Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಾರೆ ನೋಟ : ಜೊತೆ ಜೊತೆಯಲಿ ಸಾಗಿದ ಜೋಡೊ – ತೋಡೊ!! 

ಜೊತೆ ಜೊತೆಯಲಿ ಸಾಗಿದ ಜೋಡೊ- ತೋಡೊ!! 

ಹೆದ್ದಾರಿಯಲ್ಲಿ ಸಾವಿರಾರು ಜನರ ಜತೆ ಹೆಜ್ಜೆ ಹಾಕುತ್ತಿದ್ದ ಜೋಡೊ ಪಕ್ಕಕ್ಕೆ ತಿರುಗಿ ನೋಡಿದ. ಹೊಸ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದ. ಎಂದೋ ಕಂಡಂತ ಮುಖ. ಪರಿಚಯದ ಮುಖ, ಆದರೆ, ಸರಿಯಾಗಿ ನೆನಪಾಗುತ್ತಿಲ್ಲ. ಎಲ್ಲಿ ನೋಡಿದ್ದು, ಯಾವಾಗ ನೋಡಿದ್ದು ಎಂಬ ಗೊಂದಲದಿಂದ ತಲೆಕೆರೆದುಕೊಳ್ಳುವ ಹೊತ್ತಿಗೆ ಹೊಸ ವ್ಯಕ್ತಿ ನಗೆ ಚೆಲ್ಲಿದ.
ಆ ನಗೆ ನೋಡಿ ಮತ್ತಷ್ಟು ಪರಿಚಯ ಇದೆ ಎಂದು ಖಚಿತವಾಯಿತೇ ಹೊರತು ಯಾರು, ಎಲ್ಲಿ ಮತ್ತು ಹೇಗೆ ಎಂಬುದು ಮಾತ್ರ ಹೊಳೆಯಲೇ ಇಲ್ಲ.
‘ನಾನು  ಯಾರು, ಯಾವ   ಊರು ಅಂತಾ ತುಂಬಾ ತಲೆಕೆಡಿಸ್ಕೊಂಡಿದ್ದೀಯಾ  ಅಲ್ವಾ? ನಿನ್ನಂತೋರು ಬೇಗ ಪರಿಚಯವಾಗೋದು ಅಷ್ಟೇ ಅಲ್ಲ, ಎಷ್ಟೇ ವರ್ಷ ಆದರೂ ನೆನಪಿನಲ್ಲಿ ಇರುತ್ತಾರೆ. ನನ್ನಂತೋರು ಪರಿಚಯ ಆಗೋದು ಕಷ್ಟ. ಪರಿಚಯ ಆದ್ರೂ ನೆನಪಲ್ಲಿ ಇರೋದು ಕಷ್ಟ’ ಅಂತಾ ಹೇಳಿದ.
‘ಹೌದಪ್ಪಾ ಹೌದು.. ತಲೆಗೂ ಬಂದಿದೆ.. ನಾಲಿಗೆ ತುದಿಗೂ ಬಂದಿದೆ.. ಆದರೆ, ನಿನ್ನ ಹೆಸರು ಗೊತ್ತಾಗ್ತಿಲ್ಲ.. ಎಲ್ಲಿ ಪರಿಚಯ ಆದೆ ಅನ್ನೋದು ತಿಳೀತಿಲ್ಲ’ ಅಂತಾ ಜೋಡೊ ಹೇಳಿದ.
ಜೋಡೊನ ಮತ್ತಷ್ಟು ಪೀಡಿಸಿಬೇಕೆಂದುಕೊಂಡ ಹೊಸ ವ್ಯಕ್ತಿ ‘ನೋಡಪ್ಪಾ.. ನೀನೊಂಥರಾ ಪಾಸಿಟಿವು. ನೀನು ಇದ್ದರೆ ಎಲ್ಲವೂ ಚೆಂದ.. ನಿನಗಾಗಿಯೇ ಇಡೀ ಪ್ರಪಂಚವೇ ಕಾದು ಕುಳಿತಿದೆ, ನೀನೊಬ್ಬನಿದ್ದರೆ ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆ, ನೀನೊಬ್ಬನಿದ್ದರೆ ಯುಟೋಪಿಯಾ ಸೃಷ್ಟಿಯಾಗಿ ಬಿಡುತ್ತದೆ’ ಎಂದು ಹೊಗಳಿದ.
