್ಯದ ಭಾಗವಾಗಿ ಮಹಾರಾಜರ ಸುಪರ್ದಿಯಲ್ಲೇ ಇತ್ತು. ಆಗ ೧೦ ಹುಲಿಗಳು ಈ ಭಾಗದಲ್ಲಿದ್ದವು. ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಕಾನೂನಿನ ಬಲ ಕೊಟ್ಟವರು ಇಂದಿರಾಗಾಂಧಿ. ೧೯೭೨ರಲ್ಲಿ ಜಾರಿಗೊಳಿಸಿದ ವನ್ಯಜೀವಿ ಸಂರಕ್ಷಣಾ ಕಾಯಿದೆ ಮೊದಲ ಲ ದೊರೆತಿದ್ದು ಬಂಡೀಪುರಕ್ಕೆ. ದೇಶದಲ್ಲಿಯೇ ಸೀಮಿತವಾಗಿ ಹುಲಿ ಪ್ರದೇಶಗಳನ್ನು ಘೋಷಣೆ ಮಾಡಲಾಯಿತು. ಮೊದಲನೇ ಹೆಸರೇ ಬಂಡೀಪುರ. ಇಲ್ಲಿನ ದಟ್ಟಾರಣ್ಯ, ಪಕ್ಷಿ, ಪ್ರಾಣಿಗಳ ೨೦೦ಕ್ಕೂ ಹೆಚ್ಚು ಜಾತಿಯ ಮರಗಳು ಈ ಅರಣ್ಯದ ಮಹತ್ವವನ್ನು ಸಾರಿದ್ದವು. ಬಂಡೀಪುರ ರಾಷ್ಟ್ರೀಯ ಉದ್ಯಾನವಾಗಿ ಹುಲಿ ಯೋಜನೆ ಸ್ವರೂಪ ಪಡೆದಾಗ ೬೦೦ ಚದರ ಕಿ.ಮಿ.ಗೆ ವಿಸ್ತಾರಗೊಂಡಿತು. ಸಂರಕ್ಷಣೆಗೆ ಇನ್ನಿಲ್ಲದ ಒತ್ತು ದೊರಕಿತು. ಅರಣ್ಯ ಇಲಾಖೆ ಅಕಾರಿಗಳಾಗಿ ಬಂದ ಹಲವರು ಕೇರಳ ಹಾಗೂ ತಮಿಳುನಾಡು ರಾಜ್ಯದ ಗಡಿಗೆ ಅಂಟಿಕೊಂಡಿದ್ದ ಈ ಅರಣ್ಯ ಪ್ರದೇಶದಲ್ಲಿ ಆಗುತ್ತಿದ್ದ ಪ್ರಾಣಿ ಬೇಟೆ, ಮರಗಳ ಹನನದಂತ ಅಕ್ರಮಗಳಿಗೆ ತಡೆಯೊಡ್ಡಲು ಪ್ರಯತ್ನಿಸುತ್ತಾ ಬಂದರು. ಆಗಾಗ ಬೀಳುತ್ತಿದ್ದ ಕಾಡಿನ ಬೆಂಕಿಯಿಂದ ಆಗುತ್ತಿದ್ದ ತೊಂದರೆಗಳ ನಡುವೆಯೂ ಸಂರಕ್ಷಣೆಯ ಯಾನ ಯಶಸ್ವಿಯಾಗಿಯೇ ಮುಂದುವರೆಯಿತು. ಈಗ ಬಂಡೀಪುರ ೧೨೦೦ ಚದರ ಕಿ.ಮಿಗೆ ವಿಸ್ತಾರಗೊಂಡಿದೆ. ಅಂದರೆ ೫೦ ವರ್ಷದಲ್ಲಿ ಅರಣ್ಯ ಪ್ರದೇಶ ದ್ವಿಗುಣಗೊಂಡಿದೆ. ೧೫೬ ಹಳ್ಳಿಗಳು, ೧.೨೫ ಲಕ್ಷ ಜನಸಂಖ್ಯೆ ಅರಣ್ಯದ ಸುತ್ತಲೂ ನೆಲೆಸಿದೆ. ಬಂಡೀಪುರದ ಎಲ್ಲೆ ಈಶಾನ್ಯದಲ್ಲಿ ಕಬಿನಿ ನದಿ, ಕೇಂದ್ರದಲ್ಲಿ ನುಗು ನದಿ, ದಕ್ಷಿಣದಲ್ಲಿ ಮೋಯಾರ್ ನದಿ, ಇನ್ನೊಂದು ಭಾಗದಲ್ಲಿ ಹಿರೇಹಳ್ಳವಾಗಿರುವ ಗುಂಡ್ಲು ನದಿಯವರೆಗೂ ವಿಸ್ತಾರಗೊಂಡಿದೆ. ಹುಲಿಗಳ ಸಂಖ್ಯೆಯೇ ೧೫೦ ದಾಟಿದೆ. ಮರಿಗಳ ಸಂಖ್ಯೆ ಸೇರಿಸಿದರೆ ಇದು ೧೭೦ನ್ನು ತಲುಪುತ್ತದೆ. ಅಂದರೆ ೬ ಚದರ ಕಿ.ಮಿಗೆ ಒಂದು ಹುಲಿ ಆವಾಸಸ್ಥಾನವಿದೆ. ಹುಲಿ ಕಾಡು ಯಥೇಚ್ಛವಾಗಿ ಬೆಳೆದಿದೆ.
