Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ವಿ4 : ವಿತ್ತ; ವಿಜ್ಞಾನ; ವಿಶೇಷ; ವಿಹಾರ

ವಿತ್ತ

ರೂಪಾಯಿಗೂ ಬಂತು ಮೌಲ್ಯ!

ಸದಾ ಕುಸಿತದ ಹಾದಿಯಲ್ಲೇ ಇದ್ದ ರೂಪಾಯಿ ಈಗ ಕಾಲರ್ ಮೇಲೇರಿಸಿಕೊಳ್ಳುವ ಸಮಯ! ಯುಎಸ್ ಡಾಲರ್ ವಿರುದ್ಧ ೮೩ರ ಗಡಿದಾಟಿದ್ದ ರೂಪಾಯಿ ಮೌಲ್ಯವೀಗ ಸುಧಾರಿಸುತ್ತಿದೆ. ಶುಕ್ರವಾರ ಒಂದೇ ದಿನದ ವಹಿವಾಟಿನಲ್ಲಿ ೧೦೦ ಪೈಸೆಗಳಷ್ಟು ಚೇತರಿಕೆ ಕಂಡು ಬಂದಿದೆ. ದಿನದ ಅಂತ್ಯಕ್ಕೆ ೮೧.೮೧ರಲ್ಲಿ ವಹಿವಾಟಾಗಿದೆ. ೨೦೧೮ ಡಿಸೆಂಬರ್ ೧೮ ರಿಂದ ರೂಪಾಯಿಯಲ್ಲಿನ ಅತಿದೊಡ್ಡ ಏಕದಿನದ ಚೇತರಿಕೆ ಇದಾಗಿದೆ. ಡಾಲರ್ ವಿರುದ್ಧ ಕುಸಿಯುತ್ತಿದ್ದ ರೂಪಾಯಿ ಮೌಲ್ಯ ಚೇತರಿಸಿಕೊಳ್ಳಲು ಮುಖ್ಯ ಕಾರಣ, ಅಮೆರಿಕದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುವ ಮುನ್ಸೂಚನೆ ಕಂಡು ಬಂದಿರುವುದು. ಅಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಈಗಾಗಲೇ ಏರಿಸಿರುವ ಬಡ್ಡಿದರವನ್ನು ಫೆಡರಲ್ ರಿಸರ್ವ್ ತಗ್ಗಿಸಲಿದೆ. ಬಡ್ಡಿದರ ತಗ್ಗಿಸಿದಾಗ ಡಾಲರ್ ಕರೆನ್ಸಿಗೆ ಇರುವ ಬೇಡಿಕೆ ಕುಸಿಯುತ್ತದೆ. ಆಗ ತನ್ನಿಂತಾನೆ ರೂಪಾಯಿ ಮೌಲ್ಯವು ವೃದ್ಧಿಸುತ್ತದೆ. ರೂಪಾಯಿ ಭಾರಿ ಪ್ರಮಾಣದ ಚೇತರಿಕೆ ಕಾಣಲು ಮತ್ತಷ್ಟು ತ್ರೈಮಾಸಿಕಗಳನ್ನು ಕಾಯಬೇಕಿದೆ. ೨೦೨೨ ರಲ್ಲಿ, ರೂಪಾಯಿಯು ಡಾಲರ್ ವಿರುದ್ಧ ಶೇ. ೮ ರಷ್ಟು ಕುಸಿತ ದಾಖಲಿಸಿದೆ.


ವಿಜ್ಞಾನ

ರೋಗರಹಿತ ಭತ್ತದ ತಳಿ!

