Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಾರೆ ನೋಟ : ಸೂಚ್ಯಂಕಗಳ ಸಮಾವೇಶದಲ್ಲಿ ‘ಹಸಿವು’!

ವಾರೆ ನೋಟ

ಸೂಚ್ಯಂಕಗಳ ಸಮಾವೇಶದಲ್ಲಿ ‘ಹಸಿವು’!

ನಾರ್ತ್ ಬ್ಲಾಕ್ ನಲ್ಲಿರುವ ವಿತ್ತ ಸಚಿವರ ಕಚೇರಿಯಲ್ಲಿ ಸೂಚ್ಯಂಕಗಳ ಸಮಾವೇಶ ನಡೆದಿತ್ತು. ದೇಶದ ಆರ್ಥಿ‘ಕತೆ’ಯ ವೈಭವವನ್ನು ಬಿಂಬಿಸುವ ಹಲವು ಸೂಚ್ಯಂಕಗಳು ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ಬಂದಿದ್ದವು. ಈ ಎಲ್ಲಾ ಸೂಚ್ಯಂಕಗಳ ನಡುವೆ ಒಂದು ಸೂಚ್ಯಂಕ ಯಾಕೋ ಏನೋ ಸಂಕೋಚದಿಂದ ಮುದುಡಿಕೊಂಡು ಕುಳಿತಿತ್ತು. ವಿತ್ತ ಸಚಿವರು ಎಲ್ಲಾ ಸೂಚ್ಯಂಕಗಳನ್ನು ಔಪಚಾರಿಕವಾಗಿ ಆಹ್ವಾನಿಸಿ, ದೇಶದ ಆರ್ಥಿಕತೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಸೂಚಿಸಿದರು.
ಮೊದಲಿಗೆ ಕರೆನ್ಸಿ ಸೂಚ್ಯಂಕ ಅರ್ಥಾತ್ ರೂಪಾಯಿ ಎದ್ದು ನಿಂತಿತು.
‘ನಮಸ್ಕಾರ ಮೇಡಂ, ಇವತ್ತುಂದಿನಾ, ನಾನು ಡಾಲರ್ ವಿರುದ್ಧ ಹೋರಾಟ ಮಾಡಿ ಮಾಡಿ ಸೋತು ಹೋಗಿರಬಹುದು. ಹಾಗಂತ ನೀವು ಬೇಜಾರು ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಯಾಕಂದ್ರೆ, ನಾನು ಡಾಲರ್ ವಿರುದ್ಧ ಎಷ್ಟು ಬಾರಿ ಸೋತಿದ್ದರೂ, ನಾನೇನು ಕೆಳಮಟ್ಟಕ್ಕೆ ಇಳಿದಿಲ್ಲ. ನಿಜಾ, ನಮ್ಮ ದೇಶಕ್ಕೆ ಸೀಮಿತವಾಗಿ ಲೆಕ್ಕ ಹಾಕಿದರೆ, ನಾನು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿರಬಹುದು, ಆದರೆ, ಜಾಗತಿಕವಾಗಿ ನಾನು ಇನ್ನೂ ಸ್ಟ್ರಾಂಗಾಗೇ ಇದ್ದೀನಿ. ಮೇಡಂ, ಇವತ್ತುಂದಿನಾ ನಾನು ಹೆಮ್ಮೆಯಿಂದ ಎದೆ ತಟ್ಟಿ ಹೇಳ್ತೀನಿ.. ಡಾಲರ್ ವಿರುದ್ಧ, ಯೂರೋಪಿನ ಯೂರೋ, ಯುಕೆಯ ಸ್ಟರ್ಗಿಂಗ್ ಪೌಂಡ್, ಜಪಾನಿನ ಯೆನ್ ನಂತಹ ಘಟಾನುಗಟಿಗಳಿಗಿಂತಲೂ ಒಂದು ಕೈ ಮೇಲೇ ಇದ್ದೀನಿ. ಈ ಘಟಾನುಗಟಿಗಳು ಮೌಲ್ಯವು ನನ್ನ ಮೌಲ್ಯಕ್ಕಿಂತ ಹೆಚ್ಚು ಕುಸಿದು ಹೋಗಿದೆ. ಹಾಗಾಗಿ ಮೇಡಂ, ಇವತ್ತುಂದಿನಾ ನಾನು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿರಬಹುದು. ಆದರೆ, ನಾನು ಯೂರೋ, ಪೌಂಡ್, ಯೆನ್ ಗಿಂತಲೂ ಸ್ಟ್ರಾಂಗ್ ಇದ್ದೀನಿ… ಎಂದು ರೂಪಾಯಿ ಮಾತು ಮುಗಿಸಿತು. ಮೇಡಮ್ಮು ಸೇರಿದಂತೆ ಎಲ್ಲರೂ ಮೇಜು ಕುಟ್ಟಿದರು.
ನಂತರ ಷೇರುಪೇಟೆ ಸೂಚ್ಯಂಕ ಎದ್ದು ನಿಂತು ಮಾತಿಗಿಳಿಯಿತು. ನಮಸ್ಕಾರ ಮೇಡಂ, ನಿಮಗೆ ಗೊತ್ತಿರುವಂತೆಯೇ ಇಡೀ ಜಗತ್ತಿನ ಷೇರುಪೇಟೆಗಳೆಲ್ಲ ತಪಾ ತಪಾ ಅಂತಾ ಬೀಳ್ತಾ ಇವೆ. ಆದ್ರೆ ನಾನು ಮಾತ್ರ ಕನ್ಸಿಸ್ಟೆನ್ಸಿ ಮೇನ್ ಟೇನ್ ಮಾಡಿದ್ದೀನಿ. ನಾಸ್ಡಾಕ್ ಬಿದ್ರೂನೂ, ಎಫ್ಟಿಎಸ್ಸಿ ಬಿದ್ರೂನು ನಾನ್ ಮಾತ್ರ ಬೀಳ್ತಾ ಇಲ್ಲಾ.. ಎಲ್ರೂ ಇಳೀತಾ ಇರಬೇಕಾದ್ರೆ ನಾನು ಬೀಳದಂತೆ ಇರೋದಷ್ಟೇ ಅಲ್ಲೇ ಎದ್ದು ಮೇಲಕ್ಕೆ ಹೋಗ್ತಾ ಇದ್ದೀನಿ. ಇವತ್ತುಂದಿನಾ ಬೇರೆ ಯಾವ ದೇಶದಲ್ಲೂ ಇನ್ವೆಸ್ಟ್ ಮಾಡೋಕೆ ಫಾರಿನ್ ಇನ್ವೆಸ್ಟರ್ ಗಳು ಇಷ್ಟಾ ಪಡ್ತಾ ಇಲ್ಲ. ನನ್ನತ್ರಾನೇ ಬರ್ತಾರೆ. ನಾನು ಏರ್ತಾ ಇರೋದುನ್ನಾ ನೋಡಿಯೇ ಐಎಂಎಫ್ಪು, ವರ್ಲ್ಡ್ ಬ್ಯಾಂಕು ಎಲ್ರೂನೂ ನಮ್ಮನ್ನು ಬುಲ್ಲಿಶ್ ಮಾರ್ಕೆಟ್ ಅಂತಾನೇ ಕರೀತಿದ್ದಾರೆ. ಇವತ್ತುಂದಿನಾ ನಮ್ಮ ದೇಶದ ಶ್ರೀಮಂತರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೋ ಮೂರನೇ ಸ್ಥಾನಕ್ಕೋ ಏರಿದ್ದರೆ, ಅದು ನನ್ನಿಂದಾನೇ… ಎಂದು ಷೇರುಪೇಟೆ ಸೂಚ್ಯಂಕ ಹೆಮ್ಮೆಯಿಂದ ಹೇಳಿಕೊಂಡಿತು.
ಮಾನವ ಅಭಿವೃದ್ಧಿ ಸೂಚ್ಯಂಕ ಎದ್ದು ನಿಂತಿತು. ರೂಪಾಯಿ ಸೂಚ್ಯಂಕ, ಷೇರುಪೇಟೆ ಸೂಚ್ಯಂಕದಷ್ಟು ಗತ್ತು ಗೈರತ್ತು ಏನೂ ಇರಲಿಲ್ಲ. ಮೇಡಂ, ಇವತ್ತುಂದಿನಾ 191 ದೇಶಗಳ ಪೈಕಿ ನಾವು ಸಾಕಷ್ಟು ಸುಧಾರಿಸಿದ್ದೀವಿ. ನಾವು 132ರಲ್ಲಿದ್ದೇವೆ. ಬಾಂಗ್ಲಾ ಭೂತಾನ್ ದೇಶಗಳು ನಮಗಿಂತ ಒಂಚೂರು ಮೇಲೆ ಇರಬಹುದು ಆದ್ರೆ, ಪಾಕಿಸ್ತಾನ 161ನೇ ಸ್ಥಾನಕ್ಕೆ ಇಳಿದಿದೆ. ಅದುಕ್ಕೆ ಹೋಲಿಸಿದ್ರೆ ನಾವು 29 ಸ್ಥಾನದಷ್ಟು ಉತ್ತಮವಾಗಿದ್ದೀವಿ.. ಮುಂದೆ ಮತ್ತಷ್ಟು ಸುಧಾರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿತು.
ಹೀಗೆ ಎಲ್ಲಾ ಸೂಚ್ಯಂಕಗಳು ತಮ್ಮ ತಮ್ಮ ಶಕ್ತಿ ಸಾಮರ್ಥ್ಯವನ್ನು ಅಂಕಿ ಅಂಶಗಳು ಮತ್ತು ಹೋಲಿಕೆ- ಹೊಗಳಿಕೆಯೊಂದಿಗೆ ಪ್ರಸ್ತುತ ಪಡಿಸಿದವು.