ನಿರಂತರವಾಗಿ ಸಂರಕ್ಷಣೆ ಕೈಗೊಂಡ ಪ್ರತಿಲವಾಗಿ ವನ್ಯಜೀವಿಗಳು, ಸಸ್ಯ ಸಂಪತ್ತು ಸಮೃದ್ದವಾಗಿಯೇ ಬೆಳೆದಿದೆ. ಇದು ಒಂದು ಕಡೆ ಸಂತಸದಾಯಕ ವಿಚಾರವೇ. ಆದರೆ ಆತಂಕದ ಜತೆಗೆ ಈಗಲೇ ಮುನ್ನೆಚ್ಚರಿಕೆ ವಹಿಸುವ ಹಲವು ಸಂಗತಿಗಳೂ ಇಲ್ಲಿವೆ. ಬಂಡೀಪುರವನ್ನು ದೇಶದ ಮೊದಲೇ ಹುಲಿ ಧಾಮವಾಗಿ ಘೋಷಿಸಿ ಸಂರಕ್ಷಿಸಿದರೂ ನಿರ್ವಹಣೆ ಎನ್ನುವುದು ವೈಜ್ಞಾನಿಕ ನೆಲೆಯಲ್ಲಿ ನಡೆದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಅರಣ್ಯದ ಹೃದಯ ಭಾಗದಲ್ಲಿಯೇ ಬೆಳೆದಿರುವ ಲಂಟಾನದ ಪ್ರಮಾಣವೇ ಶೇ.೬೦ರಷ್ಟಿದೆ. ಇದರಿಂದ ಅರಣ್ಯದಲ್ಲಿನ ಸಾಂಪ್ರದಾಯಿಕ ಮರಗಳಿಗೂ ಧಕ್ಕೆಯಾಗುತ್ತಿದೆ. ಇದನ್ನು ಪೂರ್ಣ ತೆರವು ಮಾಡಲು ಅರಣ್ಯ ಇಲಾಖೆಗೂ ಆಗುತ್ತಿಲ್ಲ. ನಾಲ್ಕೈದು ವರ್ಷದಿಂದ ನರೇಗಾ ಯೋಜನೆ ನೆರವು ಪಡೆದು ಲಂಟಾನ ನಿರ್ಮೂಲನೆ ಆರಂಭಿಸಿದರೂ ಅದಕ್ಕೆ ದೊಡ್ಡ ಮಟ್ಟದ ಅಭಿಯಾನವೇ ಆಗಬೇಕಾಗುತ್ತದೆ. ಹೃದಯಭಾಗದಲ್ಲಿ ಲಂಟಾನ ತೊಂದರೆಯಿಂದಲೇ ಹುಲಿಗಳು ಅರಣ್ಯದಂಚಿನ ಬರ್ ಪ್ರದೇಶಕ್ಕೆ ತಳ್ಳಲ್ಪಟ್ಟ ಸನ್ನಿವೇಶವೂ ನಿರ್ಮಾಣವಾಗಿದೆ. ಇದಕ್ಕಾಗಿ ಪ್ರತ್ಯೇಕ ಆವಾಸ ಸ್ಥಾನ ಪುನರ್ ಸ್ಥಾಪನೆ( ಹೆಬಿಟ್ಯಾಟ್ ರಿಸ್ಟೋರೇಷನ್)ಗೆ ಅರಣ್ಯ ಇಲಾಖೆ ಒತ್ತು ನೀಡಲೇಬೇಕು. ಇದು ಈ ಐದು ದಶಕದಲ್ಲಿ ಅರಣ್ಯ ಇಲಾಖೆ ರೂಪಿಸುತ್ತಾ ಬಂದಿರುವ ವಾರ್ಷಿಕ ಕ್ರಿಯಾ ಯೋಜನೆ ಹಾಗೂ ಖರ್ಚಿನ ಲೆಕ್ಕದಂತೆ ಆಗುವುದಲ್ಲ. ಅರಣ್ಯದಂಚಿನ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಅರಣ್ಯ ಉತ್ಪನ್ನಗಳ ಪುನರ್ ಬಳಕೆಗೆ ಕೌಶಲ್ಯದ ತರಬೇತಿಗಳನ್ನು ನೀಡಬೇಕು. ಲಂಟಾನಾವನ್ನು ಪುನರ್ ಬಳಸುವ ಹಲವು ಯೋಜನೆಗಳೂ ಯಶಸ್ವಿಯಾಗಿವೆ. ಜೀವವೈವಿಧ್ಯತೆ ಉಳಿಸುವ ನಿಟ್ಟಿನಲ್ಲಿ ತರಬೇತಿಯನ್ನು ಕೊಡಬೇಕು. ಲಂಟಾನವನ್ನು ಬಹುತೇಕ ತಗ್ಗಿಸಿ ಹೃದಯ ಭಾಗದಲ್ಲಿ ಹುಲ್ಲು ಗಾವಲುಗಳನ್ನು ಮರು ಸ್ಥಾಪಿಸುವ ತುರ್ತು ಇದೆ. ಇದೆಲ್ಲಕ್ಕೂ ಅರಣ್ಯ ಇಲಾಖೆ ಜತೆಗೆ ಸ್ಥಳೀಯರ ಸಹಯೋಗ ಬೇಕಾಗುತ್ತದೆ. ಇದಕ್ಕೆ ಬಂಡೀಪುರ ಹುಲಿ ಯೋಜನೆಯಿಂದಲೇ ಎರಡು ದಶಕದ ಹಿಂದೆ ಆರಂಭಿಸಿದ ನಮ್ಮ ಸಂಘವೆಂಬ ವಿಭಿನ್ನ ಪರಿಕಲ್ಪನೆ ಹಾಗೂ ಯಶಸ್ವಿ ಮಾದರಿ ನಮ್ಮ ಮುಂದೆ ಇದೆ. ಕಾಡಿನ ಮೇಲೆ ಆಗುತ್ತಿದ್ದ ಒತ್ತಡವನ್ನು ತಗ್ಗಿಸಲೆಂದೇ ೨೦೦೩ರಲ್ಲಿ ಆಗ ಡಿಸಿಎಫ್ ಆಗಿದ್ದ ಡಿ.ಯತೀಶ್ ಕುಮಾರ್ ಅವರು ಪರಿಸರ ತಜ್ಞರಾದ ಕೃಪಾಕರ ಸೇನಾನಿ ಹಾಗೂ ಇತರರ ಸಹಕಾರ, ಸ್ಥಳೀಯಾಡಳಿತಗಳ ಸಹಭಾಗಿತ್ವದೊಂದಿಗೆ ಯೋಜನೆ ಜಾರಿಗೊಳಿಸಿದರು. ಗುಂಡ್ಲುಪೇಟೆ, ಸರಗೂರು, ಎಚ್‌ಡಿಕೋಟೆ ಹಾಗೂ ನಂಜನಗೂಡು ತಾಲ್ಲೂಕಿನ ೨೫೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅನಿಲ ಸಂಪರ್ಕವನ್ನು ಗ್ರಾಮಸ್ಥರಿಗೆ ನೀಡಲಾಯಿತು. ಈಗ ಸಂಪರ್ಕ ಸಂಖ್ಯೆ ೪೦೦೦೦ ದಾಟಿದೆ. ಅಂದರೆ ಅಷ್ಟು ಕುಟುಂಬಗಳು ಕಟ್ಟಿಗೆಗಾಗಿ ಅರಣ್ಯದ ಮೇಲೆ ಪರೋಕ್ಷವಾಗಿ ಹಾಕುತ್ತಿದ್ದ ಒತ್ತಡ ತಗ್ಗಿದೆ. ಅರಣ್ಯ ಸಂರಕ್ಷಣೆಗೆ ಇದಕ್ಕಿಂತ ಮಾದರಿ ಬೇಕಿಲ್ಲ.