ರೈತರಿಗೆ ರೋಗರಹಿತ ತಳಿ ಲಭ್ಯವಾದರೆ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ನಿಟ್ಟಿನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಅಧೀನ ಸಂಸ್ಥೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ರೋಗರಹಿತವಾದ ಮೂರು ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಅಂತಹ ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆದಿರುವ ಪಂಜಾಬಿನ ರೈತ ಹರ್‌ಪ್ರೀತ್ ಕಲೇಕಾ ಹೇಳುತ್ತಾರೆ- ‘ ಇವು ರೋಗರಹಿತವಾಗಿವೆ, ಅರ್ಧದಷ್ಟು ನೀರನ್ನು ಬಳಸುತ್ತವೆ, ಬೆಳೆಯಲು ಕಡಿಮೆ ವೆಚ್ಚ, ಇಳುವರಿ ಹೆಚ್ಚು. ಮಾರಿದರೆ ಬೆಲೆಯೂ ಹೆಚ್ಚು’. ಪಂಜಾಬ್‌ನಲ್ಲಿ ಬೆಳೆಯುತ್ತಿರುವ ಈ ಮೂರು ಹೊಸ ಭತ್ತದ ತಳಿಗಳನ್ನು ಕ್ರಾಂತಿಕಾರಿ ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಈ ಹೊಸ ತಳಿಗಳು ಮುಂದಿನ ೨೦ ವರ್ಷಗಳವರೆಗೆ ಮಾರುಕಟ್ಟೆಯನ್ನು ಆಳುತ್ತವೆ. ಐಎಆರ್‌ಐ ಅಭಿವೃದ್ಧಿ ಪಡಿಸಿರುವ ಈ ಮೂರು ಭತ್ತದ ತಳಿಗಳ ಹೆಸರು ಪೂಸಾ ಬಾಸ್ಮತಿ ೧೮೪೭, ಪೂಸಾ ಬಾಸ್ಮತಿ ೧೮೮೫ ಮತ್ತು ಪೂಸಾ ಬಾಸ್ಮತಿ ೧೮೮೬. ಈ ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆದ ರೈತರ ಮೊಗದಲ್ಲೀಗ ನಗೆ ಬೆಳದಿಂಗಳು!


ವಿಶೇಷ

ದೊಡ್ಡಬೆಲೆಯ ಪುಟ್ಟ ಸ್ಕರ್ಟ್!

ಯಾವುದು ಸಹಜವಲ್ಲವೋ, ಯಾವುದು ಅತಿ ವಿಶೇಷವೋ ಅದೇ ಫ್ಯಾಶನ್ನು! ಯಾವ ವಿನ್ಯಾಸ ಸುದ್ದಿಯಾಗುತ್ತದೋ ಅದೂ ಕೂಡಾ ಫ್ಯಾಶನ್ನೇ! ಇಟಾಲಿಯ ಐಷಾರಾಮಿ ಕಂಪೆನಿ ಡೀಸೆಲ್ ಅತಿ ದುಬಾರಿಯ ಆದರೆ ಅತ್ಯಂತ ಚಿಕ್ಕದಾದ ಸ್ಕರ್ಟ್ ವಿನ್ಯಾಸ ಮಾಡಿ ಸುದ್ದಿಯಾಗಿದೆ. ನೆಟ್ಟಿಗರ ಕುತೂಹಲ ಕೆರಳಿಸಿ, ಅವರಲ್ಲಿನ ಸೃಜನಶೀಲತೆಯನ್ನು ಉದ್ದೀಪಿಸಿದೆ ಈ ಸ್ಕರ್ಟ್. ನೆಟ್ಟಿಗರೊಬ್ಬರು ಇದು ಸ್ಕರ್ಟ್ ಅಲ್ಲ, ಸ್ವಲ್ಪ ದೊಡ್ಡದಾದ ನಡು ಬೆಲ್ಟು ಎಂದು ಬಣ್ಣಿಸಿದ್ದಾರೆ. ಈ ಸ್ಕರ್ಟಿನ ವಿಡಿಯೋ ವೈರಲ್ಲಾಗಿದ್ದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಡೀಸೆಲ್ ಫಾಲ್‌ವಿಂಟರ್‌ಗಾಗಿ ಈ ಸ್ಕರ್ಟ್ ವಿನ್ಯಾಸ ಮಾಡಿದ್ದು, ರೂಪದರ್ಶಿಗಳು ಅದನ್ನು ತೊಟ್ಟು ಕ್ಯಾಟ್‌ವಾಕ್ ಮಾಡಿದ್ದಾರೆ. ಅದೀಗ ಷೋರೂಮುಗಳಲ್ಲಿ ಲಭ್ಯವಿದೆ. ಅದರ ಬೆಲೆ ೭೪,೦೦೦ ರೂಪಾಯಿ. ಇದನ್ನು ದೊಡ್ಡದಾದ ಬೆಲ್ಟು ಎಂದು ಒಪ್ಪದವರು ‘ ಮೈಕ್ರೋ-ಮಿನಿ ಸ್ಕರ್ಟ್’ ಎಂಬ ಡೀಸೆಲ್ ಹೇಳಿಕೆಯನ್ನು ಒಪ್ಪಿಯಾರು. ಶುದ್ಧ ಚರ್ಮದಲ್ಲಿ ತಯಾರಾಗಿರುವ ಈ ಸ್ಕರ್ಟ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಲವರು ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಿ ಅನ್‌ಬಾಕ್ಸ್ ಮಾಡುವ ವಿಡಿಯೋ ಹಾಕಿದ್ದಾರೆ. ಅವುಗಳನ್ನು ಲಕ್ಷಾಂತರ ನೆಟ್ಟಿಗರು ನೆಟ್ಟಕಣ್ಣಿನಿಂದ ನೋಡಿದ್ದಾರೆ.