ಮೇಡಂ ತುಂಬಾನೆ ಖುಷಿಯಾಗಿದ್ರು. ಇವತ್ತುಂದಿನಾ ಎಲ್ಲಾ ಸೂಚ್ಯಂಕಗಳು ಹೆಚ್ಚು ಕಮ್ಮಿ ಪಾಸಿಟಿವಾಗಿವೆ. ಹೀಗೆ ಇದ್ರೆ ನಾವು 5 ಬಿಲಿಯನ್ ಡಾಲರ್ ಎಕಾನಮಿ ಟಾರ್ಗೆಟ್ ರೀಚ್ ಆಗೋದು ಕಷ್ಟವೇನೂ ಆಗೋದಿಲ್ಲ ಎಂದರು. ಎಲ್ಲಾ ಸೂಚ್ಯಂಕಗಳು ಮೇಜುಕಟ್ಟಿ ಚಪ್ಪಾಳೆಯನ್ನೂ ತಟ್ಟಿದವು.
ಅಷ್ಟರಲ್ಲಿ ಕೊನೆಗೆ ಕೂತಿದ್ದ ಸೂಚ್ಯಂಕ ಎದ್ದು ನಿಲ್ಲಲೇ ಕಷ್ಟ ಪಡುತ್ತಿತ್ತು. ಪಕ್ಕದಲ್ಲಿದ್ದ ಇಂಧನ ಸೂಚ್ಯಂಕವು ಸಹಾಯ ನೀಡಿದ್ದರಿಂದ ಎದ್ದು ನಿಂತಿತು.
ಯಾರದು ಇಷ್ಟೊತ್ತು ಏನು ಮಾಡ್ತಾ ಇದ್ರಿ? ಹೇಳಿ ನಿಮ್ಮ ಸಾಧನೆ ಏನು ಎಂದು ಮೇಡಂ ಕೇಳಿದರು.
ಕೊನೆಯಲ್ಲಿ ಕೂತಿದ್ದ ಸೂಚ್ಯಂಕ ಬಾಯಿ ಬಿಟ್ಟು ಏನನ್ನೋ ಹೇಳಲು ಪ್ರಯತ್ನಿಸುತ್ತಿದೆ. ಆದರೆ ದನಿಯೇ ಹೊರಡುತ್ತಿಲ್ಲ. ಕೈ ಮೇಲೆತ್ತಲಾಗುತ್ತಿಲ್ಲ. ನಿಲ್ಲಲಾಗುತ್ತಿಲ್ಲ. ಇಂಧನ ಸೂಚ್ಯಂಕ ಮತ್ತೆ ಬೆಂಬಲವಾಗಿ ನಿಂತಿತು. ಆದರೆ, ಕೊನೆಯಲ್ಲಿದ್ದ ಸೂಚ್ಯಂಕಕ್ಕೆ ಮಾತನಾಡಲೂ ಶಕ್ತಿಯಿಲ್ಲ, ಕೈಸನ್ನೆಯಲ್ಲಿ ಏನೋ ಹೇಳಲು ಯತ್ನಿಸಿತು. ಆಗಲಿಲ್ಲ.
ಎತ್ತಿದ ಕೈ ದಪ್ಪನೆ ಬಿತ್ತು. ತೋರು ಬೆರಳು ಎದುರಿಗಿದ್ದ ಲ್ಯಾಪ್ಟಾಪಿನ ಕೀಬೋರ್ಡಿಗೆ ಟಚ್ ಆಯಿತು. ತಕ್ಷಣ ಮೇಡಂ ಎದುರಿಗಿದ್ದ ಬಹತ್ ಎಲ್ ಸಿಡಿ ಮಾನಿಟರ್ ನಲ್ಲಿ ಜಾಗತಿಕ ಹಸಿವು ಸೂಚ್ಯಂಕದ ವಿವರಗಳು ಹರಡಿಕೊಂಡವು. 121 ದೇಶಗಳ ಪೈಕಿ ಭಾರತ 107ನೇ ಸ್ಥಾನಕ್ಕೆ ಇಳಿದಿದೆ. ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾ ದೇಶ, ಮಯನ್ಮಾರ್ ಎಲ್ಲವೂ 100ರ ಒಳಗೆ ಇವೆ. ಭಾರತ ಮಾತ್ರ 107ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ…. ಎಂಬ ವಿವರ ಎಲ್ ಸಿಡಿ ಮಾನಿಟರ್ ನಲ್ಲಿ ಇತ್ತು.
ಮೇಡಂಗೆ ಕೋಪ ಬಂತು. ಯಾರ್ರೀ ಅದು ಹಸಿವಿನ ಸೂಚ್ಯಂಕವನ್ನೂ ತಕ್ಷಣವೇ ಹೊರ ಹಾಕಿ ಎಂದು ಘರ್ಜಿಸಿದರು.
ಹಸಿವಿನ ಸೂಚ್ಯಂಕ ಕೂತಲ್ಲೇ ಕುಸಿಯಿತು!
-‘ಅಷ್ಟಾವಕ್ರಾ’

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