‘ಅದ್ಸರಿ ಮಾರಾಯ ನೀನು ಯಾರು ಅಂತಾ ಹೇಳು.. ನನ್ನನ್ನ ನೀನು ಯದ್ವಾತದ್ವಾ ಹೊಗಳುತ್ತಾ ಇರೋದು ನೋಡಿದ್ರೆ, ಮುಂದಿನ ಚುನಾವಣೆಯಲ್ಲಿ  ಇಂಡಿಪೆಂಡೆಂಟಾಗಿ ಕಂಟೆಸ್ಟ್ ಮಾಡೋ ಕ್ಯಾಂಡಿಡೇಟಿನಂತೆ ಕಾಣ್ತಾ ಇದ್ದೀಯಾ ನೀನು.. ಆದ್ರೆ ನೀನ್ ನೇರವಾಗಿ ಕಂಟೆಸ್ಟ್ ಮಾಡಿ ಗೆಲ್ಲೋದಕ್ಕಿಂತ ಅವರಿವರನ್ನಾ ನಿಲ್ಲಿಸಿ, ಗೆಲ್ಲಿಸುವ ಕಿಂಗ್ ಮೇಕರ್ ಥರಾ ಕಾಣ್ತಾ ಇದೀಯಾ ಯಾರಪ್ಪಾ ನೀನು?’ ಎಂದು ಜೋಡೋ ಕೇಳಿದ.
ಜೋಡೊ ಮಾತು ಕೇಳಿದ ಹೊಸ ವ್ಯಕ್ತಿಗೆ ಒಳಗೊಳಗೆ ನಗು ಜೋಡೊಗೆ ಎಷ್ಟೆಲ್ಲಾ ತಾಳ್ಮೆ ಇದೆ ಅನ್ನೋದನ್ನಾ ಪರೀಕ್ಷೆ ಮಾಡಬೇಕು ಅಂತಾ ಅಂದ್ಕೊಂಡು, ‘ನೀನು ಅಂದರೆ ಜನಾ ಸೇರ್ತಾರೆ.. ನೀನು ಅಂದ್ರೆ ಮೀಡಿಯಾದೋರು ಬರ್ತಾರೆ.. ನೀನು ಬಂದ್ರೆ ಜನಜಾತ್ರೆಯಾಗುತ್ತೆ, ನೋಡು ನಾನು ಬಂದ್ರೆ ನಿನ್ನಂತಾ ನೀನೇ ನನ್ನುನ್ನ ಗುರ್ತು ಹಿಡಿತಾ ಇಲ್ಲಾ ಇನ್ನು ಆರ್ಡಿನರಿ ಜನರು ನನ್ನ ಗುರ್ತು ಹಿಡೀತಾರಯೇ?’ ಎಂದು ಪ್ರಶ್ನಿಸಿದ.
ಸದಾ ಸಾದಸೀದಾ ಇರುವ ಜೋಡೊಗೆ ಹೊಸ ವ್ಯಕ್ತಿ ಸುತ್ತಿಬಳಸಿ ಮಾತಾಡ್ತಾ ಇರೋದು, ಮುಖ್ಯವಾಗಿ ತಾನು ಯಾರು ಅನ್ನೋದನ್ನೇ ಹೇಳದೇ ಇರೋದು ವಿಚಿತ್ರವೆನಿಸಿತು. ಆದರೆ ಸಿಟ್ಟು ಬರಲಿಲ್ಲ. ಸಾರ್ವಜನಿಕವಾಗಿ ಹಾಗೆಲ್ಲ ಸಿಟ್ಟು ಮಾಡಿಕೊಳ್ಳಬಾರದು ಎಂಬ ಪಾಠವನ್ನು ಜೋಡೊ ಎಂದೋ ಕಲಿತಿದ್ದ. ಹೀಗಾಗಿ ಮತ್ತೆ ನಗುತ್ತಲೇ, ‘ನೋಡು ಮಾರಾಯ, ನಿನ್ನನ್ನೂ ಜನರು ಗುರುತು ಹಿಡೀತಾರೆ. ನೋಡು, ನಾನು ನಿನ್ನ ಗುರುತು ಹಿಡಿದೇ ತಾನೆ ನಕ್ಕಿದ್ದು, ನಾನು ನಕ್ಕ ಮೇಲೆ ತಾನೇ ನೀನು ಪಕ್ಕದಲ್ಲಿ ಹೆಜ್ಜೆ ಹಾಕ್ತಾ ಇರೋದು, ಸುಮ್ಮನೆ ನಿನ್ನ ಮೇಲೆ ನೀನೆ ಬೇಸರಗೊಳ್ಳಬೇಡ’
ಎಂದ.
ಹೊಸವ್ಯಕ್ತಿ ಗಹಗಹಿಸಿ ನಕ್ಕು, ‘ನೋಡು ನೀನು ನನ್ನ ಗುರುತು ಹಿಡಿದು ನಕ್ಕಿದ್ದಿಯಾ ಅಂತಾ ಹೇಳ್ತೀಯಾ ಆದರೆ, ನಾನು ಯಾರು, ಯಾವ ಊರು? ಎಲ್ಲಿದ್ದೆ ಇಲ್ಲಿ ತಂಕಾ ಅನ್ನೋ ಪ್ರಶ್ನೆಗೆ ನಿನಗೆ ಉತ್ತರ ಸಿಕ್ಕಿಲ್ಲ , ನನ್ನ ಹೆಸರೂ ನಿಂಗೆ ಗೊತ್ತಿಲ್ಲ. ಆದರೂ ನೀನು ನನ್ನ ಜತೆ ನಗ್ತಾ ನಗ್ತಾ ಮಾತಾಡ್ತಾ ಇದ್ದೀಯಾ’ ಅಂದ.
