ವಿತ್ತ

ಬ್ಯಾಂಕ್ ಸಿಇಒಗಳಿಗೆ ಸುಧೀರ್ಘಕಾಲ!
ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರಿಗೆ ಸಮೃದ್ಧಕಾಲ ಬಂದಿದೆ. ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ (ಸಿಇಒ) ಹುದ್ದೆಯ ಅಧಿಕಾರದ ಅವಧಿಯನ್ನು ಕೇಂದ್ರ ಸರ್ಕಾರ ಐದು ವರ್ಷಗಳವರೆಗೆ ವಿಸ್ತರಿಸಿದೆ. ಅಲ್ಲದೇ ಈ ಐದು ವರ್ಷ ಪೂರೈಸಿದ ನಂತರ ಮತ್ತೆ ಐದು ವರ್ಷಗಳವರೆಗೆ ಸೇವಾವಧಿಯನ್ನು ವಿಸ್ತರಿಸಲೂ ಅವಕಾಶ ಇದೆ. ಇದುವರೆಗೆ ಮೂರು ವರ್ಷಗಳು ಮಾತ್ರ ಅಧಿಕಾರ ಅವಧಿ ಇತ್ತು. ಖಾಸಗಿ ಬ್ಯಾಂಕುಗಳ ಸಿಇಒಗಳು ನಿವೃತ್ತರಾಗುವವರೆಗೂ ಸೇವೆ ಸಲ್ಲಿಸುತ್ತಾರೆ. ಬ್ಯಾಂಕುಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ರೂಪಿಸುವ ದೀರ್ಘಕಾಲಿನ ಯೋಜನೆ ಅನುಷ್ಠಾನಕ್ಕೆ ಇದರಿಂದ ಅನುಕೂಲವಾಗುತ್ತದೆ. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಸಿಇಒಗಳು ಏನೇ ಕಾರ್ಯಯೋಜನೆ ರೂಪಿಸುವುದಿದ್ದರೂ ಮೂರು ವರ್ಷಗಳಿಗಷ್ಟೇ ರೂಪಿಸಬೇಕಿತ್ತು. ದೀರ್ಘಕಾಲೀನ ಯೋಜನೆಗಳನ್ನು ರೂಪಿಸಿದರೆ, ಮುಂದೆ ಬರುವ ಸಿಇಒಗಳು ಅದನ್ನು ಬದಲಾಯಿಸುವ ಸಾಧ್ಯತೆ ಇರುತ್ತಿತ್ತು. ಹೀಗಾಗಿ ಬ್ಯಾಂಕುಗಳು ಖಾಸಗಿ ಬ್ಯಾಂಕುಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಮುಂದೆ ಈ ಬ್ಯಾಂಕುಗಳೂ ಖಾಸಗಿ ಬ್ಯಾಂಕುಗಳಿಗಿಂತ ಉತ್ತಮ ಸೇವೆಯನ್ನು ಒದಗಿಸಲು ಸಾಧ್ಯವಾಗಬಹುದು. ಇದೊಂದು ಸಕಾರಾತ್ಮಕ ಬೆಳವಣಿಗೆ.
ವಿಜ್ಞಾನ

ಸತ್ತ ಮೃದ್ವಂಗಿ ಜೀವಂತ!