ಅರಣ್ಯ ಇಲಾಖೆಯೊಂದಿಗೆ ಎರಡು ದಶಕದಿಂದ ಒಡನಾಟ ಇಟ್ಟುಕೊಂಡು ಕಾನೂನು, ತಂತ್ರಜ್ಞಾನದ ಜತೆಗೆ ಆವಾಸಸ್ಥಾನ ಪುನರುತ್ಥಾನಕ್ಕೆ ಸಲಹೆ ನೀಡುತ್ತಲೇ ಬಂದಿರುವ ಮೈಸೂರಿನ ಕೆ.ಎಸ್.ಸುಧೀರ್, ಬಂಡೀಪುರದ ಮುಂದಿನ ಹಾದಿ ಹೇಗಿರಬೇಕು ಎಂದು ಪಟ್ಟಿ ಮಾಡುತ್ತಾರೆ. ಅರಣ್ಯ ರಕ್ಷಣೆ ಎಂದರೆ ಇಲಾಖೆಗೆ ಇರುವ ಜವಾಬ್ದಾರಿ ಜತೆಗೆ ಸ್ಥಳೀಯರ ಪಾತ್ರವೂ ಮುಖ್ಯ. ಇದಕ್ಕಾಗಿ ಅರಣ್ಯದಂಚಿನ ಗ್ರಾಮಸ್ಥರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಉದ್ಯೋಗ ಹಾಗೂ ಆದಾಯದ ಮೂಲಗಳನ್ನು ನೀಡಲು ಇದು ಸಕಾಲ. ಇಂತಹ ಮಾದರಿಗಳು ಮುಂದಿನ ೫೦ ವರ್ಷಕ್ಕೆ ಅರಣ್ಯ, ವನ್ಯಜೀವಿ ಹಾಗೂ ಸಸ್ಯ ಸಂಪತ್ತಿನ ಪುನರುತ್ಥಾನಕ್ಕೆ ದಾರಿಯಾಗುತ್ತದೆ ಎಂಬುದು ಸುಧೀರ್ ಅವರ ಸಲಹೆಯ ಸಾರಾಂಶ.
ಅರಣ್ಯ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದರು ಅವುಗಳು ಸಮರ್ಪಕವಾಗಿ ಜಾರಿಗೊಂಡಿಲ್ಲ. ಅದರಲ್ಲಿ ಕಾರಿಡಾರ್‌ಗಳ ನಿರ್ಮಾಣವೂ ಮುಖ್ಯ. ಆನೆಗಳ ಸಂಘರ್ಷ ತಪ್ಪಿಸಲು ಕಾರಿಡಾರ್‌ಗಳನ್ನು ರೂಪಿಸಿದ್ದರೂ ಅಲ್ಲಲ್ಲಿ ಅಡಚಣೆಯಿದೆ. ಆದರೆ ತಡೆಗೋಡೆ, ಕಂದಕ, ಸೋಲಾರ್ ಬೇಲಿ, ರೈಲು ಕಂಬಿ ಸಹಿತ ಹಲವು ರೀತಿಯ ತಡೆ ಪ್ರಯತ್ನಗಳಿಂದ ಆನೆಗಳು ಹೊರ ಬರುವ ಪ್ರಮಾಣ ತಗ್ಗಿದಂತೆ ಕಾಣುತ್ತದೆ. ಈಗಲೂ ಅರಣ್ಯ ಇಲಾಖೆಗೆ ಹುಲಿ ಸಂಘರ್ಷದ ತಲೆನೋವು ಇರುವುದು ರ್ಬ ವಲಯದಲ್ಲಿಯೇ. ಬಂಡೀಪುರ ವ್ಯಾಪ್ತಿಯ ೧೦೦ಕ್ಕೂ ಹುಲಿಗಳಿಗೆ ಈ ವಲಯವೇ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಅವುಗಳಿಗೆ ಗ್ರಾಮದಂಚಿನಲ್ಲಿ ಆಹಾರ ಸುಲಭವಾಗಿ ಸಿಗುವುದೂ ಮುಖ್ಯ ಕಾರಣ. ಹುಲಿಗಳಿಗೂ ಇರುವ ಇಂತದೇ ಕಾರಿಡಾರ್‌ಗಳು ಹತ್ತು ಹಲವು ಕಾರಣದಿಂದ ತಡೆಯಾಗಿವೆ. ಇವುಗಳನ್ನು ಪುನರ್ಸ್ಥಾಪಿಸಲೇಬೇಕು. ಏಕೆಂದರೆ ಸಂಘರ್ಷದ ಮೂಲ ಇರುವುದು ಅರಣ್ಯ ನಿರ್ವಹಣಾ ಯೋಜನೆ ರೂಪಿಸುವ ಹಾಗೂ ಜಾರಿಗೊಳಿಸುವಲ್ಲಿ ಆಗಿರುವ ಲೋಪದಲ್ಲಿ. ಅರಣ್ಯ ಇಲಾಖೆಯೂ ಪ್ರತಿ ವರ್ಷವೂ ಕೆರೆ, ರಸ್ತೆ ಅಭಿವೃದ್ದಿಯನ್ನು ಸಂಪೂರ್ಣ ನಿಲ್ಲಿಸಿ ಪ್ರಾಕೃತಿಕವಾಗಿಯೇ ಕಾಡು ಉಳಿದು ಅಳಿಯಲು ಬಿಡುವುದು ಸೂಕ್ತ. ಇದನ್ನು ಈಗಲೇ ಮಾಡದೇ ಇದ್ದರೆ ಸಂರಕ್ಷಣಾ ಕ್ರಮದಿಂದ ಮುಂದಿನ ದಶಕದಲ್ಲಿ ಹುಲಿಗಳ ಸಂಖ್ಯೆ ದುಪ್ಪಟ್ಟುಗೊಳ್ಳಲೂ ಬಹುದು. ಹುಲಿಗಳ ಆವಾಸಸ್ಥಾನ ೨ರಿಂದ ೩ ಚದರ ಕಿ.ಮಿ.ಗೆ ಕುಸಿದರೆ ಉತ್ತರ ಭಾರತದ ಹುಲಿ ಯೋಜನಾ ಪ್ರದೇಶದಲ್ಲಿ ಆಗಿರುವ ಸಂಘರ್ಷದ ಇನ್ನೊಂದು ಮುಖವೂ ಅನಾವರಣಗೊಳ್ಳಬಹುದು.
ಇದನ್ನು ಅರಣ್ಯ ಇಲಾಖೆ ಹಿರಿಯ ಅಕಾರಿಯಾಗಿರುವ ಮನೋಜ್ ಕುಮಾರ್ ಅವರೂ ಪುಷ್ಟೀಕರಿಸುತ್ತಾರೆ. ಅರಣ್ಯ ಇಲಾಖೆಯಲ್ಲಿ ಹಿಂದೆಲ್ಲಾ ಕೆಲಸ ಮಾಡಿದ ಎಷ್ಟೋ ಅಕಾರಿಗಳು ಹುಲಿಯನ್ನೇ ನೋಡಿಲ್ಲ. ಅವರು ಹಾಕಿದ ಅಡಿಪಾಯದಿಂದ ಸಂರಕ್ಷಣೆಯಂತೂ ಆಗಿದೆ. ಕಾಡಿನ ಬೆಂಕಿಯ ಸಮಸ್ಯೆ ಬಿಟ್ಟರೆ ಇಲಾಖೆಗೆ ಹಿಂದಿನಷ್ಟು ಸಮಸ್ಯೆಯಿಲ್ಲ. ಪ್ರಾಣಿಗಳು ಅರಣ್ಯದಿಂದ ಹೊರ ಬಾರದಂತೆ ನೋಡಿಕೊಳ್ಳಲು ಆವಾಸಸ್ಥಾನ ಪುರ್ನ ಸ್ಥಾಪಿಸುವ ಯೋಜನೆಗಳು ಆಗಬೇಕು. ನಮ್ಮಲ್ಲಿ ಹಿಂದೆಲ್ಲಾ ಆಗಿರುವ ನಿಖರ ಸಂಶೋಧನಾ ದತ್ತಾಂಶಗಳ ಕೊರತೆಯೂ ಇದೆ. ಬಂಡೀಪುರ ೫೦ ವರ್ಷ ತುಂಬುತ್ತಿರುವಾಗ ಇಂಥ ಚಟುವಟಿಕೆಗಳಿಗೆ ಒತ್ತು ನೀಡುವುದು ಸೂಕ್ತ ಎಂದು ಮನೋಜ್ ನೀಡುವ ಸಲಹೆ ಅರಣ್ಯ ಸಂರಕ್ಷಣೆಯ ಮುಂದಿನ ಹಾದಿಯನ್ನು ತೋರಿಸುತ್ತದೆ.