‘ನೋಡು ಎದುರಿಗಿದ್ದವರು ಯಾರಾದರೇನು? ಒಂದು ಕಿರುನಗೆ ಚೆಲ್ಲಿದರೆ ಸಾಕು.. ಹೊಸದೊಂದು ಸ್ನೇಹಬಾಂಧವ್ಯ ಬೆಸೆಯುತ್ತದೆ. ಒಂದು ಕಿರುನಗೆ ಚೆಲ್ಲಲು ನಾವೇನು ತೆರಿಗೆ ಕಟ್ಟಬೇಕೇ? ಶ್ರಮ ಪಡಬೇಕೆ? ಕಳೆದುಕೊಳ್ಳುವುದು ಏನೂ ಇರುವುದಿಲ್ಲ , ಅದಕ್ಕೆ ನಾನು ನಿನ್ನ ನೋಡಿ ನಕ್ಕೆ. ನೀನಲ್ಲದೇ ಬೇರೆ ಯಾರಾಗಿದ್ದರೂ ನಗುತ್ತಿದ್ದೆ. ನಾವು ಮನುಷ್ಯರು ಎಲ್ಲೋ ಎಂದೋ ಭೇಟಿ ಆಗಿರುವ ಸಾಧ್ಯತೆ ಇದ್ದೆ ಇರುತ್ತದೆ ಎಂಬ ಕಾರಣಕ್ಕೆ ನೀನು ನಂಗೆ ಪರಿಚಯ ಇದ್ದೀಯಾ ಅನಿಸ್ತು. ಎಲ್ಲಿ ಹೇಗೆ ಅಂತಾ ಗೊತ್ತಾಗಲಿಲ್ಲ ಪರಿಚಯ ಇದ್ದೀಯಾ ಅನಿಸುವ ಭಾವನೆಯೇ ನನ್ನ ನಿನ್ನ ನಡುವೆ ಮಾತುಕತೆಗೆ ಉತ್ತೇಜಿಸಿತು. ಈಗ ನೋಡು ನೀನು ಯಾರಾದರೇನು? ನನ್ನೊಂದಿಗೆ ನೂರಾರು ಹೆಜ್ಜೆ ಹಾಕಿದ್ದೀಯಾ ಅದೇನು ಕಡಿಮೆಯೇ? ಹಿಂದೆ ಏನೋ ಗೊತ್ತಿಲ್ಲ.. ಮುಂದೆಂದೂ ನೀನು ನನ್ನ ಗೆಳೆಯ’ ಎಂದ ಜೋಡೊ.
‘ಹೌದು ನೀನು ಹೇಳೋದು ನಿಜಾ.. ನನ್ನ ಹೆಸರು ತೋಡೋ… ಇದುವರೆಗೂ ನಾನು ನಿನ್ನಂತೆ ನಗಲಿಲ್ಲ.. ಪಯಣದಲ್ಲಿ ಸಿಕ್ಕವರ ಜತೆ ಹೆಜ್ಜೆ ಹಾಕಲಿಲ್ಲ.. ನಾಲ್ಕು ಮಾತು ಹೇಳಲಿಲ್ಲ .. ಜೋಡಿಸುವ ಬದಲು ತೋಡಿಸುವ ಕೆಲಸ ಮಾಡಿದೆ.. ನೀನು ಹೇಗೆ ಮುಕ್ತವಾಗಿ ನಗ್ತಾ ಇದ್ದೀಯಾ… ನಂಗೂ ಹಂಗೆ ನಗಬೇಕು ಅನಿಸುತ್ತೆ. ನಾನು ಎಷ್ಟೇ ನಕ್ಕರೂ ಒಳಗೊಳಗೆ ಕೋಪ, ಈರ್ಷೆ, ಅಸಹನೆ ಇರುತ್ತೆ, ನಾನು ನಿನ್ನ ಜತೆ ಬರ್ತೆನೆ ನನ್ನನ್ನು ಜತೆಗೆ ಸೇರಿಸ್ಕೋ’ ಎಂದು ತೋಡೊ ಎರಡು ಕೈಗಳಿಂದ ಜೋಡೊ ಕೈಹಿಡಿದು ಕೇಳಿಕೊಂಡ.
ಮುಕ್ತವಾಗಿ ನಕ್ಕ ಜೋಡೊ ತೋಡೊ ಹೆಗಲ ಮೇಲೆ ಕೈಹಾಕಿ ಇನ್ಮುಂದೆ ನೀನು ತೋಡೋ ಅಲ್ಲಾ ಬರೀ ಜೋಡೊ ಎಂದ.
ತೋಡೊ ಮುಕ್ತವಾಗಿ ನಕ್ಕು ಜೋಡೊ ಆಗಿಬಿಟ್ಟ!
-‘ಅಷ್ಟಾವಕ್ರಾ
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