ವಿಹಾರಜೈನ ಕ್ಷೇತ್ರ ಕನಕಗಿರಿ

ಚಾಮರಾಜನಗರ ತಾಲ್ಲೂಕಿನ ಮಲೆಯೂರು ಬಳಿಯಿರುವ ಜೈನ ಕ್ಷೇತ್ರ ಕನಕಗಿರಿ ಒಂದು ದಿನದ ಪಿಕ್ನಿಕ್ಗೆ ಸೂಕ್ತ ಸ್ಥಳ. ಬೆಟ್ಟವು ಬಿಳಿಕಲ್ಲಿನ ಬಂಡೆಗಳಿಂದ ಆವೃತವಾಗಿದ್ದು, ತ್ಯಾಗಮೂರ್ತಿ ಬಾಹುಬಲಿಯ ವಿಗ್ರಹವಿದೆ. ಈ ಗಿರಿಯಲ್ಲಿರುವ ವಿಶಾಲ ಬಂಡೆಗಳ ಮೇಲೆ ಜೈನ ತೀರ್ಥಂಕರರ ಪಾದುಕೆಗಳು, ಶಿಲಾ ಶಾಸನಗಳಿವೆ. ಸಮಾಧಿ ಮಂಟಪ, ಗುಹೆ ಹಾಗೂ ಜೈನರ ಶ್ರದ್ದಾ ಕೇಂದ್ರವಿದೆ. ಅತಿಶಯ ಮಹೋತ್ಸವ ಎಂಬ ಬೃಹತ್ ಕಾರ್ಯಕ್ರಮ ನಡೆದು ಜೈನ ಮುನಿಗಳ ಪ್ರವಚನ, ಪೂಜೆ, ಪುರಸ್ಕಾರ, ಚಿಂತನ ಮಂಥನ ನಡೆಯುತ್ತದೆ. ಮೈಸೂರು ಕಡೆಯಿಂದ ಹೆಗ್ಗವಾಡಿ, ಕೆರೆಹಳ್ಳಿ, ಮಕ್ಕಡಹಳ್ಳಿ ಮಾರ್ಗವಾಗಿ ಮತ್ತು ಚಾಮರಾಜನಗರ ಕಡೆಯಿಂದ ವೀರನಪುರ, ನಂಜೇದೇವನಪುರ, ಹರವೆ, ಮಲೆಯೂರು ಮಾರ್ಗವಾಗಿ ಕನಕಗಿರಿ ತಲುಪಬಹುದು. ಗಿರಿಯಲ್ಲಿ ಮೂಲ ಸೌಕರ್ಯಗಳಿವೆ. ಬೆಟ್ಟವನ್ನು ಏರುತ್ತಲೇ ಅಹಿಂಸೆಯ ಮಹತ್ವ ಸಾರಿದ ಜೈನ ತೀರ್ಥಂಕರ ದರ್ಶನವಾಗುತ್ತದೆ. ಮನಶಾಂತಿ ಬಯಸುವವರಿಗೆ ಹೇಳಿ ಮಾಡಿಸಿದ ಸ್ಥಳ. ನಮ್ಮ ನಡುವೆ ಇರುವ ಜೈನ ಧರ್ಮದ ಪರಿಚಯವಾಗಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