ನಾಲ್ಕು ವರ್ಷದ ಹಿಂದೆ ಭೋಪಾಲ್‌ನಲ್ಲಿರುವ ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ ನಡೆಸಿದ್ದ ಸಮೀಕ್ಷೆಯಂತೆ ಬಂಡೀಪುರದ ಒಟ್ಟು ಆರ್ಥಿಕ ವೌಲ್ಯ ೬೪೦೫ ಕೋಟಿ ರೂ. ಅಂದರೆ ಇದು ಬರೀ ವನ್ಯಜೀವಿ, ವನ್ಯಸಂಪತ್ತಿನ ಪ್ರಮಾಣವಲ್ಲ. ಅರಣ್ಯದಿಂದ ನೇರವಾಗಿ ಪ್ರಕೃತಿ ಮೇಲೆ ಆಗುವ ಪರಿಣಾಮದ ಲೆಕ್ಕವಿದು. ಇದು ಅರಣ್ಯದಿಂದ ಆಗುವ ಮಳೆ, ಅದರಿಂದ ನೀರಾವರಿ, ಪರಿಸರದ ಮೇಲೆ ಕಾರ್ಬನ್ ಪ್ರಮಾಣ ತಗ್ಗಿ ಆಗುವ ಪರಿಣಾಮವೂ ಸೇರಿದೆ. ಬಂಡೀಪುರ ಅರಣ್ಯದ ಮೇಲೆ ಸರ್ಕಾರ ಹೂಡುವ ಪ್ರಮಾಣದ ಶೇ.೭೦೦ರಷ್ಟು ಬರುತ್ತಿರುವ ಆದಾಯವಿದು ಎನ್ನುವುದನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಕಾರ ವರದಿಯಲ್ಲಿ ಉಲ್ಲೇಖಿಸಿತ್ತು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಹುಲಿ ಯೋಜನೆಗಳಿಗೆ ಯಥೇಚ್ಛ ಅನುದಾನ ನೀಡಿದರು. ಇದೇ ಕಾರಣಕ್ಕೆ ಹುಲಿ ಯೋಜನೆಯ ಅರಣ್ಯಗಳಿಗೆ ಹೆಚ್ಚಿನ ಮಾನ್ಯತೆಯೂ ಬಂದಿತು. ಈಗ ಬಂಡೀಪುರದ ವಾರ್ಷಿಕ ಲೆಕ್ಕವೇ ೫೪ ಕೋಟಿ ರೂ.ಗಳನ್ನು ದಾಟಿದೆ. ಇದರಲ್ಲಿ ಸರ್ಕಾರದ ಅನುದಾನ, ವೇತನವಲ್ಲದೇ ಪರಿಸರ ಪ್ರವಾಸೋದ್ಯಮದಿಂದ ಬರುತ್ತಿರುವ ಆದಾಯವೂ ಸೇರಿದೆ. ಹುಲಿಗಳ ರಕ್ಷಣೆಯಿಂದ ಕೋಟಿಗಟ್ಟಲೇ ಆದಾಯವೇನೋ ಬರುತ್ತಿದೆ. ಬಂಡೀಪುರದ ಆರ್ಥಿಕ ವೌಲ್ಯವೂ ಏರಿದೆ. ಬಂಡೀಪುರಕ್ಕೆ ೫೦ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಮುಂದೆ ನಾವು ಹುಲಿಗಳಿಗೆ ಅರಣ್ಯ ಹೇಗೆ ಸಂರಕ್ಷಣೆ ಮಾಡಿಕೊಡುತ್ತವೆ ಎನ್ನುವುದನ್ನೂ ಹೇಳಬೇಕಲ್ಲವೇ?