ಸಾವಿರಾರು ವರ್ಷಗಳ ಹಿಂದೆಯೇ ನಾಶವಾಗಿದೆ ಎಂದೇ ಭಾವಿಸಲಾಗಿದ್ದ ಮೃದ್ವಂಗಿಯೊಂದು ಜೀವಂತವಾಗಿ ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಸಿಮಾಟಿಯಾ ಕುಕಿ ಎಂದು ಕರೆಯುವ ಈ ಮೃದ್ವಂಗಿಯ ಪಳಯುಳಿಕೆಗಳೇ ಇದುವರೆಗೆ ಪತ್ತೆಯಾಗಿದ್ದು, ಅವುಗಳನ್ನು ಸಂಶೋಧಿಸಿದಾಗ ೪೦,೦೦೦ ವರ್ಷಗಳ ಹಿಂದೆಯೇ ಈ ಪ್ರಭೇದವು ಅಳಿದು ಹೋಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ತೀವ್ರ ಉಬ್ಬರವಿಳಿತಗಳಿರುವ ಆಳ ಸಮುದ್ರದಲ್ಲಿ ಸಮುದ್ರ ಗೊಂಡೆಹುಳುವಿಗಾಗಿ ಸಂಶೋಧನೆ ಮಾಡುತ್ತಿದ್ದಾಗ ಕುಕಿ ಪತ್ತೆಯಾಗಿದೆ. ಸಮುದ್ರ ಪರಿಸರಶಾಸ್ತ್ರಜ್ಞ ಜೆಫ್ ಗೊಡ್ಡಾರ್ಡ್ ಅವರು ಅಪರಿಚಿತವಾದ ಜೀವಿಯೊಂದನ್ನು ಗುರುತಿಸಿದರು. ಬಿಳಿ, ಅರೆಪಾರದರ್ಶಕ ದ್ವಿದಳದಂತಹ ಈ ಜೀವಿ ಸರಿಸುಮಾರು ೧೧ ಮಿಲಿಮೀಟರ್ ಉದ್ದವಿತ್ತು. ಅದೇ ಸಿಮಾಟಿಯಾ ಕುಕಿ ಎಂಬ ಮೃದ್ವಂಗಿ. ಆ ಕ್ಷಣಕ್ಕೆ ಕುಕಿಗೆ ಅಡ್ಡಿಮಾಡದ ಗೊಡ್ಡಾರ್ಡ್, ಅದರ ಚಿತ್ರತೆಗೆದು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡರು. ಸಾಂಟಾ ಬಾರ್ಬರಾ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ಮೇಲ್ವಿಚಾರಕರಾದ ಪಾಲ್ ವ್ಯಾಲೆಂಟಿಚ್- ಸ್ಕಾಟ್ ಅವರಿಗೂ ಕುಕಿಯನ್ನು ಗುರುತಿಸಲಾಗಲಿಲ್ಲವಂತೆ! ‘ಹೊಸ ಸಂಶೋಧನೆಗಳು ನಾವು ವಿಜ್ಞಾನದಲ್ಲಿ ಏಕೆ ಇದ್ದೇವೆ ಎಂಬುದರ ಭಾಗವಾಗಿದೆ’ ಎನ್ನುತ್ತಾರೆ ಸ್ಕಾಟ್.
ವಿಶೇಷ

ಕಾಲ್ಚೆಂಡು ಕ್ರಿಡಾಂಗಣದಲ್ಲಿ ಉಗಿಬಂಡಿ!
ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಜಗತ್ತಿನೆಲ್ಲೆಡೆ ಫುಟ್‌ಬಾಲ್‌ನದೇ ಮಾತುಕತೆ, ನೋಟ ಎಲ್ಲಾ. ಇವುಗಳ ನಡುವೆ ಒಂದಷ್ಟು ವಿಶೇಷ ಸಂಗತಿಗಳು ವೈರಲ್ಲಾಗುತ್ತಿವೆ. ಫುಟ್‌ಬಾಲ್ ಕ್ರೀಂಡಾಂಗಣದೊಳಗೆ ರೈಲು ಸಂಚರಿಸುತ್ತಿರುವ ಸಂಗತಿ ಎಲ್ಲರ ಗಮನ ಸೆಳೆದಿದೆ. ಪ್ರೇಕ್ಷಕರ ಸ್ಟ್ಯಾಂಡ್ ಮತ್ತು ಪಿಚ್ ನಡುವೆ ಇರುವ ಹಳಿಗಳ ಮೇಲೆ ರೈಲು ಸಾಗುತ್ತದೆ. ಸಿಯೆರ್ನಿ ಹ್ರಾನ್ ರೈಲ್ವೇ ಮಾರ್ಗವು ಕ್ರಿಡಾಂಗಣ ಮತ್ತು ಸ್ಲೋವಾಕಿಯನ್ ಮಿನ್ನೋಸ್ ಟಟ್ರಾನ್ ಸಿಯೆರ್ನಿ ಬಾಲೋಗ್‌ನ ಮುಖ್ಯ ನಿಲ್ದಾಣವನ್ನು ವಿಭಜಿಸುತ್ತದೆ. ಸಾಂದರ್ಭಿಕವಾಗಿ, ವಿಂಟೇಜ್ ಸ್ಟೀಮ್ ಲೊಕೊಮೊಟಿವ್ ರೈಲು ಬರುತ್ತದೆ ಮತ್ತು ಕಾಲ್ಚೆಂಡು ಪ್ರೇಮಿಗಳ ನೋಟವನ್ನು ತಾತ್ಕಾಲಿಕವಾಗಿ ತಡೆಯುತ್ತದೆ. ಇದು ನಿಜವಾಗಲು ತುಂಬಾ ವಿಚಿತ್ರವಾಗಿದೆಯಲ್ಲವೇ? ಅದನ್ನೀಗ ನೀವೂ ನೋಡಬಹುದು. ಪ್ರಪಂಚದಾದ್ಯಂತದ ವಿಲಕ್ಷಣ ಅದ್ಭುತಗಳನ್ನು ತೆರೆದಿಡುವ ಕ್ರಿಯೇಚರ್ ಆಫ್ ಗಾಡ್ ಟ್ವಿಟರ್ ಖಾತೆಯು ಸ್ಟೀಮ್ ರೈಲಿನ ವೀಡಿಯೊವನ್ನು ಹಂಚಿಕೊಂಡಿದೆ. ಕೋಟಿಗೂ ಹೆಚ್ಚು ಜನರು ಈ ವಿಡಿಯೋ ನೋಡಿ ಅಚ್ಚರಿಗೊಂಡಿದ್ದಾರೆ!
ವಿಹಾರ

ಹೊನ್ನಮೇಟಿ- ಅತ್ತಿಖಾನೆ
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದೊಳಗೆ ಇರುವ ಗಿರಿ ಸಾಲುಗಳ ಮಧ್ಯಪ್ರದೇಶದಲ್ಲಿ ಹೊನ್ನಮೇಟಿ-ಅತ್ತಿಖಾನೆ ಪ್ರವಾಸಿ ತಾಣವಿದೆ. ಬಿಳಿಗಿರಿ ಪರ್ವತ ಶ್ರೇಣಿಯನ್ನು ಉತ್ತರದಿಂದ ದಕ್ಷಿಣಕ್ಕೆ ಸೀಳುವ ಅತಿ ಎತ್ತರದ ಗಿರಿಯೇ ಅತ್ತಿಖಾನೆ-ಹೊನ್ನಮೇಟಿ. ಸದಾ ಹಸಿರು ಹೊದ್ದು ಮಲಗಿರುವ ನಯನ ಮನೋಹರ ಪ್ರದೇಶವಾಗಿದೆ. ಇಲ್ಲಿ ೧೮-೧೯ನೇ ಸಾಲಿನಲ್ಲಿ ಯೂರೋಪಿಯನ್ನರು ಕಾಫಿ ತೋಟಗಳನ್ನು ಬೆಳೆಸಿದ್ದರು. ಇಲ್ಲಿನ ೧೭೦೦ ಮೀಟರ್ ಎತ್ತರದ ಕತ್ತಿಬೆಟ್ಟ ಏರುವಿಕೆಯೇ ಒಂದು ರೋಮಾಂಚನ ಅನುಭವ. ಇದು ನಿತ್ಯ ಹರಿದ್ವರ್ಣದ ಅರಣ್ಯ ಪ್ರದೇಶವಾದ್ದರಿಂದ ೧೯ನೇ ಶತಮಾನದಲ್ಲಿ ಸ್ಕಾಟ್ಲೆಂಡ್ ದೇಶದ ರ್ಯಾಂಡಲ್ಫ್ ಸಿ.ಮೋರಿಸ್ ಎಂಬಾತ ಕಾಫಿ ತೋಟಗಳನ್ನು ಈ ಪ್ರದೇಶದಲ್ಲಿ ಬೆಳೆಸಿದ್ದನು. ಆತನ ಮನೆಯನ್ನು ಸಂರಕ್ಷಿಸಲಾಗಿದೆ. ಇಲ್ಲಿಯ ಪ್ರಾಕೃತಿಕ ಸೌಂದರ್ಯ ಬಣ್ಣಿಸಲು ಅಸದಳ. ಇಲ್ಲಿನ ಬಿರ್ಲಾ ಮಂದಿರ, ನಾಟಿ ಕಿತ್ತಳೆ, ಬೀಳುವಂತೆ ನಿಂತಿರುವ ದೊಡ್ಡ ಕಪ್ಪು ಕಲ್ಲು ಪ್ರಮುಖ ಆಕರ್ಷಣೆಗಳಾಗಿವೆ. ತಂಪಾಗಿ ಬೀಸುವ ಗಾಳಿ, ಇಬ್ಬನಿ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತದೆ. ರಾಷ್ಟ್ರೀಯ ಹೆದ್ದಾರಿ-೨೦೯ ಮೂಲಕ ಪುಣಜನೂರು ಮಾರ್ಗವಾಗಿ ತೆರಳಬಹುದು.





